ಮಡಿಕೇರಿ, ಜೂ. 29: ಅಂಗನವಾಡಿ ಕೇಂದ್ರಗಳ ಉಸ್ತುವಾರಿ ಯನ್ನು ಗ್ರಾಮ ಪಂಚಾಯಿತಿಗಳಿಗೆ ಒಪ್ಪಿಸುವದನ್ನು ವಿರೋಧಿಸಿ, ತಮ್ಮ ವಿವಿಧ ಬೇಡಿಕೆಗಳ ಜಾರಿಗೆ ಆಗ್ರಹಿಸಿ ಜಿಲ್ಲೆಯ ಅಂಗನವಾಡಿಗಳ ಕಾರ್ಯಕರ್ತೆಯರು ಮತ್ತು ಸಹಾಯಕಿ ಯರು ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ಮೈದಾನದಿಂದ ಪ್ರತಿಭಟನಾಮೆರವಣಿಗೆ ನಡೆಸಿದ ಕಾರ್ಯಕರ್ತೆಯರು, ವಿವಿಧ ಬೇಡಿಕೆಗಳ ಅನುಷ್ಠಾನಕ್ಕೆ ಒತ್ತಾಯಿಸಿ ಜಿಲ್ಲಾ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮನವಿಯೊಂದಿಗೆ ಸರಕಾರದ ಗಮನ ಸೆಳೆದರು.

ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರ ಖಾಲಿ ಹುದ್ದೆಗಳನ್ನು ತುಂಬುವದು, ಶಾಲೆಗಳಲ್ಲಿ ಮಿನಿ ಅಂಗನವಾಡಿ ಯೋಜನೆಗೆ ಅಸಮಾಧಾನ, ವೀರಾಜಪೇಟೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ನಿಯೋಜನೆ ಇತ್ಯಾದಿ ಬೇಡಿಕೆಗಳನ್ನು ಮಂಡಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿವಿಧ ಸೌಲಭ್ಯಗಳನ್ನ ಸರಕಾರಿ ನೌಕರರಂತೆ, ಅಂಗನವಾಡಿ ಕಾರ್ಯಕರ್ತೆಯರಿಗೂ ಕಲ್ಪಿಸುವಂತೆ ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷೆ ಕಾವೇರಮ್ಮ, ಕಾರ್ಯದರ್ಶಿ ಸುಮಿತ್ರಾ, ಪದಾಧಿಕಾರಿಗಳಾದ ಜಮುನಾ, ಬಾಗೀರಥಿ, ಸಾವಿತ್ರಿ, ಸರೋಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.