ಕೂಡಿಗೆ: ಸಮಾಜದ ಯುವಶಕ್ತಿಗಳಾಗಿರುವ ವಿದ್ಯಾರ್ಥಿಗಳು ಮಾದಕ ಚಟಕ್ಕೆ ಬಲಿಯಾಗದೆ, ಅಡ್ಡದಾರಿ ಹಿಡಿಯದೆ ತಮ್ಮ ಗುರಿ ಸಾಗುವತ್ತ ಗಮನಹರಿಸಬೇಕು ಎಂದು ಡಿವೈಎಸ್‍ಪಿ ಮುರುಳೀಧರ್ ಹೇಳಿದರು.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಾದಕ ದ್ರವ್ಯಗಳಿಂದ ಮಾನಸಿಕವಾಗಿ ದುರ್ಬಲತೆ ಉಂಟಾಗಿ ತಮ್ಮ ಶರೀರವನ್ನೇ ಕಳೆದುಕೊಳ್ಳುವ ಸ್ಥಿತಿ ಎದುರಾಗುತ್ತದೆ ಎಂದರು.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನವೀನ್ ಗೌಡ ಮಾತನಾಡಿ, ಮಾದಕ ದ್ರವ್ಯ ಸೇವನೆಯು ಗೆದ್ದಲು ಹುಳ ಇದ್ದಂತೆ. ಇದನ್ನು ತೊಡೆದು ಹಾಕಲು ಯುವಶಕ್ತಿಯ ಸಹಕಾರ ಪ್ರಮುಖವಾಗಿರುತ್ತದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಕೆ.ಕೆ. ನಾಗರಾಜ ಶೆಟ್ಟಿ, ಪ್ರಾಂಶುಪಾಲ ಮಹಾಲಿಂಗಯ್ಯ, ಉಪನ್ಯಾಸಕರು, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಸೋಮವಾರಪೇಟೆ: ಮಾದಕ ವ್ಯಸನ ಬದುಕಿಗೆ ಮಾರಕವಾಗಿದ್ದು, ಇದರಿಂದ ದೂರವಿರಬೇಕೆಂದು ಡಿವೈಎಸ್‍ಪಿ ಪಿ.ಕೆ. ಮುರುಳೀಧರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪೊಲೀಸ್ ಇಲಾಖೆ ಮತ್ತು ಸಂತ ಜೋಸೆಫರ ಪ್ರೌಢಶಾಲೆ ಆಶ್ರಯದಲ್ಲಿ ಶಾಲಾ ಸಭಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಎಂ. ಶಿವಣ್ಣ, ಶಾಲಾ ವ್ಯವಸ್ಥಾಪಕ ಹ್ಯಾರಿ ಮೋರಸ್, ಶಿಕ್ಷಕಿ ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

ಗೋಣಿಕೊಪ್ಪ ವರದಿ: ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರ ಉಳಿದು ವಿದ್ಯಾಭ್ಯಾಸದ ಕಡೆಗೆ ಗಮನಹರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಗೋಣಿಕೊಪ್ಪ ಪೊಲೀಸ್ ವೃತ್ತ ನಿರೀಕ್ಷಕ ಹರೀಶ್ಚಂದ್ರ ಹೇಳಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಸೇವನೆಯಿಂದ ಯುವಜನತೆಯಲ್ಲಿ ಕಾರ್ಯಚಟುವಟಿಕೆಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಸುಮಾರು 7 ಕೋಟಿ ಜನರು ಮಾದಕ ವ್ಯಸನಿಗಳಾಗಿದ್ದಾರೆ ಎಂದು ಪೊನ್ನಂಪೇಟೆ ಪೊಲೀಸ್ ಉಪನಿರೀಕ್ಷಕ ಮಹೇಶ್ ಆತಂಕ ವ್ಯಕ್ತಪಡಿಸಿದರು. ದುಶ್ಚಟಗಳಿಗೆ ಬಲಿಯಾಗುವದರಿಂದ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ಅಧಿಕವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಆರ್.ಎನ್. ಕೆಂಚಾರೆಡ್ಡಿ ಇದ್ದರು.ಮೂರ್ನಾಡು: ಈಗಿನ ಯುವ ಜನತೆ ಕುತೂಹಲ ಮತ್ತು ಗೆಳೆಯರ ಸಹವಾಸದಿಂದ ಮಾದಕ ದ್ರವ್ಯಗಳ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನಶಾಸ್ತ್ರಜ್ಞ ಹೆಚ್.ಟಿ. ರಾಜಶೇಖರ್ ವಿಷಾದಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂರ್ನಾಡು ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಅಂತರರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆಯ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗುವವರ ಆರೋಗ್ಯ ಬಹು ಬೇಗ ಕೆಡುವದಲ್ಲದೆ, ಸಮಾಜದಲ್ಲಿ ಸಮಾಜ ಘಾತುಕ ವ್ಯಕ್ತಿಯಾಗಿ ಮಾರ್ಪಾಡುಗೊಳ್ಳುತ್ತಾರೆ. ಮಾದಕ ದ್ರವ್ಯಗಳನ್ನು ಸಾಗಿಸುವಲ್ಲಿ ಮಾರಾಟ ಮಾಡುವಲ್ಲಿ ಹಣದ ಆಸೆಗೆ ಅನೇಕ ಅಧಿಕಾರಿಗಳೂ ಶಾಮೀಲಾಗುತ್ತಿದ್ದಾರೆ. ಮಾದಕ ವಸ್ತುಗಳ ಮಾರಾಟ ಮಾಡುವವರು ಮತ್ತು ಕೊಂಡುಕೊಳ್ಳುವವರು ಅಪರಾಧಿಗಳಾಗುತ್ತಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂರ್ನಾಡು ವಿದ್ಯಾಸಂಸ್ಥೆಯ ಕಾರ್ಯದರ್ಶಿ ಚೌರೀರ ಪೆಮ್ಮಯ್ಯ ಮಾತನಾಡಿ, ಯುವ ಪೀಳಿಗೆ ಸರಿಯಾದ ದಾರಿಯಲ್ಲಿ ಸಾಗಿದರೆ ಮಾತ್ರ ದೇಶ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ. ಔಷಧಿಗಾಗಿ ಉಪಯೋಗಿಸುವ ಮಾದಕ ದ್ರವ್ಯಗಳನ್ನು ದುರುಪಯೋಗ ಪಡಿಸಿಕೊಂಡು, ಇಂದು ಯುವ ಜನತೆ ಸಮಾಜ ಘಾತುಕರಾಗಿ ಮಾರ್ಪಡುತ್ತಿದ್ದಾರೆ.

