ಕುಶಾಲನಗರ, ಜೂ.29 : ಕುಶಾಲನಗರ ಹೋಬಳಿಯ ಚಿಕ್ಕ ಅಳುವಾರದಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ 2018-19ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ಜುಲೈ 2 ರಂದು ಕೇಂದ್ರದಲ್ಲಿ ‘ಕ್ಯಾಂಪಸ್ ನೋಡ ಬನ್ನಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಪ್ರಭಾರ ನಿರ್ದೇಶಕ ಪ್ರೊ.ಬಿ.ಹೆಚ್.ಶೇಖರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕಳೆದ ಐದು ವರ್ಷಗಳಿಂದ ಕೊಡಗು, ದಕ್ಷಿಣ ಕನ್ನಡ, ಮೈಸೂರು, ಹಾಸನ ಹಾಗೂ ರಾಜ್ಯದ ಇನ್ನಿತರೆ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ ನೆರೆ ರಾಜ್ಯಗಳ ವಿದ್ಯಾರ್ಥಿಗಳಿಗೂ ಕೇಂದ್ರದಲ್ಲಿ ಉನ್ನತ ಶಿಕ್ಷಣದ ಸೌಲಭ್ಯವನ್ನು ಕೇಂದ್ರ ಯಶಸ್ವಿಯಾಗಿ ನೀಡುತ್ತಾ ಬಂದಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರು ಕ್ಯಾಂಪಸ್‍ಗೆ ನೇರವಾಗಿ ಭೇಟಿ ನೀಡಿ, ಅಳುವಾರ ಕೇಂದ್ರದಲ್ಲಿ ಈಗಾಗಲೇ ಲಭ್ಯವಿರುವ ವಿವಿಧ ವಿಭಾಗಗಳಲ್ಲಿನ ಶೈಕ್ಷಣಿಕ ಸೌಲಭ್ಯಗಳು, ಸಂಶೋಧನೆ, ನೂತನವಾಗಿ ಪ್ರಾರಂಭವಾಗುತ್ತಿರುವ ಕೋರ್ಸ್‍ಗಳ ವಿವರ ಹಾಗೂ ಸ್ನಾತಕೋತ್ತರ ಪ್ರವೇಶಾತಿ ಸೇರಿದಂತೆ ಇನ್ನಿತರ ಎಲ್ಲಾ ಮಾಹಿತಿಗಳನ್ನು ಪಡೆದುಕೊಳ್ಳುವದಕ್ಕೆ ಈ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.

ಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಕೋರ್ಸ್‍ಗಳನ್ನು ಅಧ್ಯಯನ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳು, ಯಾವದೇ ವಿಭಾಗಗಳಿಗೆ ನೇರವಾಗಿ ಭೇಟಿ ನೀಡಿ, ಅಲ್ಲಿನ ಬೋಧಕ ವೃಂದದೊಂದಿಗೆ ನೇರ ಸಮಾಲೋಚನೆ ನಡೆಸಿ ತಮಗೆ ಸೂಕ್ತವೆನಿಸಿದ ವಿಭಾಗವನ್ನು ಆಯ್ಕೆ ಮಾಡಿಕೊಂಡು ಸ್ಥಳದಲ್ಲಿಯೇ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದರು.

ಜುಲೈ 2 ರ ಬೆಳಿಗ್ಗೆ 11 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ.ಸಿ.ಕೆ.ಕಿಶೋರ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉದ್ಘಾಟಿಸಲಿದ್ದಾರೆ. ಕುಲಸಚಿವ ಡಾ.ಬಿ.ಎಸ್.ನಾಗೇಂದ್ರ ಪ್ರಕಾಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಆಧುನೀಕೃತ ಪ್ರಯೋಗಾಲಯ, ಅಂತರ್ ಕಾಲೇಜು ಕ್ರೀಡಾ ಚಟುವಟಿಕೆಗಳು, ವಿದ್ಯಾರ್ಥಿನಿಲಯ, ಕ್ಯಾಂಟೀನ್ ಹಾಗೂ ವಾಹನ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾ ಗಳನ್ನು ಕೂಡ ಅಳವಡಿಸಲಾಗಿದೆ. ಪೋಷಕರು ತಮ್ಮ ಮಕ್ಕಳ ಉತ್ತಮ ಶೈಕ್ಷಣಿಕ ಭವಿಷ್ಯಕ್ಕಾಗಿ ನಮ್ಮ ಸ್ನಾತಕೋತ್ತರ ಕೇಂದ್ರದ ಸದುಪಯೋಗ ಪಡಿಸಿಕೊಳ್ಳುವಂತೆ ಅವರು ಕೋರಿದರು. ಹೆಚ್ಚಿನ ಮಾಹಿತಿಗಾಗಿ: 7022494921/08276-276485 ಸಂಪರ್ಕಿಸುವಂತೆ ಅವರು ತಿಳಿಸಿದರು. ಗೋಷ್ಠಿಯಲ್ಲಿ ಕೇಂದ್ರದ ಪ್ರಾಧ್ಯಾಪಕರುಗಳಾದ ಮಂಜುಳಾ ಶಾಂತರಾಂ, ಕೆ.ಸಿ. ಪುಷ್ಪಲತಾ, ಜಮೀರ್ ಅಹಮ್ಮದ್ ಇದ್ದರು.