ಗೋಣಿಕೊಪ್ಪಲು, ಜೂ. 29: ಚೆಯ್ಯಂಡಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದಲ್ಲಿ ವಾಸವಾಗಿರುವ ಚೇನಿರ, ಪಟ್ಟಚರವಂಡ, ಬಾಚಮಂಡ, ಹಾಗೂ ಇತರ ಕುಟುಂಬಗಳು ನೂರಾರು ಸಂಖ್ಯೆಯಲ್ಲಿ ವಾಸವಿರುವ ಜನತೆಗೆ ಮೂಲ ಸೌಕರ್ಯಗಳು ಇಲ್ಲದೆ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಸಾರ್ವಜನಿಕರ ಅನು ಕೂಲಕ್ಕಾಗಿ ಮೂಲ ಸೌಕರ್ಯ ನೀಡಬೇಕಾದ ಇಲಾಖೆಗಳು ಈ ಗ್ರಾಮದ ಜನತೆಯ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬದು ಗ್ರಾಮಸ್ಥರ ಆರೋಪ. ಚೇನಿರ, ಪಟ್ಟಚರವಂಡ, ಬಾಚಮಂಡ ಕುಟುಂಬಸ್ಥರು ವಾಸಿಸುತ್ತಿರುವ ಈ ಪ್ರದೇಶದಿಂದ ವಿಶ್ವ ವಿಖ್ಯಾತಿ ಪ್ರಸಿದ್ಧಿ ಪಡೆದಿರುವ ಚೇಲಾವರ ಜಲಪಾತವು ಈ ಗ್ರಾಮದ ರಸ್ತೆಯಿಂದ ಪ್ರಯಾಣ ಬೆಳೆಸಿದ್ದಲ್ಲಿ ಕೇವಲ ಎರಡು ಕಿ.ಮೀ. ದೂರವಷ್ಟೇ ಎಂಬದು ಇಲ್ಲಿ ಗಮನಿ ಸಬೇಕಾದ ಅಂಶ. ಪ್ರವಾಸೋದ್ಯಮ ಇಲಾಖೆಯು ಈ ಭಾಗದ ರಸ್ತೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನದಲ್ಲಿ ಸಂಪೂರ್ಣ ವಿಫಲವಾಗಿದೆ.

ಈ ಗ್ರಾಮದಲ್ಲಿ ಹರಿಯುವ ತೋಡಿಗೆ ಸರಿಯಾದ ಸೇತುವೆ ಇಲ್ಲದೆ ಮಳೆಗಾಲದಲ್ಲಿ ಬೆಟ್ಟದಿಂದ ಸುರಿಯುವ ನೀರಿನಿಂದ ಮುಚ್ಚಿ ಹೋಗುತ್ತಿದೆ. ಈ ಸಂದರ್ಭ ಸೇತುವೆಯ ಎರಡು ಭಾಗದಲ್ಲಿರುವ ಕುಟುಂಬಗಳಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಮೋರಿಗಳನ್ನಿಟ್ಟು ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸೇತುವೆ ಹಾಗೂ ರಸ್ತೆಯನ್ನು ಅಭಿವೃದ್ಧಿ ಪಡಿಸಿದ್ದಲ್ಲಿ ಚೇಲಾವರ ಜಲಪಾತಕ್ಕೆ ಸಂಪರ್ಕ ರಸ್ತೆ ಕಲ್ಪಿಸಿದಂತಾಗುತ್ತದೆ. ಇದರಿಂದ ಸಮಯವು ಉಳಿಯಲಿದೆ ಗ್ರಾಮದ ಜನತೆಯ ಹಲವು ವರ್ಷಗಳ ಸಮಸ್ಯೆ ಗಳು ಪರಿಹಾರ ಕಂಡಂತಾಗಲಿದೆ.

