ವೀರಾಜಪೇಟೆ, ಜೂ. 29: ಸಮಾಜದ ಪ್ರತಿಯೊಬ್ಬರಿಗೂ ಕಾನೂನಿನ ಅರಿವಿರಬೇಕೆಂದು ತಾಲೂಕು ಕಾನೂನು ಸೇವೆಗಳ ಸಂಘಟನೆ ಮನೆಯ ಬಾಗಿಲ ಬಳಿಯಲ್ಲಿಯೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತಿರುವದರಿಂದ ಇದನ್ನು ಪ್ರತಿಯೊಬ್ಬರು ಪ್ರತಿಪಾದಿಸಿ ಸದುಪಯೋಗಪಡಿಸಿಕೊಳ್ಳುವಂತಾಗಬೇಕೆಂದು ವೀರಾಜಪೇಟೆ ಸಮುಚ್ಚಯ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಹೇಳಿದರು.

ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಾನೂನು ಸಾಕ್ಷರತಾ ರಥದ ಮೂಲಕ ಸಮೀಪದ ಅಮ್ಮತ್ತಿ ಜಿ.ಎಂ.ಪಿ. ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿದ ನ್ಯಾಯಾಧೀಶ ಶಿವಾನಂದ ಲಕ್ಷ್ಮಣ ಅಂಚಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿನಿಯರಿಗೆ ಶಾಲೆಗಳಲ್ಲಿ ಇಲ್ಲವೇ ದಾರಿಯಲ್ಲಿ ದೌರ್ಜನ್ಯಗಳು ನಡೆದಲ್ಲಿ ಶಿಕ್ಷಕರಿಗೆ ಹಾಗೂ ಪೋಷಕರಿಗೆ ಕೂಡಲೇ ತಿಳಿಸಬೇಕು. ಸಾಧ್ಯವಾಗದಿದ್ದಲ್ಲಿ ನ್ಯಾಯಾಲಯಕ್ಕೆ ಪತ್ರದ ಮೂಲಕ ದೂರು ನೀಡಿ ರಕ್ಷಣೆ ಪಡೆದು ಉತ್ತಮ ಶಿಕ್ಷಣದಿಂದ ತಮ್ಮ ನಿರೀಕ್ಷಿತ ಗುರಿ ಮುಟ್ಟುವಂತಾಗಬೇಕು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಎಂ.ಎಸ್. ವೆಂಕಟೇಶ್ ‘ಮಹಿಳೆ ಮತ್ತು ಕಾನೂನು’ ಎಂಬ ವಿಷಯದ ಕುರಿತು ಮಾತನಾಡಿ, ಭಾರತದ ಸಂವಿಧಾನ ದಡಿಯಲ್ಲಿ ಮೂಲಭೂತ ಹಕ್ಕು ಪಡೆಯಲು ಜಾತಿ ವರ್ಗ ಬೇಧವಿಲ್ಲದೆ ಪ್ರತಿಯೊಬ್ಬರು ಸಮಾನರು. ಹಿಂದಿನಿಂದಲೂ ಮನೆಯ ಕೆಲಸದಲ್ಲಿಯೇ ಮಗ್ನರಾಗಿದ್ದ ಮಹಿಳೆ ಇಂದು ಸಮಾಜದಲ್ಲಿ ಸಂಘಟನೆಯ ಮೂಲಕ ಬ್ಯಾಂಕ್ ವ್ಯವಹಾರಗಳು ಸೇರಿದಂತೆ ಪುರುಷರಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿರುವದು ಎಲ್ಲರಿಗೂ ತಿಳಿದಿರುವ ವಿಷಯ. ಇಂದು ಕಾನೂನಿನ ಅರಿವನ್ನು ಮಹಿಳೆಯರಿಗಿಂತ ಮಕ್ಕಳಿಗೆ ಅರಿವು ಮೂಡಿಸಿದರೆ ಮುಂದೆ ಉತ್ತಮ ಸಮಾಜ ನಿರ್ಮಾಣದ ಸಾಧ್ಯ. ಮಕ್ಕಳ ಹಕ್ಕು ಮತ್ತು ರಕ್ಷಣೆಯ ಕಾನೂನನ್ನು ಪೋಷಕರು ಅರಿತಿರಬೇಕು. ವಿದ್ಯಾರ್ಥಿಗಳನ್ನು ದುಶ್ಚಟಗಳಿಂದ ದೂರವಿರಿಸಲು ಪೋಷಕರ ಪ್ರಯತ್ನ ಅಗತ್ಯ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಬೋಸ್ ದೇವಯ್ಯ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನಿನ ಅರಿವಿದ್ದರೆ ಸುಖ ಶಾಂತಿ ನೆಮ್ಮದಿಯ ಸಮಾಜವನ್ನು ಕಾಣಬಹುದು ಎಂದು ಹೇಳಿದರು.

ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸದಸ್ಯೆ ಶೋಭ ಶ್ರೀನಿವಾಸ್, ಜಿ.ಎಂ.ಪಿ. ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾವತಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಸದಾನಂದ, ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯೆ ಜಯಮ್ಮ ಇತರರು ವೇದಿಕೆಯಲ್ಲಿದ್ದರು. ಅಮ್ಮತ್ತಿ ಗ್ರಾ.ಪಂ. ಸದಸ್ಯ ಹಾಗೂ ವಕೀಲ ಎನ್.ಎಸ್. ಪ್ರಶಾಂತ್ ಸ್ವಾಗತಿಸಿ, ವಂದಿಸಿದರು.