ವೀರಾಜಪೇಟೆ, ಜೂ. 28: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅರಸುನಗರದಲ್ಲಿರುವ ಸುಮಾರು 3 ಲಕ್ಷ ಗ್ಯಾಲನ್ ಸಾಮಥ್ರ್ಯದ ನಲ್ಲಿ ನೀರು ಶೇಖರಣಾ ಟ್ಯಾಂಕ್ ದುರಸ್ತಿಗೊಂಡಿದ್ದು ತಕ್ಷಣ ಸರಿಪಡಿಸುವಂತೆ ಕೊಡಗು ಜಿಲ್ಲಾ ಜನತಾದಳ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದ್ದಾರೆ.

ಅರಸುನಗರಕ್ಕೆ ಭೇಟಿ ನೀಡಿ ನೀರು ಶೇಖರಣಾ ಟ್ಯಾಂಕ್‍ನ್ನು ಖುದ್ದು ಪರಿಶೀಲಿಸಿದ ಸಂಕೇತ್, ಸುಮಾರು 40 ವರ್ಷಗಳ ಹಿಂದೆ ಈ ಟ್ಯಾಂಕ್‍ನ್ನು ಪಟ್ಟಣ ಪಂಚಾಯಿತಿಯಿಂದ ನಿರ್ಮಿಸಲಾಗಿದೆ. ವೀರಾಜಪೇಟೆಗೆ ನಲ್ಲಿ ನೀರು ಪೂರೈಸುವ ಮುಖ್ಯ ಟ್ಯಾಂಕ್ ಇದಾಗಿದ್ದು ಇದನ್ನು ದುರಸ್ತಿಪಡಿಸುವದಕ್ಕಿಂತಲೂ ಹೊಸ ಟ್ಯಾಂಕ್‍ನ್ನು ನಿರ್ಮಿಸುವದು ಒಳಿತಾಗಿದೆ. ಶೇಖರಣೆಗೊಂಡ ಶೇ. 40 ರಷ್ಟು ನೀರು ಸೋರಿಕೆಯಿಂದ ವ್ಯರ್ಥವಾಗುತ್ತಿದೆ. ಇದಕ್ಕಾಗಿ ಪಟ್ಟಣದ ಜನತೆಗೆ ಹೊಸ ಟ್ಯಾಂಕ್ ಸೌಲಭ್ಯದ ಅಗತ್ಯ ಇರುವದಾಗಿ ಹೇಳಿದರು.

ಪಕ್ಷದ ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್, ಕಾರ್ಯಕರ್ತರು ಹಾಗೂ ಅರಸುನಗರದ ನಿವಾಸಿಗಳು ಹಾಜರಿದ್ದರು.