ಈ ಭಾಗದಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ಇರುವದರಿಂದ ಸಂಜೆಯ ವೇಳೆ, ಮುಂಜಾನೆಯ ವೇಳೆ ಸಂಚರಿಸುವದೇ ಬಹಳ ಕಷ್ಟ. ನೆಪ ಮಾತ್ರಕ್ಕೆ ವಿದ್ಯುತ್‍ಚ್ಛಕ್ತಿ ಈ ಭಾಗದಲ್ಲಿದೆ. ರಾತ್ರಿ 11 ಗಂಟೆಗೆ ಗ್ರಾಮಸ್ಥರು ನಿದ್ರಿಸಿದ ನಂತರ ವಿದ್ಯುತ್ ವೋಲ್ಟೇಜ್ ಬರುತ್ತಿದೆ. ಮುಂಜಾನೆ ಈ ವೋಲ್ಟೇಜ್ ತಾನಾಗಿಯೇ ಮಾಯವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾ ಭ್ಯಾಸಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಅನುಕೂಲಸ್ಥರು ತಮ್ಮ ಮನೆಗಳಲ್ಲಿ ಜನರೇಟರ್ ವ್ಯವಸ್ಥೆ ಮಾಡಿ ಕೊಂಡಿದ್ದಾರೆ. ಬಹುತೇಕ ಈ ಗ್ರಾಮದಲ್ಲಿ ಬಿಎಸ್‍ಎನ್‍ಎಲ್ ಲ್ಯಾಂಡ್‍ಲೈನ್ ಸಂಪರ್ಕವಿದೆ. ಆದರೆ ಇದು ಕೆಟ್ಟು ನಿಂತು ತಿಂಗಳಿಗೂ ಅಧಿಕ ಸಮಯ ಕಳೆದಿದೆ. ಸಂಬಂಧಪಟ್ಟ ಇಲಾಖೆಗೆ ಗ್ರಾಮಸ್ಥರು ಲಿಖಿತ ದೂರು ನೀಡಿದ್ದರು ಪ್ರಯೋಜನವಾಗುತ್ತಿಲ್ಲ.

ಕಾಡಾನೆಯು ಈ ಭಾಗಕ್ಕೆ ಆಗಮಿಸಿ ನಾಟಿ ವೈದ್ಯ ನಂದಕುಮಾರ್ ಅವರ ಮನೆಯ ಸಮೀಪದಲ್ಲಿ ಮೇಯುತ್ತಿದ್ದ ಭೂಮಿ ಹೂಳುವ ಎತ್ತುವಿನ ಮೇಲೆ ಧಾಳಿ ನಡೆಸಿ ಕೊಂದು ಹಾಕಿದ್ದರೂ ಇಲ್ಲಿಯ ತನಕ ಸಂಬಂಧಪಟ್ಟ ಅರಣ್ಯ ಇಲಾಖೆ ಯಿಂದ ಪರಿಹಾರ ಲಭ್ಯ ವಾಗಿಲ್ಲ. ಬಿಎಸ್‍ಎನ್‍ಎಲ್, ವಿದ್ಯುಚ್ಛಕ್ತಿ ದುರಸ್ತಿ ಪಡಿಸಲು ಆಗಮಿಸುವ ಇಲಾಖೆಯ ಸಿಬ್ಬಂದಿಗಳು ಗ್ರಾಮಸ್ಥರಿಂದ ಹಣ ಪಡೆದರು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಮತ ಪಡೆದು ಹೋಗುವ ಜನಪ್ರತಿನಿಧಿಗಳು ಈ ಭಾಗದ ಜನತೆಯ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಮೂಲ ಸೌಕರ್ಯ ಗಳನ್ನು ಒದಗಿಸಬೇಕಾದ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಗ್ರಾಮದ ಜನತೆಯ ಮೂಲ ಸೌಕರ್ಯ ಗಳಾದ ರಸ್ತೆ, ವಿದ್ಯುಚ್ಛಕ್ತಿ, ದೂರವಾಣಿ ಸಂಪರ್ಕ ಕಲ್ಪಿಸಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ, ಜನಪ್ರತಿನಿಧಿಗಳಿಗೆ, ಮನವಿ ಮಾಡಿದ್ದಾರೆ.

- ಹೆಚ್.ಕೆ. ಜಗದೀಶ್