ಮಡಿಕೇರಿ, ಜೂ. 27: ಕೂಡಿಗೆ ಸೈನಿಕ ಶಾಲೆಯ ವಿದ್ಯಾರ್ಥಿ, ಮೂವತ್ತೊಕ್ಲು ಗ್ರಾಮದ ನಿವೃತ್ತ ಸೈನಿಕ ಪೂವಯ್ಯ ಎಂಬವರ ಪುತ್ರ ಒಂಭತ್ತನೇ ತರಗತಿಯ ಚಿಂಗಪ್ಪ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಚುರುಕು ಗೊಳಿಸಲಾಗಿದೆ.ಈಗಾಗಲೇ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿ ದಂತೆ, ಮೃತ ಚಿಂಗಪ್ಪನ ಉದರದಲ್ಲಿ ಲಭಿಸಿರುವ ಅಂಶಗಳನ್ನು ಕ್ರೋಢೀಕರಿಸಿ ಮೈಸೂರು ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ಪ್ರಯೋಗಾಲ ಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಕೆ. ಜಗದೀಶ್ ಖಚಿತಪಡಿಸಿದ್ದಾರೆ.ಮೃತ ಚಿಂಗಪ್ಪ ಶವದ ಮರಣೋತ್ತರ ಪರೀಕ್ಷೆಯನ್ನು ತಜ್ಞ ವೈದ್ಯರಾದ ಡಾ. ಯೋಗೇಶ್ ನೆರವೇರಿಸಿದ್ದು, ಅವರು ತಮ್ಮ ಅಭಿಪ್ರಾಯದೊಂದಿಗೆ ಪ್ರಯೋಗಾಲ ಯಕ್ಕೆ ಎಲ್ಲವನ್ನು ಕಳುಹಿಸಿ ಕೊಟ್ಟಿರುವದಾಗಿ ಡಾ. ಜಗದೀಶ್ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.ಜಿಲ್ಲಾಧಿಕಾರಿ ನುಡಿ: ಈ ಸಂಬಂಧ ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಬಳಿ ಪ್ರತಿಕ್ರಿಯೆ ಬಯಸಿದಾಗ, ವಿದ್ಯಾರ್ಥಿ ಚಿಂಗಪ್ಪ ಸಾವಿಗೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಿರುವ ಅಂಶಗಳನ್ನು ಶೀಘ್ರ ತಪಾಸಣೆಗೊಳಪಡಿಸಿ ವರದಿ ನೀಡಲು ಕೋರಿರುವದಾಗಿ ನುಡಿದರು. ಅಲ್ಲದೆ ಪೊಲೀಸ್ ತನಿಖೆ

(ಮೊದಲ ಪುಟದಿಂದ) ಸಮರ್ಪಕವಾಗಿ ನಡೆಯುತ್ತಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿರುವದಾಗಿಯೂ ಮಾರ್ನುಡಿದರು. ವರದಿ ಬಾರದ ಹೊರತು ಮತ್ತು ಪೊಲೀಸ್ ತನಿಖೆಯ ಪ್ರಾಥಮಿಕ ಹಂತದಲ್ಲಿ ಈಗಲೇ ಏನನ್ನೂ ಹೇಳುವದು ಕಷ್ಟವೆಂದು ಶ್ರೀವಿದ್ಯಾ ಸ್ಪಷ್ಟಪಡಿಸಿದರು.

ಎಸ್ಪಿ ಪ್ರತಿಕ್ರಿಯೆ: ವಿದ್ಯಾರ್ಥಿ ಚಿಂಗಪ್ಪ ಸಾವಿನ ಕುರಿತು ಈಗಾಗಲೇ ಕೂಡಿಗೆ ಸೈನಿಕ ಶಾಲೆಯ ಮುಖ್ಯಸ್ಥರು ಸೇರಿದಂತೆ, ಆತ ಸ್ನಾನಗೃಹದಲ್ಲಿ ಬಿದ್ದಿದ್ದ ಸಂದರ್ಭ ಮೊದಲು ನೋಡಿದವರು, ಬಳಿಕ ಆಸ್ಪತ್ರೆಗೆ ಸಾಗಿಸಿದವರು, ಘಟನೆಯ ಪ್ರತ್ಯಕ್ಷದರ್ಶಿಗಳು ಇತ್ಯಾದಿ ಕುರಿತು ಕೂಲಂಕಷ ತನಿಖೆಯ ಹಂತದಲ್ಲಿದೆ ಎಂಬದಾಗಿ ಎಸ್ಪಿ ಪಿ. ರಾಜೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.

ಸೈನಿಕ ಶಾಲೆಯ ವಿದ್ಯಾರ್ಥಿಗಳು ಅಪ್ರಾಪ್ತರಿದ್ದು, ಮಕ್ಕಳ ಹೇಳಿಕೆ ಪಡೆಯುವ ವೇಳೆ ಮನಸ್ಸಿನ ಮೇಲೆ ದುಷ್ಪರಿಣಾಮಗಳು ಬೀರದಂತೆ, ಮಕ್ಕಳ ತರಗತಿ ಅಧ್ಯಾಪಕರು ಹಾಗೂ ಮೇಲ್ವಿಚಾರಕರ ಸಮಕ್ಷಮ ತನಿಖಾಧಿಕಾರಿಗಳು ಕ್ರಮವಹಿಸ ಬೇಕಿದ್ದು, ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ಮುಂದುವರಿದಿದೆ ಎಂದು ರಾಜೇಂದ್ರ ಪ್ರಸಾದ್ ಸ್ಪಷ್ಟಪಡಿಸಿದರು.

