ಮಡಿಕೇರಿ, ಜೂ. 29: ಜಿಲ್ಲೆಯಲ್ಲಿ ಮುಂಗಾರು ಮಳೆಯು ಚುರುಕುಗೊಂಡಿರುವ ಬೆನ್ನಲ್ಲೇ ಜಿಲ್ಲೆಯ ಏಕೈಕ ಹಾರಂಗಿ ಜಲಾಶಯದ ನೀರಿನ ಮಟ್ಟ ಹೆಚ್ಚುವಂತಾಗಿದೆ. ಪ್ರಸಕ್ತ 2859 ಅಡಿಗಳ ಗರಿಷ್ಠ ನೀರಿನ ಮಟ್ಟಕ್ಕೆ ಕೇವಲ 13 ಅಡಿಗಳಷ್ಟು ಕಡಿಮೆಯಿದೆ. ಇಂದಿಗೆ ಜಲಾಶಯದ ನೀರಿನ ಮಟ್ಟ 2845.5 ಅಡಿಗಳಷ್ಟು ಭರ್ತಿಗೊಂಡಿದೆ. ಕಳೆದ ವರ್ಷ ಇದೇ ಅವಧಿಗೆ 2821.5 ಅಡಿ ಮಾತ್ರ ತುಂಬಿತ್ತು.

ಇಲ್ಲಿ ಕಳೆದ ಸಾಲಿನ ಈ ಅವಧಿಗಿಂತ 24 ಅಡಿ ನೀರಿನ ಮಟ್ಟ ಗರಿಷ್ಠವಿದ್ದು, ಜಲಾಶಯಕ್ಕೆ 5485 ಕ್ಯೂಸೆಕ್ಸ್ ಒಳ ಹರಿವು ಇದೆ. ಕಳೆದ ವರ್ಷ ನೀರಿನ ಒಳ ಹರಿವು ಈ ವೇಳೆ 941 ಕ್ಯೂಸೆಕ್ಸ್ ಇತ್ತು. ಪ್ರಸಕ್ತ 30 ಕ್ಯೂಸೆಕ್ಸ್ ನೀರು ನದಿಗೆ ಹರಿಯುವಂತಾಗಿದೆ.

ಮಳೆ ವಿವರ : ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 1 ಇಂಚು ಮಳೆಯಾಗಿದೆ. ವರ್ಷಾರಂಭದಿಂದ ಇದುವರೆಗೆ 52.47 ಇಂಚು ದಾಖಲಾಗಿದ್ದು, ಕಳೆದ ವರ್ಷ ಈ ಅವಧಿಗೆ 26.66 ಇಂಚು ಮಳೆಯೊಂದಿಗೆ 25.81 ಇಂಚು ಪ್ರಸಕ್ತ ಅಧಿಕ ದಾಖಲಾಗಿದೆ.

ತಾಲೂಕುವಾರು : ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ 71.55 ಇಂಚು ಮಳೆಯಾಗಿದ್ದು, ಕಳೆದ ವರ್ಷ ಈ ಅವದಿಗೆ 34.84 ಇಂಚು ದಾಖಲಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ 48.63 ಇಂಚು ಇದುವರೆಗೆ ಮಳೆಯಾಗಿದ್ದು, ಹಿಂದಿನ ಅವಧಿಯಲ್ಲಿ 24.45 ಇಂಚು ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ಅವದಿಯಲ್ಲಿ 37.23 ಇಂಚು ಮಳೆಯಾಗಿದೆ. ಹಿಂದಿನ ವರ್ಷ ಈ ದಿನಕ್ಕೆ ಕೇವಲ 20.20 ಇಂಚು ದಾಖಲಾಗಿತ್ತು.

24 ಗಂಟೆ ಮಳೆ : ಕಳೆದ 24 ಗಂಟೆಗಳಲ್ಲಿ ಮಡಿಕೇರಿಗೆ 1 ಇಂಚು, ವೀರಾಜಪೇಟೆ 0.78 ಇಂಚು, ಸೋಮವಾರಪೇಟೆ 0.66 ಇಂಚು, ಭಾಗಮಂಡಲ 1.77 ಇಂಚು, ತಲಕಾವೇರಿಗೆ 1.97 ಇಂಚು ಮಳೆಯಾಗಿದೆ. ಅಂತೆಯೇ ನಾಪೋಕ್ಲು 0.51 ಇಂಚು, ಸಂಪಾಜೆ 1.04 ಇಂಚು, ಹುದಿಕೇರಿ 1.35 ಇಂಚು, ಶ್ರೀಮಂಗಲ 0.59 ಇಂಚು, ಪೊನ್ನಂಪೇಟೆ 0.65 ಇಂಚು, ಅಮ್ಮತ್ತಿ 0.70, ಬಾಳೆಲೆ 0.55, ಶನಿವಾರಸಂತೆ 0.37 ಇಂಚು ಮಳೆಯಾಗಿದೆ.