ಮಡಿಕೇರಿ, ಜೂ. 29: ಕೊಡಗಿನ ‘ಬಾಣೆ’ ಜಾಗದ ಸಮಸ್ಯೆಗಳು ಕಾನೂನಾತ್ಮಕವಾಗಿ ಈಗಾಗಲೇ ಬಗೆಹರಿದಿದ್ದರೂ, ಇದನ್ನು ಅರಣ್ಯದ ಜಾಗ ಎಂದು ಬಿಂಬಿಸುವ ಮೂಲಕ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ಇಡೀ ಕೊಡಗನ್ನು ಅರಣ್ಯೀಕರಣ ಮಾಡುವ ಪಿತೂರಿ ಪರಿಸರವಾದಿ ಗಳಿಂದ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ವಕೀಲ ಎ.ಕೆ. ಸುಬ್ಬಯ್ಯ ಈ ಸಮಸ್ಯೆಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲು ಯುವ ಸಮೂಹ ಮುಂದೆ ಬರಬೇಕೆಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕಂದಾಯ ಇಲಾಖೆಯಲ್ಲಿ ಆಡಿಟ್ ನಡೆಸಿದವರು ನೀಡಿದ ವರದಿಯಲ್ಲಿ, ಕೊಡಗಿನ ಬಾಣೆ ಜಮೀನುಗಳೆಲ್ಲವೂ ಅರಣ್ಯವಾಗಿದೆ. ಇದರಿಂದಾಗಿ ಬಾಣೆ ಜಾಗಕ್ಕೆ ಕಂದಾಯ ವಿಧಿಸಿ ಪರಿವರ್ತನೆ ಮಾಡುವ ಅಧಿಕಾರ ಇಲ್ಲವೆಂದು ತಿಳಿಸಿದೆ. ಈ ವರದಿಯನ್ನು ಉದ್ದೇಶ ಪೂರ್ವಕವಾಗಿ ರಚಿಸಲಾಗಿದ್ದು, ಇದರ ಹಿಂದೆ ಪರಿಸರವಾದಿಗಳ ಮತ್ತು ಅರಣ್ಯ ಇಲಾಖೆಯ ಕೈವಾಡವಿದೆ ಎಂದು ಆರೋಪಿಸಿದರು.

ಬಾಣೆ ಜಾಗದ ಸಮಸ್ಯೆ ಈಗಾಗಲೇ ಕಾನೂನು ಭಾಗದಲ್ಲಿ ಇತ್ಯರ್ಥ ವಾಗಿರುವ ಸಮಗ್ರ ಮಾಹಿತಿಯನ್ನು ಮತ್ತು ಮುಂದಿನ ಹೋರಾಟದ ರೂಪುರೇಷೆಯನ್ನು ಯುವ ಸಮೂಹಕ್ಕೆ ಒದಗಿಸಿಕೊಡುವ ನಿಟ್ಟಿನಲ್ಲಿ ತಾನು ಅಗತ್ಯ ತರಬೇತಿ ಶಿಬಿರ ನಡೆಸಲು ಸಿದ್ಧನಿದ್ದೇನೆ ಎಂದು ಎ.ಕೆ. ಸುಬ್ಬಯ್ಯ ಹೇಳಿದರು. ಮುಂದಿನ ಪೀಳಿಗೆಗೆ ಈ ರೀತಿಯ ಸೂಕ್ಷ್ಮ ವಿಚಾರಗಳ ಪರಿಜ್ಞಾನವಿಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಚಕ್ಕೇರ ಪೂವಯ್ಯ ಪ್ರಕರಣದಲ್ಲಿ ಹೊರಡಿಸ ಲಾಗಿರುವ ನ್ಯಾಯಾಲಯದ ಆದೇಶವನ್ನೇ ತಪ್ಪಾಗಿ ಅರ್ಥೈಸುವ ಅಪಾಯವಿದೆ ಎಂದು ಅಭಿಪ್ರಾಯಪಟ್ಟರು.

