ಮಡಿಕೇರಿ, ಜೂ. 27: ಕೊಡಗು ಜಿಲ್ಲೆಯಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸುವ ವಿಚಾರವಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯವರ ನ್ಯಾಯಾಲಯದ ಆದೇಶದಲ್ಲಿನ ಅಂಶಗಳಂತೆ ಜಿಲ್ಲಾ ಮಟ್ಟದ ‘ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ’ ರಚಿಸಲಾಗಿದ್ದು. ಈ ಸಮಿತಿಯ ಪ್ರಥಮ ಸಭೆಯು ಮೇ 16 ರಂದು ನಡೆಸಲಾಗಿದೆ.

ಈ ಸಭೆಯಲ್ಲಿ ರಿವರ್ ರ್ಯಾಫ್ಟಿಂಗ್‍ನ ಸಂಬಂಧ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಈ ಸಮಿತಿ ಸಭೆಯ ತೀರ್ಮಾನ/ ನಡವಳಿಯ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ತಾ. 8 ರೊಳಗೆ ಲಿಖಿತ ರೂಪದಲ್ಲಿ ಸಲ್ಲಿಸಲು ತಿಳಿಸಲಾಗಿತ್ತು.

ಅದರಂತೆ, ಸ್ವೀಕೃತವಾದ ಆಕ್ಷೇಪಣೆಗಳನ್ನು ತಾ. 21 ರಂದು ನಡೆದ ಸಮಿತಿ ಸಭೆಯಲ್ಲಿ ಪರಿಶೀಲಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗಿದೆ.

ಅದರಂತೆ ಸೋಮವಾರಪೇಟೆ ತಾಲ್ಲೂಕು ನಂಜರಾಯಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾವೇರಿ ನದಿಯಲ್ಲಿ ದುಬಾರೆ ಮತ್ತು ವೀರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ ಬರ್ಪುಹೊಳೆಯಲ್ಲಿ ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವೆಸ್ಟ್‍ನೆಮ್ಮಲೆಯಲ್ಲಿ ರಿವರ್ ರ್ಯಾಫ್ಟಿಂಗ್ ನಡೆಸಲು ಸ್ಥಳ ನಿಗಧಿಪಡಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಸಭೆಯ ನಡಾವಳಿ ಹಾಗೂ ರಿವರ್ ರ್ಯಾಫ್ಟಿಂಗ್ ಪರವಾನಗಿ ಅರ್ಜಿ ನಮೂನೆ ಕೊಡಗು ಜಿಲ್ಲಾ ವೆಬ್‍ಸೈಟ್ hಣಣಠಿ://ತಿತಿತಿ.ಞoಜಚಿgu.ಟಿiಛಿ.iಟಿ ನಲ್ಲಿ ಪ್ರಕಟಿಸಲಾಗಿದೆ. ಆಸಕ್ತರು ಅರ್ಜಿಯನ್ನು ವೆಬ್‍ಸೈಟ್‍ನಿಂದ ಪಡೆದುಕೊಂಡು, ಭರ್ತಿಗೊಳಿಸಿ ಅಗತ್ಯ ದಾಖಲಾತಿಗಳೊಂದಿಗೆ ಜುಲೈ, 2 ರೊಳಗೆ ಸಮಿತಿಯ ಸದಸ್ಯ ಕಾರ್ಯದರ್ಶಿ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಸ್ಟೀವರ್ಟ್ ಹಿಲ್, ಮಡಿಕೇರಿ ಇವರಿಗೆ ಸಲ್ಲಿಸುವದು. ಹೆಚ್ಚಿನ ವಿವರಗಳಿಗೆ ಕೊಡಗು ಜಿಲ್ಲಾ ವೆಬ್‍ಸೈಟ್ ಅಥವಾ ದೂರವಾಣಿ ಸಂಖ್ಯೆ 08272-228580 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ.ಶ್ರೀವಿದ್ಯಾ ತಿಳಿಸಿದ್ದಾರೆ.