ಕೂಡಿಗೆ, ಜೂ. 27: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಗ್ರಾ.ಪಂ. ಅಧ್ಯಕ್ಷೆ ಭವ್ಯ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಮೊದಲಿಗೆ ಶುಚಿತ್ವ ಕಾಪಾಡುವದರ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಪೌರ ಕಾರ್ಮಿಕರು ಸಮರ್ಪಕವಾಗಿ ಸ್ವಚ್ಛ ಮಾಡದೆ, ಅಲ್ಲಲ್ಲಿ ಕಸದ ರಾಶಿಯನ್ನು ಬಿಟ್ಟಿದ್ದು, ಈ ವ್ಯವಸ್ಥೆಯನ್ನು ಸರಿಪಡಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಿ ಕೋಳಿ, ಮೀನು, ಕುರಿ ಮಾಂಸದ ಅಂಗಡಿಗಳನ್ನು ಜನವಲಯ ಪ್ರದೇಶ ಮತ್ತು ಶಾಲಾ ವ್ಯಾಪ್ತಿಯ 100 ಮೀಟರ್‍ಗಳ ಅಂತರದಲ್ಲಿ ನಡೆಸಲು ಅವಕಾಶ ನೀಡಬೇಕು. ಮಾಂಸದ ತ್ಯಾಜ್ಯಗಳನ್ನು ಗ್ರಾಮ ಪಂಚಾಯಿತಿ ಸೂಚಿಸಿರುವ ಸ್ಥಳಗಳಿಗೆ ವಿಲೇವಾರಿ ಮಾಡುವಂತೆ ಸೂಚಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಮುಳ್ಳುಸೋಗೆ ವೃತ್ತದ ಸಮೀಪದಲ್ಲಿಯೇ ಕುರಿ, ಕೋಳಿ, ಮೀನು ಮಾಂಸದ ಮಾರಾಟ ನಡೆಯುತ್ತಿದೆ. ಇದು ಸರಿಯಾದ ಕ್ರಮವಲ್ಲ.

ಮಾಂಸದ ತ್ಯಾಜ್ಯಗಳನ್ನು ಸುತ್ತಮುತ್ತ ಚೆಲ್ಲಿ ಡೆಂಗ್ಯುವಿನಂತಹ ಮಾರಕ ರೋಗಗಳು ಹರಡಲು ಕಾರಣವಾಗುತ್ತಿದೆ. ಈ ಹಿನ್ನೆಲೆ ಸ್ವಚ್ಛತೆಗೆ ಆದ್ಯತೆ ನೀಡಿ ಈಗ ಇರುವ ಮಾರಾಟ ಪ್ರದೇಶದಿಂದ 100 ಮೀಟರ್ ದೂರದಲ್ಲಿ ಈ ಮಾಂಸದ ಅಂಗಡಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಮಾತನಾಡಿದ ಸದಸ್ಯರಾದ ಅರುಣ ಚಂದ್ರ, ಜಗದೀಶ್, ಶಿವಾನಂದ, ಹರೀಶ್, ಸಂತೋಷ್, ಕುಮಾರಸ್ವಾಮಿ ಒತ್ತಾಯಿಸಿದರು.

ಬಹಳ ದಿನಗಳ ಬೇಡಿಕೆಯನ್ನು ಸಲ್ಲಿಸಿದ್ದ ನಾಗಮ್ಮನಮಂಟಿಯ ನಿವಾಸಿ ಮುಳುಗುತಜ್ಞ ರಾಮಕೃಷ್ಣ ಅವರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಸಂಪೂರ್ಣ ಒಪ್ಪಿಗೆ ನೀಡಿತು.

ಈ ಸಂದರ್ಭ ಅಧ್ಯಕ್ಷೆ ಭವ್ಯ ಮಾತನಾಡಿ, ಸಭೆಯ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಮುಂದಿನ ದಿನಗಳಲ್ಲಿ ಕೋಳಿ ಮತ್ತು ಕುರಿ ಮಾಂಸದ ಅಂಗಡಿಯ ಹರಾಜು ಪ್ರಕ್ರಿಯೆ ನಡೆಸಲಾಗುವದು. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕ್ರಮಕೈಗೊಳ್ಳಲಾಗುವದು ಎಂದರು.

ನಂತರ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ಮಾತನಾಡಿ, ಆಯಾ ವಾರ್ಡುಗಳಲ್ಲಿ ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡುವದರ ಜೊತೆಗೆ ಮೂಲಭೂತ ಸೌಲಭ್ಯ ಒದಗಿಸಲು ಸಿದ್ಧರಿರುತ್ತೇವೆ ಎಂದರು. ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ತಾರಾನಾಥ್ ಸರ್ವ ಸದಸ್ಯರು ಇದ್ದರು.