ಎರಡೂವರೆ ದಶಕಗಳ ಹಿಂದೆಯೇ ‘ಚಕ್ಕೇರ ಪೂವಯ್ಯ’ ಪ್ರಕರಣದಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ‘ಬಾಣೆ’ ಜಾಗಕ್ಕೆ ಸಂಬಂಧಿಸಿದಂತೆ ಬೆಳೆಗಾರನಿಗೆ ಸೀಮಿತ ಹಕ್ಕಿದೆ. ಈ ಜಾಗದಲ್ಲಿ ಕೃಷಿ ನಡೆಸಿ ಕಂದಾಯಕ್ಕೆ ಒಳಪಡಿಸಿದಲ್ಲಿ ಜಾಗದ ಪೂರ್ಣ ಹಕ್ಕು ಬೆಳೆಗಾರನಿಗೆ ದೊರಕುತ್ತದೆ ಎಂದು ಸ್ಪಷ್ಟಪಡಿಸಿದೆ. ಬಾಣೆ ಜಾಗವನ್ನು ಮಾರಾಟ ಮಾಡುವ ಹಕ್ಕು ಸಹ ಬೆಳೆಗಾರನಿಗೆ ಇದೆ. ನ್ಯಾಯಾಲಯದ ಆದೇಶಕ್ಕೆ ಪೂರಕವಾಗಿ ಅಂದಿನ ರಾಜ್ಯ ಕಂದಾಯ ಕಾರ್ಯದರ್ಶಿಗಳಾದ ಲೋಕರೆ ಅವರು, ಬಾಣೆ ಜಾಗಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದೊಂದಿಗೆ ಹಳೆಯ ನಿಬಂಧನೆಗಳು ರದ್ದಾಗಿದ್ದು, 1964 ರ ಕರ್ನಾಟಕ ರಾಜ್ಯ ಕಂದಾಯ ಕಾಯ್ದೆಯಷ್ಟೆ ಈ ಬಾಣೆ ಜಾಗಕ್ಕೆ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಬಳಿಕ ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಣೆ ಜಾಗಕ್ಕೆ ಕಂದಾಯ ವಿಧಿಸಿ ಅದರ ಪೂರ್ಣ ಹಕ್ಕನ್ನು ಬೆಳೆಗಾರನಿಗೆ ಒದಗಿಸಿಕೊಡುವ ತಿದ್ದುಪಡಿ ಕಂದಾಯ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದನ್ನು ಉಲ್ಲೇಖಿಸಿದರು. ‘ಬಾಣೆ’ ಜಾಗದ ಕುರಿತ ಇಲ್ಲಿಯ ವರೆಗಿನ ಎಲ್ಲಾ ಬೆಳವಣಿಗೆಗಳನ್ನು ಕತ್ತಲೆಯಲ್ಲಿಟ್ಟು, ಬಾಣೆ ಜಾಗವನ್ನು ಅರಣ್ಯ ಇಲಾಖೆಗೆ ಸೇರಿದ್ದೆಂದು ಪ್ರತಿಪಾದಿಸುವ ವಿಚಾರದ ಹಿಂದೆ ಇಡೀ ಪಶ್ಚಿಮ ಘಟ್ಟ ವ್ಯಾಪ್ತಿ ಯಲ್ಲಿನ ಕೃಷಿಯನ್ನು ನಾಶಪಡಿಸಿ, ಅರಣ್ಯವನ್ನಾಗಿ ಪರಿವರ್ತಿಸುವ ಹುನ್ನಾರ ಅಡಗಿದೆ ಎಂದು ಎ.ಕೆ. ಸುಬ್ಬಯ್ಯ ಆರೋಪಿಸಿದರು.

ಪ್ರಸ್ತುತ ಇಡೀ ಕೊಡಗನ್ನು ಅರಣ್ಯವೆಂದು ಘೋಷಿಸುವದಕ್ಕೆ ‘ಬಾಣೆ’ ಜಾಗ ಅಡ್ಡಿಯಾಗಿ ಪರಿಣ ಮಿಸಿದೆ. ಇದನ್ನು ಇಲ್ಲವಾಗಿಸುವ ಪ್ರಯತ್ನವಾಗಿ, ಈ ಜಾಗದ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶ ಕಂದಾಯ ಇಲಾಖೆಯ ಆಡಿಟ್ ವರದಿಯದ್ದಾಗಿದೆ. ಇಂತಹ ವಿಚಾರಗಳ ಬಗ್ಗೆ ಯುವ ಪೀಳಿಗೆ ಜಾಗೃತವಾಗಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಪಶ್ಚಿಮ ಘಟ್ಟ ಪ್ರದೇಶವೆಲ್ಲವೂ ಅರಣ್ಯವೆಂದು ಪರಿಗಣಿಸಲ್ಪಟ್ಟು ಖಾಸಗಿಯವರ ಕೈಗೆ ಹೋಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ರೈಲು ಮಾರ್ಗ ಬೇಕು

