ಮಡಿಕೇರಿ, ಜೂ.28: ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ಜಾರಿಗೆ ಬಂದು ಒಂದು ವರ್ಷ ಆಗಿದ್ದು, ಈ ಒಂದು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಬದಲಾವಣೆ ತಂದಿದೆ ಸರಕು ಮತ್ತು ಸೇವಾ ತೆರಿಗೆ ವಿಭಾಗದ ಜಂಟಿ ಆಯುಕ್ತರಾದ ರವಿಕಿರಣ ಅವರು ಹೇಳಿದ್ದಾರೆ. ನಗರದ ಖಾಸಗಿ ಹೊಟೇಲ್‍ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದಂತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಸರಕು ಮತ್ತು ಸೇವೆ ತೆರಿಗೆ ಎಂಬದು ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು ಇತರರ ಮೇಲೆ ನಂಬಿಕೆ ಇಟ್ಟಿರುವದಾಗಿದೆ. ಒಂದು ವರ್ಷದಲ್ಲಿ ತೆರಿಗೆ ಸಂಗ್ರಹವಾಗಿರುವದು ದೇಶದಲ್ಲಿ ಸಾಕಷ್ಟು ಬದಲಾವಣೆ ತಂದಿರುವದು ಹರ್ಷ ತಂದಿದೆ ಎಂದು ಅವರು ಹೇಳಿದರು. (ಮೊದಲ ಪುಟದಿಂದ) ತೆರಿಗೆಯನ್ನು ಸಕಾಲದಲ್ಲಿ ಪಾವತಿಸಬೇಕು. ತೆರಿಗೆ ಪಾವತಿಸುವಲ್ಲಿ ವಿಳಂಬ ಮಾಡಬಾರದು, ತೆರಿಗೆ ಪಾವತಿಸುವಲ್ಲಿ ನುಣಿಚಿ ಕೊಳ್ಳುವಂತಾಗಬಾರದು ಎಂದು ಅವರು ಸಲಹೆ ಮಾಡಿದರು.

ಸಹಾಯಕ ಆಯುಕ್ತೆ ಪಲ್ಲವಿ ಅವರು ಮಾತನಾಡಿ ಜಿಎಸ್‍ಟಿಯಿಂದ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಂಡಿದೆ. ಹಲವು ತಾಂತ್ರಿಕ ಸಮಸ್ಯೆಗಳ ನಡುವೆಯೂ ತೆರಿಗೆ ಸಂಗ್ರಹ ಹೆಚ್ಚಳವಾಗಲಿದೆ ಎಂದು ಅವರು ಹೇಳಿದರು.

ಜಿ.ಎಸ್.ಟಿ ಉಪ ಆಯುಕ್ತ ರಮೇಶ್ ಅವರು ಮಾತನಾಡಿ ಸರಕು ಮತ್ತು ಸೇವೆ ಪಾವತಿಸಲು ಯಾರೂ ಸಹ ಹಿಂದೆ ಬೀಳಬಾರದು. ಈ ಸಂಬಂಧ ಸದ್ಯದಲ್ಲಿಯೇ ವಿಚ್ಛಕ್ಷಣ ದಳ ಆರಂಭವಾಗಲಿದೆ ಎಂದು ತಿಳಿಸಿದರು.

ಹಲವು ತಾಂತ್ರಿಕ ಅಡೆತಡೆಗಳ ನಡುವೆಯೂ ಜಿ.ಎಸ್.ಟಿ ಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡುವದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತ ಪ್ರಧಾನ್ ಅವರು ಜಿ.ಎಸ್.ಟಿ ವ್ಯಾಪ್ತಿಯಲ್ಲಿ ಬರುವವರೆಲ್ಲರೂ ತೆರಿಗೆ ಪಾವತಿಸಬೇಕು. ಯಾವದೇ ಕಾರಣಕ್ಕೂ ಹಿಂಜರಿಯಬಾರದು ಎಂದು ಅವರು ಹೇಳಿದರು.

ಜಿಲ್ಲಾ ಅಧೀಕ್ಷಕ ವೆಂಕಟೇಶ್ ಅವರು ಮಾತನಾಡಿ ದೇಶದ ಅಭಿವೃದ್ಧಿಗೆ ತೆರಿಗೆಯನ್ನು ಕಡ್ಡಾಯವಾಗಿ ಪಾವತಿಸಬೇಕು ಎಂದು ಅವರು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್ ಅವರು ಜಿಎಸ್‍ಟಿ ಜಾರಿಯಾದ ನಂತರ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸುಧಾರಣೆ ಬಗ್ಗೆ ಹಲವು ಮಾಹಿತಿ ಪಡೆದರು. ಚೇಂಬರ್ ಆಫ್ ಕಾಮರ್ಸ್‍ನ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ಅವರು 20 ಲಕ್ಷ ವಹಿವಾಟು ಹೊಂದಿರದ ಹೋಂ ಸ್ಟೇಗಳ ಮೇಲೆ ಅನಧಿಕೃತವಾಗಿ ಜಿಎಸ್‍ಟಿ ಹೇರುವದು ಸರಿಯಲ್ಲ ಎಂದರು. ಹೊಟೇಲ್ ಮತ್ತು ರೇಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷÀ ನಾಗೇಂದ್ರ ಪ್ರಸಾದ್ ಅವರು ಹೊಟೇಲ್ ಮತ್ತು ರೇಸಾರ್ಟ್‍ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದು, ಇದನ್ನು ಕಡಿಮೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಲೆಕ್ಕ ಪರಿಶೋಧಕರಾದ ಅಬ್ದುಲ್ ರೆಹಮಾನ್, ಗೋಪಾಲಕೃಷ್ಣ, ಅಂತೋಣಿ ಹಾಗೂ ಹೊಟೇಲ್ ಮತ್ತು ವಾಣಿಜ್ಯೋದ್ಯಮಿಗಳು ಇತರರು ಪಾಲ್ಗೊಂಡಿದ್ದರು.