*ಗೋಣಿಕೊಪ್ಪಲು, ಜೂ. 29: ತಿತಿಮತಿ, ಮರೂರು ಆಶ್ರಮ ಶಾಲೆ ಮತ್ತು ವಿದ್ಯಾರ್ಥಿನಿ ನಿಲಯಕ್ಕೆ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಭೇಟಿ ನೀಡಿ ಪರಿಶೀಲಿಸಿದರು.

ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಕ್ರಮ ಕೈಗೊಳ್ಳಬೇಕು ಮತ್ತು ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಮೇಲ್ವಿಚಾರಕರು ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭ ಮಕ್ಕಳನ್ನು ಇಲ್ಲಿನ ಸಮಸ್ಯೆ ಹಾಗೂ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದಾಗ ವಿದ್ಯಾರ್ಥಿಗಳು ಸೋಲಾರ್ ಅಳವಡಿಸಿದರೂ ಬಿಸಿನೀರು ಬಾರದೆ ಇರುವದನ್ನು ಮತ್ತು ಟಿವಿಗೆ ರಿಚಾರ್ಜ್ ಮಾಡದೇ ಇರುವದರಿಂದ ಭಾನುವಾರ ಟಿವಿ ನೋಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ಶಾಲಾ ಆವರಣವನ್ನು ಶುಚಿಯಾಗಿಟ್ಟುಕೊಳ್ಳಲು ಮತ್ತು ಆಹಾರ ಪದಾರ್ಥಗಳು ಕೆಡದಂತೆ ಸಂರಕ್ಷಿಸಿಕೊಳ್ಳಲು ಸಲಹೆ ನೀಡಿದರು.

ಆಶ್ರಮ ಶಾಲಾ ಶಿಕ್ಷಕರು ಬೆಳಗ್ಗೆ 9 ಗಂಟೆಗೆ ಹಾಜರಾದರೆ ಸಂಜೆ 6 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಬೇಕಾಗಿದೆ. ದೂರದಿಂದ ಬರುವ ಶಿಕ್ಷಕರಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಇರುವದಿಲ್ಲ. ಹೀಗಾಗಿ ಸಮಯವನ್ನು ಕಡಿತಗೊಳಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.

ವಿದ್ಯಾರ್ಥಿನಿ ನಿಲಯದಲ್ಲಿ ಮೇಲ್ವಿಚಾರಕರೊಂದಿಗೆ ಸಮಸ್ಯೆಗಳನ್ನು ಆಲಿಸಿ ಮತ್ತು ವಿವಿಧ ಸೌಕರ್ಯಗಳು ಬೇಕಾದಲ್ಲಿ ಮಾಹಿತಿ ನೀಡುವಂತೆ ತಿಳಿಸಿದರು. ಸಮಸ್ಯೆಗಳಿದ್ದಲ್ಲಿ ಅಧಿಕಾರಿಗಳನ್ನು ವಸತಿ ನಿಲಯಕ್ಕೆ ಕರೆಸಿ ಸಭೆ ನಡೆಸುವ ಮೂಲಕ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವದು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಮಕ್ಕಳಿಗೆ ನೇರವಾಗಿ ನೀಡುವ ಮೂಲಕ ಪಾರದರ್ಶಕತೆ ಕಾಪಾಡಿಕೊಳ್ಳಬೇಕು. ನಿಲಯದ ಆವರಣದ ಸುತ್ತ ಶುಚಿತ್ವ ಮತ್ತು ಭದ್ರತಾ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು ಎಂದು ಸಿ.ಕೆ. ಬೋಪಣ್ಣ ಸಲಹೆ ನೀಡಿದರು.

ಈ ಸಂದರ್ಭ ಜಿ.ಪಂ. ಸದಸ್ಯೆ ಪಂಕಜ, ತಿತಿಮತಿ ಗ್ರಾ.ಪಂ. ಅಧ್ಯಕ್ಷ ಹೆಚ್.ಇ. ಶಿವಕುಮಾರ್ ಹಾಜರಿದ್ದರು.

- ಎನ್.ಎನ್. ದಿನೇಶ್