ಶಾಸಕ ರಂಜನ್ ಹೇಳಿಕೆ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಇಂದು ಕೂಡಿಗೆ ಸೈನಿಕ ಶಾಲೆಗೆ ಖುದ್ದು ಭೇಟಿ ನೀಡಿ, ಶಾಲೆಯ ಪ್ರಾಂಶುಪಾಲರು, ಮೃತ ವಿದ್ಯಾರ್ಥಿ ಚಿಂಗಪ್ಪ ಕಲಿಯುತ್ತಿದ್ದ ತರಗತಿ ಶಿಕ್ಷಕರು ಹಾಗೂ ಮೃತನ ಸಹಪಾಠಿ ವಿದ್ಯಾರ್ಥಿಗಳೊಂದಿಗೆ ಘಟನೆ ಬಗ್ಗೆ ಅಭಿಪ್ರಾಯ ಪಡೆದಿದ್ದಾಗಿ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ಇದು ತೀರಾ ಸೂಕ್ಷ್ಮ ಘಟನೆಯಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದಿಂದ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಚಿಂಗಪ್ಪ ಸಾವಿನ ಬಗ್ಗೆ ನಿಖರವಾಗಿ ತಿಳಿಯುವದು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಕೂಡಿಗೆ ವರದಿ: ವಿದ್ಯಾರ್ಥಿ ಯೋರ್ವನ ನಿಗೂಢ ಸಾವಿಗೆ ಸಂಬಂಧಿಸಿದಂತೆ, ತನಿಖಾಧಿಕಾರಿ ಕ್ಯಾತೇಗೌಡ ಅವರ ತಂಡ ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಇಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೈನಿಕ ಶಾಲೆಗೆ ಭೇಟಿ ನೀಡಿ ಮೂರು ಗಂಟೆಗಳ ಕಾಲ ಮೃತ ವಿದ್ಯಾರ್ಥಿಯ ದೇಹ ಬಿದ್ದಿದ್ದ ಶೌಚಾಲಯ, ಪ್ರಯೋಗಾಲಯ ಕೊಠಡಿಗೆ ತೆರಳಿ ಪರಿಶೀಲನೆ ನಡೆಸಿದರು.

ನಂತರ ಪ್ರಯೋಗಾಲಯದ ಶಿಕ್ಷಕಿಯೊಂದಿಗೆ ಹಂತ ಹಂತವಾಗಿ ಮೃತ ವಿದ್ಯಾರ್ಥಿಯ ಬಗ್ಗೆ ವಿಚಾರಿಸಿದರು. ಈ ಪ್ರಕರಣದಲ್ಲಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ದ ಶಿಕ್ಷಕರಿಂದ ಮಾಹಿತಿ ಪಡೆದು, ಶಾಲಾ ಪ್ರಾಂಶುಪಾಲರು, ಉಪಪ್ರಾಂಶುಪಾಲ, ಆಡಳಿತ ವರ್ಗದ ಅಧಿಕಾರಿ ಗಳೊಂದಿಗೆ ಮೃತ ವಿದ್ಯಾರ್ಥಿಯ ಬಗ್ಗೆ ಸಮಗ್ರ ಮಾಹಿತಿ ಪಡೆದರು. ಅಲ್ಲದೆ, ಮೃತ ಚಿಂಗಪ್ಪನೊಂದಿಗೆ ಇರುತ್ತಿದ್ದ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದು, ಮೃತ ಚಿಂಗಪ್ಪನ ತಂದೆ ಪೂವಪ್ಪ ಅವರೊಂದಿಗೂ ಮಾತನಾಡಿದರು.

ಚಿಂಗಪ್ಪ ಮೃತಪಟ್ಟ ವಿಚಾರವನ್ನು ಶಾಲಾ ಶಿಕ್ಷಕರು ತÀನಗೆ ಮೊದಲೇ ತಿಳಿಸಬೇಕಿತ್ತು ಎಂದು ಚಿಂಗಪ್ಪನ ತಂದೆ ಪೂವಪ್ಪ ಆರೋಪಿಸಿದರು. ಈ ಸಂದರ್ಭ ಚಿಕ್ಕಪ್ಪ ಗಣಪತಿ, ಗ್ರಾಮದ ಇಬ್ಬರ ಸಮ್ಮಖದಲ್ಲಿ ಈ ಎಲ್ಲಾ ವಿಚಾರಣೆಗಳು ನಡೆದವು.

ಶಾಸಕರ ಸಮ್ಮುಖ ಮತ್ತು ಮೃತ ವಿದ್ಯಾರ್ಥಿಯ ಪೋಷಕರ ಸಮ್ಮುಖದಲ್ಲಿ ಡಿವೈಎಸ್‍ಪಿ ಮುರುಳೀಧರ್ ಹಾಗೂ ತನಿಖಾಧಿಕಾರಿ ಕ್ಯಾತೇಗೌಡ ಹೇಳಿಕೆ ಪಡೆದರು. ಶಾಲಾ ಪ್ರಾಂಶುಪಾಲ ಆರ್.ಆರ್. ಲಾಲ್ ಹಾಗೂ ಉಪ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.