ಕೊಡಗಿನ ಮೂಲಕ ರೈಲು ಮಾರ್ಗ ಹಾದು ಹೋಗುವದಕ್ಕೂ ಪರಿಸರವಾದಿಗಳೇ ತಡೆಯೊಡ್ಡುತ್ತಿದ್ದು, ಕೊಡವ ಸಮುದಾಯದ ಸಣ್ಣ ದೊಂದು ಗುಂಪು, ಕೆ.ಜಿ. ಬೋಪಯ್ಯ ಅವರಿಗೆ ವಿರುದ್ಧವಾಗಿರುವ ಬಿಜೆಪಿಯ ಮತ್ತೊಂದು ಗುಂಪು ರೈಲು ಮಾರ್ಗಕ್ಕೆ ವಿರೊಧ ವ್ಯಕ್ತಪಡಿಸುತ್ತಿದೆ ಎಂದು ಎ.ಕೆ. ಸುಬ್ಬಯ್ಯ ಆರೋಪಿಸಿದರು. ಸರ್ವ ಕೊಡವರು ರೈಲು ಮಾರ್ಗಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲವೆಂದು ಸಮರ್ಥಿಸಿಕೊಂಡ ಅವರು, ಒಂದು ಗುಂಪು ನೀಡುವ ಹೇಳಿಕೆಯೇ ಜನಾಭಿಪ್ರಾಯವಲ್ಲವೆಂದು ಅಭಿಪ್ರಾಯ ಪಟ್ಟರು. ರೈಲು ಮಾರ್ಗದ ಕುರಿತು ಸರ್ವ ಜನರ ಅಭಿಪ್ರಾಯವನ್ನು ಪಡೆದುಕೊಳ್ಳಬೇಕು. ಈ ಅಭಿಪ್ರಾಯದಲ್ಲಿ ಬಹುಸಂಖ್ಯಾತರು ರೈಲು ಮಾರ್ಗಕ್ಕೆ ವಿರೋಧ ವ್ಯಕ್ತಪಡಿಸಿದರೆ ನನ್ನದೂ ವಿರೋಧವಿದೆಯೆಂದು ಸ್ಪಷ್ಟಪಡಿಸಿದ ಎ.ಕೆ. ಸುಬ್ಬಯ್ಯ, ಕೊಡಗಿನ ಕೃಷಿ ಕ್ಷೇತ್ರದ ಹಿತದೃಷ್ಟಿಯಿಂದ ಕೊಡಗಿಗೆ ರೈಲು ಮಾರ್ಗದ ಅಗತ್ಯವಿದೆಯೆಂದು ಅಭಿಪ್ರಾಯಪಟ್ಟರು. ರೈಲು ಮಾರ್ಗ ಬೇಡ ಎನ್ನುವ ಮೂಲಕ ಸಂಸದ ಪ್ರತಾಪ ಸಿಂಹ ಅವರು ಕೊಡಗಿನ ಜನತೆಗೆ ದ್ರೋಹ ಎಸಗುತ್ತಿದ್ದಾರೆ ಎಂದು ಎ.ಕೆ. ಸುಬ್ಬಯ್ಯ ಆರೋಪಿಸಿದರು. ರೈಲ್ವೆ ಮಾರ್ಗದಿಂದ ಮರಗಳು ನಾಶವಾಗುತ್ತದೆ ಎಂದು ಪರಿಸರವಾದಿಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಎಷ್ಟು ಮರಗಳು ಹನನವಾಗುತ್ತವೆ ಎನ್ನುವ ಬಗ್ಗೆ ಮೊದಲು ಅಧ್ಯಯನ ನಡೆಯಬೇಕು. ನಂತರ ನಾಶವಾದ ಮರಕ್ಕೆ ಪ್ರತಿಯಾಗಿ ಹತ್ತುಪಟ್ಟು ಹೆಚ್ಚಿನ ಮರಗಳನ್ನು ಅಭಿವೃದ್ಧಿಪಡಿಸುವ ಅಭಿಯಾನ ನಡೆಯಬೇಕೆಂದು ಅವರು ಹೇಳಿದರು. ರೈಲು, ರಸ್ತೆ ಮತ್ತು ವಿದ್ಯುತ್ ಮಾರ್ಗಗಳು ಕೊಡಗಿನ ಅಭಿವೃದ್ಧಿಗೆ ಪೂರಕವಾಗಿವೆ. ಮರಗಳು ನಾಶವಾಗುತ್ತವೆ ಎನ್ನುವ ನೆಪದಿಂದ ಅಭಿವೃದ್ಧಿಗೆ ಅಡ್ಡಿಪಡಿಸದೆ ನಾಶವಾಗುವ ಮರಕ್ಕೆ ಪ್ರತಿಯಾಗಿ ಕೃಷಿ ಅರಣ್ಯ ಯೋಜನೆಯಡಿ ಹೆಚ್ಚಿನ ಮರಗಳನ್ನು ಬೆಳೆಸುವ ಗುರಿ ಹೊಂದಬೇಕೆಂದರು.

