ಸೋಮವಾರಪೇಟೆ, ಜೂ. 29: ಕಳೆದ ತಾ. 22ರಂದು ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಹೋದ ಯುವಕ ಮನೋಜ್(24)ನ ಶವ ಎಂಟು ದಿನ ಕಳೆದ ನಂತರ ಇಂದು ಪತ್ತೆಯಾಗಿದೆ. ಜಲಪಾತದ ಕಂದಕದಿಂದ ಹೊರಬಂದಿರುವ ಶವ, ಜಲಪಾತದ ತಳಭಾಗದಿಂದ ಸುಮಾರು ಒಂದೂವರೆ ಕಿ.ಮೀಟರ್‍ನಷ್ಟು ದೂರಕ್ಕೆ ಕೊಚ್ಚಿಕೊಂಡು ಹೋಗಿದ್ದು, ಮರದ ಬೇರಿಗೆ ಸಿಲುಕಿದ ಸ್ಥಿತಿಯಲ್ಲಿ ಗೋಚರವಾಗಿದೆ.ಕಳೆದ ತಾ.23ರಿಂದ ಸತತ ಮೂರುದಿನಗಳ ಕಾಲ ಪ್ರತಿದಿನ ಮುಳುಗುತಜ್ಞರಾದ ಕುಮಾರಳ್ಳಿ ಗ್ರಾಮದ ಪ್ರಸನ್ನ, ಹುಣಸೂರಿನ ಫಕೀರಪ್ಪ, ಗರಗಂದೂರಿನ ಲತೀಫ್, ಕುಶಾಲನಗರದ ರಾಮಕೃಷ್ಣ ಸೇರಿದಂತೆ ಇತರರು ಜಲಪಾತದ ಬಳಿ ಶೋಧ ಕಾರ್ಯ ನಡೆಸಿದರೂ ಸಹ ಮೃತದೇಹದ ಬಗೆ ಸುಳಿವು ಲಭಿಸಿರಲಿಲ್ಲ. ಈ ಭಾಗದಲ್ಲಿ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಕಾರ್ಯಾಚರಣೆಯನ್ನು ತಾ. 26ಕ್ಕೆ ಸ್ಥಗಿತಗೊಳಿಸಲಾಗಿತ್ತು.ನಿನ್ನೆ ರಾತ್ರಿಯಿಂದ ಮಳೆ ಕೊಂಚ ಕಡಿಮೆಯಾಗಿದ್ದು, ಜಲಪಾತದಲ್ಲಿ ನೀರಿನ ಹರಿಯುವಿಕೆ ಕೊಂಚ ತಗ್ಗಿದ್ದರಿಂದ ಇಂದು ಬೆಳಿಗ್ಗೆ ಮೃತದೇಹ ಕಂಡುಬಂದಿದೆ. ಜಲಪಾತದಿಂದ ಸುಮಾರು ಒಂದೂವರೆ ಕಿ. ಮೀ. ದೂರದಲ್ಲಿ, ನದಿಯ ಬದಿಯಲ್ಲಿರುವ ಮರದ ಬೇರಿಗೆ ಸಿಲುಕಿಕೊಂಡ ಸ್ಥಿತಿಯಲ್ಲಿ ಮನೋಜ್‍ನ ದೇಹ ಗೋಚರಿಸಿದ್ದು, ಸ್ಥಳೀಯರಾದ ಮಲ್ಲಪ್ಪ ಅವರು ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ಎಂ.ಶಿವಣ್ಣ, ಸಿಬ್ಬಂದಿಗಳಾದ ಶಿವಕುಮಾರ್, ಜಗದೀಶ್,

