ಸೋಮವಾರಪೇಟೆ, ಜೂ. 29: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೇಗೋಡು ಗ್ರಾಮದಲ್ಲಿ ಪ್ರಭಾವಿ ವ್ಯಕ್ತಿಯೋರ್ವರು ಸರ್ಕಾರಿ ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು, ಮುಂದಿನ 15 ದಿನಗಳ ಒಳಗೆ ಕಂದಾಯ ಇಲಾಖೆ ತೆರವುಗೊಳಿಸದಿದ್ದರೆ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದೇಗೋಡು ಗ್ರಾಮದ ಸ.ನಂ. 18/28ರ ಸರ್ಕಾರಿ ಜಮೀನನ್ನು ಸ್ಥಳೀಯ ವ್ಯಕ್ತಿ ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ತಹಶೀಲ್ದಾರ್ ಆದೇಶ ನೀಡಿದ್ದರು. ಶನಿವಾರಸಂತೆ ಕಂದಾಯ ಇಲಾಖೆಯ ಸಿಬ್ಬಂದಿ ಒಂದು ದಿನ ಮಾತ್ರ ತೆರವು ಕಾರ್ಯ ಕೈಗೊಂಡು, ನಂತರ ಸುಮ್ಮನಾಗಿದ್ದಾರೆ ಎಂದು ದೂರಿದರು.

ಕಂದಾಯ ಇಲಾಖೆ ಕೂಡಲೇ ತೆರವು ಕಾರ್ಯಾಚರಣೆ ಪ್ರಾರಂಭಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದಿಂದ ಆಹೋರಾತ್ರಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವದು ಎಂದು ದೀಪಕ್ ಎಚ್ಚರಿಸಿದರು.

ಗೋಷ್ಠಿಯಲ್ಲಿ ಕರವೇ ಮಹಿಳಾ ಘಟಕದ ಅಧ್ಯಕ್ಷೆ ರೂಪ ಸುರೇಶ್, ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್, ಉಪಾಧ್ಯಕ್ಷ ಚಂದ್ರು, ನಿಡ್ತ ಗ್ರಾಪಂ ಸದಸ್ಯ ಎಂ.ಪಿ. ದಯಾನಂದ, ಗ್ರಾಮಸ್ಥ ಎಂ.ಎಂ. ನಂದೀಶ್ ಉಪಸ್ಥಿತರಿದ್ದರು.