ಉಗ್ರರ ವಿರುದ್ಧ ಕಾರ್ಯಾಚರಣೆ ಚರುಕು

ಪುಲ್ವಾಮ, ಜೂ. 29: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿರುವ ಕಟ್ಟಡವೊಂದರಲ್ಲಿ ಉಗ್ರರು ಅಡಗಿ ಕುಳಿತಿದ್ದು, ಉಗ್ರರನ್ನು ಸದೆಬಡಿಯಲು ಭಾರತೀಯ ಸೇನಾಪಡೆ ಕಾರ್ಯಾಚರಣೆ ಆರಂಭಿಸಿದೆ. ಪುಲ್ವಾಮ ಜಿಲ್ಲೆಯ ಛತಪೆÇರಾ ಎಂಬ ಪ್ರದೇಶದಲ್ಲಿರುವ ಕಟ್ಟಡಲ್ಲಿ ಉಗ್ರರು ಅಡಗಿ ಕುಳಿತಿರುವದಾಗಿ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಭದ್ರತಾ ಪಡೆಗಳು, ಕಟ್ಟಡದ ಸುತ್ತಲೂ ನಿಂತು ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿವೆ. ಪ್ರಸ್ತುತ ಸ್ಥಳದಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಭಾರೀ ಗುಂಡಿನ ಚಕಮಕಿಗಳು ನಡೆಯುತ್ತಿದ್ದು, ಈವರೆಗೂ ಯಾವದೇ ಸಾವು-ನೋವುಗಳು ಸಂಭವಿಸಿಲ್ಲ. ಇಂದು ಬೆಳಿಗ್ಗೆಯಷ್ಟೇ ಕುಪ್ವಾರ ಜಿಲ್ಲೆಯ ತ್ರೆಹ್ಗಾಮ್ ಎಂಬ ಪ್ರದೇಶದಲ್ಲಿ ಎನ್‍ಕೌಂಟರ್ ನಡೆಸಿದ್ದ ಭದ್ರತಾ ಪಡೆಗಳು, ಓರ್ವ ಉಗ್ರನನ್ನು ಹತ್ಯೆ ಮಾಡಿತ್ತು.

ಗ್ರೈನೇಡ್ ಧಾಳಿ : ಯೋಧರಿಗೆ ಗಾಯ

ಶ್ರೀನಗರ, ಜೂ. 29: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಗುಸ್ತು ತಿರುಗುತ್ತಿದ್ದ ಭಾರತೀಯ ಯೋಧರ ಮೇಲೆ ಉಗ್ರರು ಗ್ರೈನೇಡ್ ಧಾಳಿ ನಡೆಸಿದ್ದು ಪರಿಣಾಮ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಗ್ರೈನೇಡ್ ಧಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದು ಅವರನ್ನು ಕೂಡಲೇ ಸೇನಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ತಪ್ಪಿನಿಂದಲೇ ಬಿಜೆಪಿಗೆ ಸೋಲು

ಬೆಂಗಳೂರು, ಜೂ. 29: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತಕ್ಕೆ ಬೇಕಾದ ಅಗತ್ಯ ಸಂಖ್ಯೆಯನ್ನು ಪಡೆಯದಿರಲು ಪಕ್ಷದ ಸ್ವಯಂಕೃತ ಅಪರಾಧವೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ವಿಷಾದ ವ್ಯಕ್ತಪಡಿಸಿದ್ದಾರೆ. ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಬಿಎಸ್‍ವೈ, ವಿಧಾನಸಭೆ ಚುವಾವಣೆ ವೇಳೆ ಮೋದಿ ಅಲೆ ಇದ್ದರೂ ನಾವು ಕನಿಷ್ಟ 135 ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಮಿತ್ ಶಾ, ಬೇರೆ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳು ರಾಜ್ಯ ಪ್ರಚಾರ ಮಾಡಿದರು. ಆದರೂ ನಾವು 104 ಸ್ಥಾನ ಗೆದ್ದು ಪ್ರತಿಪಕ್ಷದಲ್ಲಿ ಕುತುಕೊಳ್ಳುವ ಪರಿಸ್ಥಿತಿ ಬಂದಿದೆ. ಈಗಲೂ ಕಾಲ ಮಿಂಚಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡಬಹುದು. ನಮ್ಮ 104 ಶಾಸಕರು ಮತ್ತು ಎಂಟು ಜನ ಪರಿಷತ್ ಸದಸ್ಯರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ಸರಕಾರ ಸ್ಥಿರವಾಗಿದೆ ಅಂದ್ರು ಸಿದ್ಧು

