ಮಡಿಕೇರಿ, ಜೂ. 28: ಮಡಿಕೇರಿ ನಗರಸಭೆಯ ಅಂತಿಮ ಅವಧಿಯ ಸ್ಥಾಯಿ ಸಮಿತಿಗೆ ಇಂದು ಚುನಾವಣೆ ನಡೆಯಿತು. ಒಟ್ಟು 11 ಸ್ಥಾನಗಳಿಗೆ ಆಕಾಂಕ್ಷಿಗಳು ಹೆಚ್ಚಿದ್ದ ಕಾರಣ ಗೌಪ್ಯ ಮತದಾನ ನಡೆಯಿತು. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹಾಗೂ ಬಿಜೆಪಿ ಸದಸ್ಯ ಪಿ.ಡಿ. ಪೊನ್ನಪ್ಪ ಇವರುಗಳು ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವ ನಿಟ್ಟಿನಲ್ಲಿ ಚುನಾವಣೆಯ ಬದಲು ಹೊಂದಾಣಿಕೆ ಮೂಲಕ ಸ್ಥಾಯಿ ಸಮಿತಿ ರಚನೆಯಾಗಲಿ ಎಂದು ಆರಂಭದಲ್ಲಿ ಹೇಳಿದರಾದರೂ ಇದಕ್ಕೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಚುನಾವಣೆ ನಡೆಯಿತು.

ಬಿಜೆಪಿಯಿಂದ ಅನಿತಾ ಪೂವಯ್ಯ, ಎ.ಕೆ. ಲಕ್ಷ್ಮಿ, ಪಿ.ಡಿ. ಪೊನ್ನಪ್ಪ, ಕೆ.ಎಸ್. ರಮೇಶ್, ಸವಿತಾ ರಾಕೇಶ್, ಶಿವಕುಮಾರಿ, ಉಣ್ಣಿಕೃಷ್ಣ, ಕಾಂಗ್ರೆಸ್‍ನಿಂದ ಹೆಚ್.ಎಂ. ನಂದಕುಮಾರ್, ಜುಲೇಕಾಬಿ, ಪ್ರಕಾಶ್ ಆಚಾರ್ಯ, ಶ್ರೀಮತಿ ಬಂಗೇರ, ವೀಣಾಕ್ಷಿ, ತಜುಸುಂ, ಕಾಂಗ್ರೆಸ್ ತೊರೆದು ಜೆಡಿಎಸ್‍ನಲ್ಲಿ ಗುರುತಿಸಿಕೊಂಡ ಲೀಲಾ ಶೇಷಮ್ಮ, ಜೆಡಿಎಸ್‍ನ ಸಂಗೀತ ಪ್ರಸನ್ನ, ಎಸ್‍ಡಿಪಿಐನ ಅಮಿನ್ ಮೊಯ್ಸಿನ್, ಪೀಟರ್, ಮನ್ಸೂರ್, ನೀಮಾ ಅರ್ಶದ್ ಇವರುಗಳು ಸೇರಿದಂತೆ 11 ಸ್ಥಾನಕ್ಕೆ 19 ಮಂದಿ ಸ್ಪರ್ಧಿಸಿದ್ದರು. 24 ನಗರಸಭಾ ಸದಸ್ಯರೊಂದಿಗೆ ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಅವರುಗಳು ಕೂಡ ಮತ ಚಲಾಯಿಸಿದರು.

ನಗರಸಭಾ ಆಯುಕ್ತೆ ಶುಭಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಮತ ಎಣಿಕೆ ಸಂದರ್ಭ ಅಮೀನ್ ಮೊಯ್ಸಿನ್ (14 ಮತ) ಮನ್ಸೂರ್ (14), ಪೀಟರ್ (16), ಪಿ.ಡಿ. ಪೊನ್ನಪ್ಪ (15), ಸವಿತಾ ರಾಕೇಶ್ (14), ಸಂಗೀತಾ ಪ್ರಸನ್ನ (20), ಶ್ರೀಮತಿಬಂಗೇರ (18), ಲೀಲಾ ಶೇಷಮ್ಮ (22), ತಜಸುಂ(14), ವೀಣಾಕ್ಷಿ (21), ಉಣ್ಣಿಕೃಷ್ಣ (16) ಮತಗಳನ್ನು ಪಡೆದು ಜಯಗಳಿಸಿದರು.

ಇನ್ನುಳಿದಂತೆ ಅನಿತಾ ಪೂವಯ್ಯ (11), ಜುಲೇಕಾಬಿ (11), ಲಕ್ಷ್ಮಿ (11), ನಂದಕುಮಾರ್ (12), ನೀಮಾ ಹರ್ಷದ್ (13), ಪ್ರಕಾಶ್ ಆಚಾರ್ಯ (10), ಕೆ.ಎಸ್. ರಮೇಶ್ (13), ಶಿವಕುಮಾರಿ (12) ಮತಗಳನ್ನು ಪಡೆದು ಪರಾಭವಗೊಂಡರು. ಪ್ರತಿಯೊಬ್ಬ ಸದಸ್ಯರಿಗೆ 11 ಮತ ಚಲಾಯಿಸಲು ಅವಕಾಶವಿತ್ತು.