ಸೋಮವಾರಪೇಟೆ, ಜೂ. 29: ರಾಜ್ಯ ಸರ್ಕಾರ ಮರಣ ಮತ್ತು ನಿವೃತ್ತಿ ಉಪದಾನವನ್ನು ಕೇಂದ್ರ ಸರ್ಕಾರದ ಮಾದರಿಯಲ್ಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿರುವ ರಾಜ್ಯ ಹೊಸ ಪಿಂಚಣಿ ಯೋಜನೆ ನೌಕರರ ಸಂಘ, ತಪ್ಪಿದಲ್ಲಿ ಸಂಘದ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವದು ಎಂದು ಎಚ್ಚರಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ. ಸತೀಶ್, ಎನ್.ಪಿ.ಎಸ್. ನೌಕರರ ಸಂಘವು ಈಗಾಗಲೇ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಲವಾರು ಹೋರಾಟಗಳನ್ನು ನಡೆಸಿದ್ದು, ಪ್ರಸ್ತುತ ಸರ್ಕಾರವು ನಿವೃತ್ತಿ ಹಾಗೂ ಮರಣ ಉಪದಾನ ಮತ್ತು ಕುಟುಂಬ ಪಿಂಚಣಿಯನ್ನು ಏ. 1 ರ 2018 ರಿಂದ ಜಾರಿಗೊಳಿಸಿದೆ. ಈ ಮಧ್ಯೆ ಎನ್‍ಪಿಎಸ್ ನೌಕರರ ಖಾತೆ ಯಲ್ಲಿರುವ ತಮ್ಮ ಪಾಲಿನ ವಂತಿಕೆಯ ಶೇ. 25 ರಷ್ಟನ್ನು ಅನಿವಾರ್ಯ ಸಂದರ್ಭದಲ್ಲಿ ಹಿಂಪಡೆಯುವ ಕುರಿತಂತೆ ಆದೇಶ ನೀಡಿದ್ದು, ಸರ್ಕಾರದ ಈ ಕ್ರಮ ಸಮಸ್ತ ನೌಕರರಿಗೆ ಹತಾಶೆಯನ್ನು ಉಂಟು ಮಾಡಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಮರಣ ಮತ್ತು ನಿವೃತ್ತಿ ಉಪದಾನವನ್ನು ಕೇಂದ್ರ ಸರ್ಕಾರದ ಮಾದರಿಯಲ್ಲೇ ಜಾರಿ ಗೊಳಿಸಬೇಕು. ಮರಣ ಹೊಂದಿರುವ ನೌಕರರ ಅವಲಂಬಿತರಿಗೆ ಕುಟುಂಬ ಪಿಂಚಣಿ ನೀಡಲು ಪ್ರಸಕ್ತ ಇರಿಸಿರುವ ಷರತ್ತನ್ನು ಮಾರ್ಪಾಡಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್. ನವೀನ್ ಕುಮಾರ್, ಖಜಾಂಚಿ ಟಿ.ಆರ್. ಪ್ರಭು, ನಿರ್ದೇಶಕ ಯು.ಆರ್. ಪೊನ್ನಪ್ಪ ಉಪಸ್ಥಿತರಿದ್ದರು.