ಮಡಿಕೇರಿ, ಜೂ. 28 : ಮಡಿಕೇರಿ ನಗರದಲ್ಲಿ ಬಿಗಡಾ ಯಿಸಿರುವ ಪಾರ್ಕಿಂಗ್ ಸಮಸ್ಯೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನೊಳಗೊಂಡು ಚರ್ಚಿಸಿ ಪರಿಹಾರ ಕೈಗೊಳ್ಳಲು ಸಭೆಯೊಂದನ್ನು ನಿಗದಿ ಮಾಡುವಂತೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೂಚಿಸಿದರು.ನಗರಸಭೆಯಲ್ಲಿಂದು ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳಾದ ಪಿ.ಡಿ. ಪೊನ್ನಪ್ಪ ಹಾಗೂ ಚುಮ್ಮಿ ದೇವಯ್ಯ ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ಬಗ್ಗೆ ಶಾಸಕರ ಗಮನ ಸೆಳೆದರು. ಈ ಸಂದರ್ಭ ಮಾತನಾಡಿದ ಶಾಸಕ ರಂಜನ್ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗುತ್ತಿದ್ದರೂ, ಸದಸ್ಯರು ಕಣ್ಣು ಮುಚ್ಚಿ ಕುಳಿತಿರುವಂತಿದೆ. ಆಯುಕ್ತರಿಗಂತು ಹೇಳಿ ಪ್ರಯೋಜನವಿಲ್ಲ. ಖಾಸಗಿ ಬಸ್ ನಿಲ್ದಾಣವನ್ನು ವೆಬ್ಸ್ ರಸ್ತೆ ಬಳಿ ನಿರ್ಮಿಸುವದು ಬೇಡ. ಸಂಚಾರ ವ್ಯವಸ್ಥೆಗೆ ತೊಂದರೆಯಾಗುತ್ತದೆ ಎಂದು ತಾನು ಹಲವು ಬಾರಿ ಮನವಿ ಮಾಡಿದರೂ, ಅದನ್ನು ಪರಿಗಣಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಡಲೇ ಸಭೆಯೊಂದನ್ನು ಕರೆದು ಎಸ್ಪಿ, ಡಿಸಿ ಅವರೊಂದಿಗೆ ಚರ್ಚಿಸಿ ಒಂದು ಬಾರಿ ಎಲ್ಲರೂ ಸೇರಿ ನಗರ ಸಂಚಾರ ಮಾಡೋಣ. ಆ ಮೂಲಕ ಪಾರ್ಕಿಂಗ್ ಸಮಸ್ಯೆಗೆ ಒಂದೊಳ್ಳೆಯ ಪರಿಹಾರೋಪಾಯ ಕಂಡುಕೊಳ್ಳೋಣ ಎಂದು ಅಪ್ಪಚ್ಚು ರಂಜನ್ ಹೇಳಿದರು.

ಖಾಸಗಿ ಬಸ್ ನಿಲ್ದಾಣ ಬಹು ವರ್ಷದ ಕನಸು ಅದಕ್ಕಾಗಿ ಸಾಕಷ್ಟು ಹಣ ವೆಚ್ಚ ಮಾಡಲಾಗಿದೆ ಎಂದರು. ಪ್ರಾಯೋಗಿಕವಾಗಿಯಾದರೂ ಖಾಸಗಿ ಬಸ್‍ಗಳನ್ನು ನೂತನ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲು ಶಾಸಕರು ಗಮನ ಹರಿಸಬೇಕೆಂದರು.

ಮಡಿಕೇರಿ ನಗರದಲ್ಲಿ ಸಂಚಾರಿ ಪೊಲೀಸರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುತ್ತಿದ್ದಾರೆ. ನೂತನ ಮಾರುಕಟ್ಟೆ ಮಳೆಯಿಂದಾಗಿ ನೀರು ತುಂಬಿ ಶಿಥಿಲಗೊಳ್ಳುತ್ತಿದೆ. ಕಾವೇರಿ ಹಾಲ್ ಬಳಿ ಹಾಗೂ ಜೂನಿಯರ್ ಕಾಲೇಜು ರಸ್ತೆಯಲ್ಲಿ ವಾಹನಗಳ ಅಸಮರ್ಪಕ ಪಾರ್ಕಿಂಗ್‍ನಿಂದಾಗಿ ತೊಂದರೆ ಯಾಗುತ್ತಿದೆ. ಈ ಬಗ್ಗೆ ನಗರಸಭೆ ಗಮನಹರಿಸುವಂತೆ ಸದಸ್ಯ ಟಿ.ಎಚ್. ಉದಯಕುಮಾರ್ ಒತ್ತಾಯಿಸಿದರು.

ಚುನಾವಣೆ ಹಿನ್ನೆಲೆ ಮೂರು ತಿಂಗಳಿಂದ ಸಭೆ ನಡೆಯದೆ ಮಡಿಕೇರಿ ನಗರದಲ್ಲಿ ನಗರಸಭೆಯಿಂದ ಕೆಲಸಗಳೇ ನಡೆಯುತ್ತಿಲ್ಲ ಯುಜಿಡಿಯಿಂದಾಗಿ ಜನ ಛೀಮಾರಿ ಹಾಕುತ್ತಿದ್ದಾರೆ ಎಂದು ಪಿ.ಡಿ. ಪೊನ್ನಪ್ಪ ಹೇಳಿದರು. ನಗರಸಭೆ ಮೇಲೆ ಅಧ್ಯಕ್ಷರಿಗೆ ಹಿಡಿತವಿಲ್ಲ. ಇದರಿಂದಾಗಿ ಯಾವದೇ ಕೆಲಸ ಗಳಾಗುತ್ತಿಲ್ಲ ಎಂದು ಕೆ.ಎಂ. ಗಣೇಶ್ ಆರೋಪಿಸಿದರು.