ಪಂಜಾಬ್ ರಾಜ್ಯ ಮಾದಕ ದ್ರವ್ಯಗಳ ವಿಷ ವರ್ತುಲವಾಗಿ ಪರಿಣಮಿಸಿದ್ದು ಇದಕ್ಕೆ ಪ್ರತ್ಯಕ್ಷ ನಿದರ್ಶನವಾಗಿದೆ. ವಿದ್ಯೆ ಕೇವಲ ನೌಕರಿ ಗಳಿಸಲು ಮಾತ್ರವಲ್ಲ. ಸಮಾಜದ ಆಗು-ಹೋಗುಗಳನ್ನು ತಿಳಿದುಕೊಳ್ಳಲಿರುವ ಮಾಧ್ಯಮ ಎಂದು ತಿಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಎ.ಕೆ. ಶಿವಕುಮಾರ್, ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ, ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿ ಯು.ಸಿ. ಮಾಲತಿ ಮತ್ತು ಕುಮುದ ಉಪಸ್ಥಿತರಿದ್ದರು.

ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ಕೆ.ಎಂ. ತೌಫೀನ (ಪ್ರಥಮ), ಎಸ್. ಕವಿತ (ದ್ವಿತೀಯ), ಫಾತಿಮ (ತೃತೀಯ) ಬಹುಮಾನ ಪಡೆದುಕೊಂಡರು.

ಸುಂಟಿಕೊಪ್ಪ: ಸುಂಟಿಕೊಪ್ಪ ಪೊಲೀಸ್ ಠಾಣೆಯ ವತಿಯಿಂದ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಜಯರಾಮ್ ಮಾತನಾಡಿ, ಮಾದಕ ದ್ರವ್ಯ ಪಿಡುಗಿಗೆ ಹೆಚ್ಚಾಗಿ ಯುವಕರೇ ಒಳಗಾಗಿದ್ದು, ತಮ್ಮ ಬದುಕನ್ನೇ ಕತ್ತಲಾಗಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದಲ್ಲಿ ಮಾದಕ ದ್ರವ್ಯದ ಪಿಡುಗಿಗೆ ಮಕ್ಕಳ ಪೋಷಕರೇ ಜವಾಬ್ದಾರರಾಗಿರುತ್ತಾರೆ. ಮಕ್ಕಳ ಬಗ್ಗೆ ಪೋಷಕರಿಗೆ ಕಾಳಜಿ ಇದ್ದಾಗ ಮಕ್ಕಳು ಇಂತಹ ಮಾದಕ ದ್ರವ್ಯಗಳಿಗೆ ದಾಸರಾಗದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಮೋಹನ್ ಹೆಗ್ಡೆ, ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸುತ್ತಿರುವದು ದೌರ್ಭಾಗ್ಯ. ಯುವ ಜನಾಂಗ ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವದÀರಿಂದ ದೇಶದ ಹಿನ್ನಡೆಗೂ ಕಾರಣವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಿ.ಜಿ. ಮಂದಪ್ಪ ವಹಿಸಿದ್ದರು. ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್‍ಐ. ಪಾರ್ಥ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಎನ್.ಎ. ರೇವತಿ ಹಾಜರಿದ್ದರು.

ವಿದ್ಯಾರ್ಥಿಗಳಾದ ಸಬೀನಾ ಪ್ರಾರ್ಥಿಸಿ, ಮೇಘ ಸ್ವಾಗತಿಸಿ, ರಂಜಿತಾ ನಿರೂಪಿಸಿ, ದಿವಿನ್ ವಂದಿಸಿದರು.