ಸಿದ್ದಾಪುರ, ಜೂ. 29: ಕಾಡಾನೆ ಗಳ ಹಿಂಡು ಕಾಫಿ ತೋಟದಲ್ಲಿ ದಾಂಧಲೆ ನಡೆಸಿದ ಪರಿಣಾಮ ಅಪಾರ ನಷ್ಟ ಸಂಭವಿಸಿರುವ ಘಟನೆ ಇಂಜಲಗೆರೆಯಲ್ಲಿ ನಡೆದಿದೆ.

ಇಂಜಲಗೆರೆಯ ಕಾಫಿ ಬೆಳೆಗಾರ ಕಂಡ್ರತಂಡ ಕರುಂಬಯ್ಯ ಎಂಬವರ ಕಾಫಿ ತೋಟದಲ್ಲಿ ಕಳೆದ ಒಂದು ವಾರದಿಂದ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಕಾಫಿ ಗಿಡ ಸೇರಿದಂತೆ ತೆಂಗು, ಸಿಲ್ವರ್ ಗಿಡಗಳನ್ನು ದ್ವಂಸಗೊಳಿಸಿದೆ. ಬುಧವಾರ ರಾತ್ರಿಯಿಂದ ಬೆಳಗ್ಗಿನ ಜಾವದ ವರೆಗೆ ಕಾಡಾನೆಗಳ ಹಿಂಡು ತೋಟದಲ್ಲಿ ದಾಂಧಲೆ ನಡೆಸಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ ಎಂದು ಕರುಂಬಯ್ಯ ತಿಳಿಸಿದ್ದಾರೆ. ನಿರಂತರ ಕಾಡಾನೆ ಧಾಳಿಯಿಂದ ತೋಟಕ್ಕೆ ತೆರಳಲು ಕೂಡ ಸಾಧ್ಯವಾಗುತ್ತಿಲ್ಲ. ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದು, ಹಲವಾರು ಬಾರಿ ಅರಣ್ಯ ಇಲಾಖೆಗೆ ನಷ್ಟ ಪರಿಹಾರದ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಸಮರ್ಪಕವಾದ ಪರಿಹಾರ ಸಿಕ್ಕಿಲ್ಲ ಎಂದು ಅವರು ಆರೋಪಿಸಿದರು. ಗುಹ್ಯ ಗ್ರಾಮದಲ್ಲೂ ಕಾಡಾನೆ ಹಾವಳಿ ಮುಂದುವರೆದಿದ್ದು, ಕಕ್ಕಟ್ಟುಕಾಡುವಿನಲ್ಲಿ ಕಾಡಾನೆ ಹಿಂಡು ರಸ್ತೆ ಬದಿಯಲ್ಲೇ ದಾಂಧಲೆ ನಡೆಸಿದೆ. ಕಕ್ಕಟ್ಟುಕಾಡುವಿಗೆ ತೆರಳುವ ರಸ್ತೆಯ ಬದಿಯ ಬಿದಿರುಗಳು ಹಾಗೂ ಗಿಡಗಳನ್ನು ಮುರಿದಿದ್ದು, ರಾತ್ರಿಯಿಡಿ ರಸ್ತೆಯಲ್ಲಿ ದಾಂಧಲೆ ನಡೆಸಿದೆ. ಎ.ಟಿ ಕಾರ್ಯಪ್ಪ, ನರೇಂದ್ರ ನಾಯ್ಡು ಸೇರಿದಂತೆ ಹಲವರ ತೋಟಗಳಲ್ಲಿ ರಾತ್ರಿ ವೇಳೆ ಕಾಡಾನೆ ದಾಂಧಲೆ ನಡೆಸುತ್ತಿರುವ ಪರಿಣಾಮ ಅಪಾರ ನಷ್ಟ ಸಂಭವಿಸುತ್ತಿದೆ.

ಇತ್ತ ನೆಲ್ಲಿಹುದಿಕೇರಿ, ಬೆಟ್ಟದಕಾಡುವಿನಲ್ಲೂ ನಿರಂತರವಾಗಿ ಕಾಡಾನೆ ಹಾವಳಿ ಮುಂದುವರೆದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಾಡಾನೆ ತಮ್ಮ ತೋಟಕ್ಕೆ ಬರುತ್ತದೆ ಎಂದು ಭಯದಿಂದ ರಾತ್ರಿ ಪೂರ್ತಿ ಜಾಗರಣೆ ಇದ್ದು, ಪಟಾಕಿ ಸಿಡಿಸಿ ತಮ್ಮ ಬೆಳೆಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಕಾಫಿ ತೋಟಗಳಲ್ಲಿ ಹಲಸಿನ ಹಣ್ಣು, ಮಾವು ಸೇರಿದಂತೆ ರುಚಿಕರ ಆಹಾರವನ್ನು ಸೇವಿಸಲು ಕಾಡಾನೆ ಹಿಂಡುಗಳು ರಾತ್ರಿ ವೇಳೆ ಬೀಡುಬಿಡುತ್ತಿದೆ.

- ಎ.ಎನ್. ವಾಸು