ಬೆಂಗಳೂರು, ಜೂ. 29: ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ನನಗೆ ಯಾವದೇ ಅಸಮಾಧಾನವೂ ಇಲ್ಲ ಮತ್ತು ಸರ್ಕಾರ ಸ್ಥಿರತೆ ಬಗ್ಗೆ ಅನುಮಾನವೂ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ಸ್ಥಿರತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಮತ್ತು ಬಜೆಟ್‍ಗೆ ವಿರೋಧ ವ್ಯಕ್ತಪಡಿಸಿದ ವೀಡಿಯೋ ಭಾರೀ ವಿವಾದಕ್ಕೆ ಕಾರಣವಾದ ಬಗ್ಗೆ ಮೊದಲ ಬಾರಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ನಾನು ಸಹಜವಾಗಿ ಮಾತನಾಡುತ್ತಿದ್ದಾಗ ವೀಡಿಯೋ ಮಾಡಿಕೊಳ್ಳಲಾಗಿದ್ದು, ಆ ವೀಡಿಯೋದಲ್ಲಿ ಹಿಂದಿನ ಹಾಗೂ ಮುಂದಿನ ದೃಶ್ಯ ಕತ್ತರಿಸಿ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧ ದೂರಿದರು. ಬಿಜೆಪಿ ಒಂದು ಕೋಮುವಾದಿ ಪಕ್ಷ. ಅದನ್ನು ಅಧಿಕಾರದಿಂದ ದೂರುವಿಡುವುದಕ್ಕಾಗಿ ಜೆಡಿಎಸ್ ಜೊತೆ ಕೈ ಜೋಡಿಸಿದ್ದೇವೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸಲಿದೆ. ಇದರಲ್ಲಿ ಸಂದೇಹವೇ ಬೇಡ ಎಂದು ಹೇಳಿದರು.

ಪಾಸ್‍ಪೋರ್ಟ್ ಆಪ್‍ಗೆ ಭಾರೀ ಬೆಂಬಲ

ನವದೆಹಲಿ, ಜೂ. 29: ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಕನಸಿನ ಪಾಸ್ಪೋರ್ಟ್ ಸೇವಾ ಮೊಬೈಲ್ ಆಪ್‍ಗೆ ಭಾರೀ ಜನಬೆಂಬಲ ವ್ಯಕ್ತವಾಗಿದ್ದು ಕೇವಲ 2 ದಿನಗಳಲ್ಲಿ 1 ಮಿಲಿಯನ್ ಜನರು ಡೌನ್ಲೋಡ್ ಮಾಡಿದ್ದಾರೆ. ಈ ಅಂಶವನ್ನು ಸ್ವತಃ ಸುಷ್ಮಾ ಸ್ವರಾಜ್ ಟ್ವಿಟರ್‍ನಲ್ಲಿ ಬಹಿರಂಗಪಡಿಸಿದ್ದಾರೆ. ದೇಶದ ಯಾವದೇ ಮೂಲೆಯಿಂದಲೂ ಪಾಸ್ಪೋರ್ಟ್‍ಗೆ ಅರ್ಜಿ ಸಲ್ಲಿಸಲು ನೆರವಾಗುವುದಕ್ಕೆ ಈ ಆಪ್‍ನ್ನು ತಯಾರಿಸಲಾಗಿತ್ತು. ತಾ. 27 ರಂದು 6ನೇ ಪಾಸ್ಪೋರ್ಟ್ ಸೇವಾ ದಿವಸ್ ಕಾರ್ಯಕ್ರಮದ ಅಂಗವಾಗಿ ಈ ಆಪ್‍ನ್ನು ಲೋಕಾರ್ಪಣೆಗೊಳಿಸಲಾಗಿತ್ತು. ಆಂಡ್ರಾಯ್ಡ್ ಹಾಗೂ ಐಒಎಸ್‍ಗಳಲ್ಲಿ ಆಪ್ ಲಭ್ಯವಿದ್ದು, ಪಾಸ್ಪೋರ್ಟ್‍ಗಾಗಿ ಅರ್ಜಿ ಸಲ್ಲಿಸುವದು, ಹಣ ಪಾವತಿಸುವದು ಹಾಗೂ ಪಾಸ್ಪೋರ್ಟ್ ಪಡೆಯಲು ಸಮಯ ನಿಗದಿಪಡಿಸುವದಕ್ಕೂ ಆಪ್ ಮೂಲಕವೇ ಮಾಡಬಹುದಾಗಿದೆ.

ಕಾರು ಡಿಕ್ಕಿ : ಮೂವರ ಸಾವು

ಕಾರವಾರ, ಜೂ. 29: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಪರಿಣಾಮ ಮೂವರು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಸ್ವಿಪ್ಟ್ ಕಾರು ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ್ದಾರೆ. ಮೃತರನ್ನು ಚಾಲಕ ಶಂಭು, ಶ್ರೀನಿವಾಸ್ ಹರಿಕಾಂತ್ ಹಾಗೂ ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ.