(ಮೊದಲ ಪುಟದಿಂದ) ಸಿದ್ದರಾಮ ಬಿ. ಆಳೂರ, ಕುಮಾರ್ ಅವರುಗಳು ತೆರಳಿದ ನಂತರ, ಆಟೋ ಚಾಲಕ ಹಸನಬ್ಬ ಸ್ಥಳೀಯರಾದ ಪೊನ್ನಪ್ಪ, ನಿಖಿಲ್, ರಂಜು, ರಾಜಣ್ಣ, ಸತೀಶ್, ವಿಜಯ, ದೊಡ್ಡಯ್ಯ, ಚಿನ್ನಪ್ಪ, ಗಣೇಶ್, ಮನೋಜ್‍ನ ಸ್ನೇಹಿತರು ಸೇರಿದಂತೆ ಇತರರ ಸಹಾಯದಿಂದ ಮೃತದೇಹವನ್ನು ಹೊರತೆಗೆಯಲಾಗಿದೆ.

ಮೃತದೇಹದ ಮೇಲೆ ಒಳಉಡುಪನ್ನು ಹೊರತುಪಡಿಸಿದಂತೆ ಬೇರ್ಯಾವ ವಸ್ತ್ರವೂ ಇರಲಿಲ್ಲ. ಸುಮಾರು 60 ಕೆ.ಜಿ. ತೂಕವಿದ್ದ ಮನೋಜ್‍ನ ದೇಹ ಈ ಎಂಟು ದಿನಗಳಲ್ಲಿ ಊದಿಕೊಂಡಿದ್ದು, 125 ಕೆ.ಜಿ.ಗೆ ತಲಪಿದೆ. ಕಡಿದಾದ ಮಾರ್ಗದಲ್ಲಿ ಭಾರೀ ಪ್ರಾಯಾಸಪಟ್ಟು ಮೃತದೇಹವನ್ನು ತರಲಾಯಿತು.

ಇಂದು ಬೆಳಿಗ್ಗೆ ಮಲ್ಲಳ್ಳಿ ಗ್ರಾಮದ ಗದ್ದೆಯಲ್ಲಿ ಕೆಲಸಕ್ಕೆಂದು ತೆರಳಿದ ಸ್ಥಳೀಯರಾದ ಮಲ್ಲಪ್ಪ ಅವರಿಗೆ ದುರ್ವಾಸನೆ ಬಂದಿದ್ದು, ಹೊಳೆ ಬದಿಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಕಂಡುಬಂದಿದೆ. ಜಲಪಾತದಲ್ಲಿ ಬಿದ್ದ ಒಂದೆರಡು ದಿನದಲ್ಲೇ ಮೃತದೇಹ ಇಲ್ಲಿಗೆ ಕೊಚ್ಚಿಕೊಂಡು ಬಂದಿರಬಹುದು ಎಂದು ಸಂಶಯಿಸಲಾಗಿದೆ. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯ ವೈದ್ಯ ಶರತ್‍ಬಾಬು ಅವರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ವಾರಸುದಾರರಿಗೆ ಹಸ್ತಾಂತರಿಸ ಲಾಗಿದೆ.

ಕಳೆದ ತಾ. 22ರಂದು ಶಾಂತಳ್ಳಿಯಲ್ಲಿ ಆಯೋಜನೆ ಗೊಂಡಿದ್ದ ತನ್ನ ಸ್ನೇಹಿತನ ಸಂಬಂಧಿಯ ವಿವಾಹ ಆರತಕ್ಷತೆಗೆ ತೆರಳಿದ್ದ ಕುಶಾಲನಗರ ಸಮೀಪದ ಸುಂದರನಗರ ಗ್ರಾಮದ ಪರಮೇಶ್ವರಿ ಅವರ ಪುತ್ರ ಮನೋಜ್, ಅಲ್ಲಿಂದ ಇತರ ಐದು ಮಂದಿ ಸ್ನೇಹಿತರೊಂದಿಗೆ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದನು. ಈ ಸಂದರ್ಭ ಜಲಪಾತದ ಬಳಿ ಸೆಲ್ಫಿ ತೆಗೆಯುವ ಸಂದರ್ಭ ಆಕಸ್ಮಿಕವಾಗಿ ಬಿದ್ದು ನೀರು ಪಾಲಾಗಿದ್ದ.