ಸುಂಟಿಕೊಪ್ಪ, ಜೂ. 28: ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಉಪಯುಕ್ತವಾದ ಕೆಎಸ್‍ಆರ್‍ಟಿ ಬಸ್ಸು ಮಾರ್ಗ ಬದಲಿಸಿರುವದರಿಂದ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ 1 ವರ್ಷದ ಹಿಂದೆ ನೂತನವಾಗಿ ಮಡಿಕೇರಿಯಿಂದ ಬೆಳಿಗ್ಗೆ 8 ಗಂಟೆಗೆ ಕೆಎಸ್‍ಆರ್‍ಟಿ ಬಸ್ ಮಕ್ಕಂದೂರು, ಹಾಲೇರಿ, ಹಟ್ಟಿಹೊಳೆ, ಮಾದಾಪುರ ಸುಂಟಿಕೊಪ್ಪ, ಕುಶಾಲನಗರ ಮಾರ್ಗವಾಗಿ ಮೈಸೂರಿಗೆ ತಲುಪಿ ನಂತರ ಸಂಜೆ ವಾಪಸು ಸುಂಟಿಕೊಪ್ಪಕ್ಕೆ 4.30ಕ್ಕೆ ಈ ಬಸ್ ಆಗಮಿಸಿ ಮಾದಾಪುರ ಮಾರ್ಗವಾಗಿ ತಲುಪುತ್ತಿತ್ತು. ಆದರೆ ಈತನ್ಮದ್ಯೆ ಕೆಎಸ್‍ಆರ್‍ಟಿಸಿ ಅಧಿಕಾರಿ ವರ್ಗದವರ ಚಿತಾವಣೆಯಿಂದ ಈ ಬಸ್ ಮಾರ್ಗ ಬದಲಿಸಿದ್ದು, ಶಾಲಾ ಮಕ್ಕಳು ಸಾರ್ವಜನಿಕರು ತೊಂದರೆಗೆ ಒಳಗಾಗಿದ್ದಾರೆ. ಮಡಿಕೇರಿಯಿಂದ ಮೈಸೂರಿಗೆ ಸಂಚರಿಸುವ ಈ ಬಸ್‍ನ ಮಾರ್ಗ ಬದಲಿಸಲಾಗಿದೆ. ಮೈಸೂರಿನಿಂದ ವಾಪಸು ಬರುವಾಗ ಕುಶಾಲನಗರ 7ನೇ ಹೊಸಕೊಟೆಗೆ ಬಂದು ಕೊಡಗರ ಹಳ್ಳಿಯಿಂದ ಸುಂಟಿಕೊಪ್ಪಕ್ಕೆ ಬಂದು ನೇರವಾಗಿ ಅಂದಗೋವೆ ಮಂಜಿಕೆರೆ ಕಾನ್‍ಬೈಲ್ ನಾಕೂರು ಗ್ರಾಮಕ್ಕಾಗಿ ಗುಂಡುಗುಟ್ಟಿಯಿಂದ ಮಾದಾಪುರಕ್ಕೆ ತೆರಳಿ ಮಡಿಕೇರಿಗೆ ಸಂಚರಿಸುತ್ತಿದೆ. ಇದರಿಂದ ಸಂಜೆ ವೇಳೆ 4.30ಕ್ಕೆ ಸುಂಟಿಕೊಪ್ಪದಿಂದ ಸ್ವಸ್ಥ ವಿಕಲ ಚೇತನ ಮಕ್ಕಳಿಗೆ, ಮಾದಾಪುರ, ಗರ್ವಾಲೆ, ಸೂರ್ಲಬ್ಬಿ, ಹಟ್ಟಿಹೊಳೆಗೆ ತೆರಳುವ ವಿಧ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಬಸ್ ಸೌಲಭ್ಯವಿಲ್ಲದೆ ಅನಾನುಕೂಲ ವಾಗಿದೆ. ಸರಕಾರ ಪ್ರಯಾಣಿಕರ ಹಿತ ದೃಷ್ಟಿಯಿಂದ ಸರಕಾರಿ ಬಸ್ ಸೌಲಭ್ಯ ಕಲ್ಪಿಸುತ್ತದೆ. ಆದರೆ ಯಾರದೊ ಪ್ರಭಾವಿಗಳ ಚಿತಾವಣೆಯಿಂದ ಜನರನ್ನು ತೊಂದರೆಗೆ ಸಿಲುಕಿಸುತ್ತಿರುವದು ಎಷ್ಟು ಸರಿ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಇದರ ಬಗ್ಗೆ ಸುಂಟಿಕೊಪ್ಪ ವಿಭಾಗದ ಸಾರ್ವಜನಿಕರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ. ಸುಂಟಿಕೊಪ್ಪದಿಂದ 3 ಖಾಸಗಿ ಬಸ್ ಸಂಚರಿಸುತ್ತಿದ್ದು, ಉಳಿದಂತೆ ಪ್ರಯಾಣಿಕರು ದುಪ್ಪಟ್ಟು ಹಣ ನೀಡಿ ಟ್ಯಾಕ್ಸಿಯನ್ನು ಅವಲಂಬಿಸಬೇಕಾಗಿದೆ. ಇದ್ದ ಒಂದು ಕೆಎಸ್‍ಆರ್‍ಟಿ ಬಸ್‍ನ ಮಾರ್ಗ ಬದಲಾವಣೆಯಿಂದ ಜನರು ಪರದಾಡುವಂತಾಗಿದೆ.