ಭಾರೀ ಮಳೆಗೆ ವಿದ್ಯಾರ್ಥಿನಿ ಸಾವು

ಉಡುಪಿ, ಜೂ. 29: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಮಳೆಯ ಅಬ್ಬರ ಜಾಸ್ತಿಯಾಗಿದ್ದು, ಮಳೆಯ ರಭಸಕ್ಕೆ ತೋಯ್ದು ಹೋಗಿದ್ದ ಕಂಪೌಂಡ್ ಕುಸಿದು ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಉಳ್ಳೂರಿನಲ್ಲಿ ಈ ಘಟನೆ ನಡೆದಿದೆ. 22 ವರ್ಷದ ಧನ್ಯಾ ಗೋಡೆ ಕುಸಿದು ಬಿದ್ದು ಮೃತಪಟ್ಟ ಯುವತಿ. ಉಳ್ಳೂರಿನ ನಂದಿಕೇಶ್ವರ ದೈವಸ್ಥಾನ ಸಮೀಪದಲ್ಲಿ ಈ ಘಟನೆ ನಡೆದಿದ್ದು, ದೈವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ವಾಪಾಸ್ ಬರುವ ಹೊತ್ತಿಗೆ ಈ ದುರ್ಘಟನೆ ನಡೆದಿದೆ. ಮನೆಯ ಸಮೀಪದಲ್ಲೇ ದೈವಸ್ಥಾನವಿದ್ದು ಅಲ್ಲಿಗೆ ತೆರಳಿದ ಧನ್ಯ ಮನೆಗೆ ಹಿಂದಿರುಗಿ ಬರುತ್ತಿದ್ದರು. ಇನ್ನು ಧನ್ಯಾ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಕಾಂ ಓದುತ್ತಿದ್ದರು.

ಪಿ.ವಿ. ಸಿಂಧು ಸೆಮಿಫೈನಲ್ ಪ್ರವೇಶ

ದೆಹಲಿ, ಜೂ. 29: 2018ರ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಸ್ಪೇನ್‍ನ ಕರೊಲಿನ ಮರಿನ್ ವಿರುದ್ಧ ಗೆದ್ದು ಸೆಮಿಫೈನಲ್‍ಗೆ ಪ್ರವೇಶಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನ ಫೈನಲ್ ಪಂದ್ಯದಲ್ಲಿ ಕರೊಲಿನ ಮರಿನ್ ವಿರುದ್ಧ ಸೋಲು ಕಂಡಿದ್ದ ಪಿ.ವಿ. ಸಿಂಧು ಇದೀ ಮರಿನ್ ಅವರನ್ನು ಸೋಲಿಸಿ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಫೈನಲ್‍ಗೆ ಪ್ರವೇಶಿಸಿದ್ದಾರೆ. ಕರೊಲಿನ್ ಮರಿನ್ ವಿರುದ್ಧ ಪಿವಿ ಸಿಂಧು 22-20, 21-19 ನೇರ ಸೆಟ್‍ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದ್ದಾರೆ.

ರಾಣಿ ರಂಪಾಲ್ ಮಹಿಳಾ ಹಾಕಿ ಸಾರಥಿ

ನವದೆಹಲಿ, ಜೂ. 29: ಮುಂದಿನ ತಿಂಗಳು ಲಂಡನ್‍ನಲ್ಲಿ ನಡೆಯಲಿರುವ ಮಹಿಳಾ ಹಾಕಿ ವಿಶ್ವಕಪ್‍ಗೆ ಭಾರತ ತಂಡ ಪ್ರಕಟಿಸಲಾಗಿದ್ದು, ಸ್ಟೈರ್ಕರ್ ರಾಣಿ ರಂಪಾಲ್ 18 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಗೋಲ್ ಕೀಪರ್ ಸವಿತಾ ಅವರಿಗೆ ಉಪ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ. ಪ್ರತಿಷ್ಠಿತ ಹಾಕಿ ವಿಶ್ವಕಪ್‍ಗೆ ಇಂದು 18 ಸದಸ್ಯರ ತಂಡ ಪ್ರಕಟಿಸಲಾಗಿದ್ದು, ಸ್ಪೇನ್ ಪ್ರವಾಸದಲ್ಲಿ ವಿಶ್ರಾಂತಿ ಪಡೆದಿದ್ದ ಗೋಲ್ ಕೀಪರ್ ರಜನಿ ಎತಿಮುರ್ಪು ತಂಡಕ್ಕೆ ವಾಪಸಾಗಿದ್ದಾರೆ. ಪಂದ್ಯಾವಳಿಯಲ್ಲಿ ಭಾರತ ‘ಬಿ’ ಗುಂಪಿನಲ್ಲಿದ್ದು, ಆತಿಥೇಯ, ವಿಶ್ವದ ನಂಬರ್ 2 ತಂಡ ಇಂಗ್ಲೆಂಡ್, ವಿಶ್ವದ ನಂ.7ನೇ ತಂಡ ಅಮೇರಿಕಾ ಹಾಗೂ ವಿಶ್ವದ ನಂ. 16ನೇ ತಂಡ ಐರ್‍ಲ್ಯಾಂಡ್‍ನೊಂದಿಗೆ ಸ್ಥಾನ ಪಡೆದಿದೆ.