ಪರಿಸರವಾದಿಗಳ ಪಿತೂರಿಯಿಂದ ಕೊಡಗಿನ ಕೃಷಿ ಕ್ಷೇತ್ರ ನಾಶವಾಗುವದಲ್ಲದೆ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಲಿದೆ. ಪರಿಸರವಾದಿಗಳ ಪಿತೂರಿ ವಿರುದ್ಧ ಜನ ಎಚ್ಚೆತ್ತುಕೊಳ್ಳದಿದ್ದಲ್ಲಿ ಕಾಲ ಮೀರಿ ಬೀದಿಪಾಲಾಗುವ ದುಸ್ಥಿತಿ ಬಂದೊದಗಲಿದೆ ಎಂದು ಎ.ಕೆ. ಸುಬ್ಬಯ್ಯ ಎಚ್ಚರಿಕೆ ನೀಡಿದರು.

ಸಣ್ಣ ಬೆಳೆಗಾರರ ಸಂಘದ ಪ್ರಮುಖರಾದ ಚೇರಂಡ ನಂದಾ ಸುಬ್ಬಯ್ಯ ಮಾತನಾಡಿ, ಕೊಡಗಿನ ಕಾಫಿ ತೋಟಗಳು ಪರಿಸರ ಸಂರಕ್ಷಣೆಗೆ ಪೂರಕವಾಗಿದ್ದು, ಪರಿಸರ ಸಂರಕ್ಷಣೆಯ ಪಾಠವನ್ನು ಅರಣ್ಯ ಇಲಾಖೆ ಮಾಡಬೇಕಾಗಿಲ್ಲವೆಂದರು.

ಕೃಷಿ ಅರಣ್ಯ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದ ಅವರು, ಖಾಸಗಿ ಭೂಮಿಯಲ್ಲಿ ಮರಗಳನ್ನು ಅಭಿವೃದ್ಧಿ ಪಡಿಸಲು ಉತ್ತೇಜನ ನೀಡುವ ಅಗತ್ಯವಿದೆ ಎಂದರು. ಪರಿಸರ ಸಂರಕ್ಷಣೆಯ ಕುರಿತು ಜಿಲ್ಲೆಯಲ್ಲಿ ಉಂಟಾಗಿರುವ ಗೊಂದಲದ ವಾತಾವರಣದ ಬಗ್ಗೆ ಶಾಸಕರುಗಳು ಯಾಕೆ ಮೌನ ವಹಿಸಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ವಕೀಲ ಕೆ.ಆರ್. ವಿದ್ಯಾಧರ್ ಉಪಸ್ಥಿತರಿದ್ದರು.