ಸಿದ್ದಾಪುರ, ಜೂ. 27: ಮಾಲ್ದಾರೆಯ ವ್ಯಾಪ್ತಿಯಲ್ಲಿ ಕಳೆದ 5 ದಿನಗಳ ಹಿಂದೆಯಷ್ಟೇ ಹುಲಿ ಜಾನುವಾರುವೊಂದನ್ನು ಸಾಯಿಸಿ ತಿಂದಿರುವ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ವ್ಯಾಘ್ರ ಹಸುವೊಂದರ ಮೇಲೆ ಧಾಳಿ ನಡೆಸಿ ಸಾಯಿಸಿ ತಿಂದಿರುವ ಘಟನೆ ಬಾಡಗ ಬಾಣಂಗಾಲ ಗ್ರಾಮದಲ್ಲಿ ನಡೆದಿದೆ.

ಸಿದ್ದಾಪುರ ಸಮೀಪದ ಬಿ.ಬಿ.ಟಿ.ಸಿ. ಕಂಪೆನಿಗೆ ಸೇರಿದ ಬಾಡಗ ಬಾಣಂಗಾಲ ಕಾಫಿ ತೋಟದೊಳಗೆ ಮೇಯಲು ತೆರಳಿದ್ದ ಎತ್ತನ್ನು ಹುಲಿರಾಯ ಬೇಟೆಯಾಡಿ ಸಾಯಿಸಿ ಅರ್ಧಭಾಗ ತಿಂದಿದೆ. ಕಾರ್ಮಿಕರು ಮಂಗಳವಾರದಂದು ತೋಟದ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಜಾನುವಾರು ಸತ್ತಿರುವ ದುರ್ವಸನೆಯಿಂದ ವಿಚಾರ ತಿಳಿದು ಬಂದಿದೆ.

ಇತ್ತೀಚೆಗೆ ಮಾಲ್ದಾರೆ-ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟದೊಳಗೆ ಹುಲಿಯು ಸುತ್ತಾಡುತ್ತಿದ್ದು ಜನವಸತಿ ಪ್ರದೇಶದಲ್ಲಿ ಕೂಡ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿದೆ. ಅಲ್ಲದೇ ನಿರಂತರವಾಗಿ ಜಾನುವಾರುಗಳನ್ನು ಬೇಟೆಯಾಡಿ ಸಾಯಿಸಿ ತಿಂದು ಅಟ್ಟಹಾಸ ಮೆರೆಯುತ್ತಿದೆ. ಕಾಫಿ ತೋಟಗಳಲ್ಲಿ ಹುಲಿಯ ಚಲನವಲನ ಕಂಡು ಹಿಡಿಯಲು ಇತ್ತೀಚೆಗೆ ಅಳವಡಿಸಿದ ಕ್ಯಾಮೆರಾಗಳಲ್ಲಿ ಹುಲಿಯ ಚಿತ್ರ ಸೆರೆಯಾಗುತ್ತಿಲ್ಲ.

ಈ ಹಿನ್ನೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದೆ. ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. -ವಾಸು