ಸೋಮವಾರಪೇಟೆ, ಜೂ. 29: ಟಿಂಬರ್ ಲಾರಿಗಳ ಸಂಚಾರದಿಂದ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ ಗ್ರಾಮೀಣ ರಸ್ತೆ ಹದಗೆಟ್ಟಿದೆ. ರಾಜ್ಯ ಹೆದ್ದಾರಿಯ ಹೊಸತೋಟದಿಂದ ಗರಗಂದೂರು ಗ್ರಾಮವನ್ನು ಸಂಪರ್ಕಿಸುವ ರೂ. 8.50 ಕೋಟಿ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದ್ದು, ಈಗಾಗಲೇ ರಸ್ತೆಯಲ್ಲಿ ಸಣ್ಣಪುಟ್ಟ ವಾಹನಗಳ ಸಂಚಾರವಿದೆ. ಈ ಮಧ್ಯೆ ಪ್ರತಿನಿತ್ಯ ಈ ರಸ್ತೆಯಲ್ಲಿ ಟಿಂಬರ್ ಮರಗಳನ್ನು ತುಂಬಿಸಿಕೊಂಡು ಲಾರಿಗಳು ಸಂಚರಿಸುತ್ತಿದ್ದು, ಕುಂಬಾರಬಾಣೆ ಎಂಬಲ್ಲಿ ರಸ್ತೆ ಬದಿಯಲ್ಲಿ ಹೊನ್ನೆ, ನಂದಿ, ಸಿಲ್ವರ್ ಮರಗಳನ್ನು ನಾಟಗಳನ್ನಾಗಿ ಪರಿವರ್ತಿಸಿ, ರಸ್ತೆ ಬದಿಯಲ್ಲೆ ಸಂಗ್ರಹಿಸಿದ್ದಾರೆ. ಇದರಿಂದ ಕೋಟಿ ವೆಚ್ಚದ ಗ್ರಾಮೀಣ ರಸ್ತೆ ತೀರಾ ಹಾಳಾಗುತ್ತಿದ್ದು, ಇತರ ವಾಹನಗಳ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದ್ದರೂ ಲೋಕೋಪಯೋಗಿ ಇಲಾಖೆ ಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ರಸ್ತೆಯಲ್ಲಿ ಟಿಂಬರ್ ಸಾಗಿಸುವ ಲಾರಿಗಳ ಸಂಚಾರವನ್ನು ತಡೆಹಿಡಿಯಬೇಕು. ಲಘು ವಾಹನಗಳ ಓಡಾಟಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕೆಂದು ಗರಗಂದೂರು ಗ್ರಾಮದ ಲಕ್ಷ್ಮಣ್ ಸೇರಿದಂತೆ ಇತರರು ಆಗ್ರಹಿಸಿದ್ದಾರೆ.