ಶನಿವಾರಸಂತೆ, ಜೂ. 29: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಮತ್ತು ನದಿ ಶುದ್ಧೀಕರಣ ಕನಸು ಕೇವಲ ಸರ್ಕಾರಿ ಕಚೇರಿ ಮತ್ತು ಗ್ರಾಮ ಪಂಚಾಯಿತಿಗಳ ಗೋಡೆ ಬರಹಕಷ್ಟೇ ಸೀಮಿತವಾಗಿದೆ. ಶನಿವಾರಸಂತೆ ಗ್ರಾಮ ಪಂಚಾಯಿತಿ, ಪಟ್ಟಣ ಮಾತ್ರ ಸ್ವಚ್ಛತೆಗೆ ತದ್ವಿರುದ್ಧವಾಗಿದೆ. ಹೇಮಾವತಿ ನದಿಯನ್ನೇ ಮಾಲಿನ್ಯಗೊಳಿಸಿದೆ ಎಂದು ಗಡಿಭಾಗ ಹೊಸೂರಿನ ಹೇಮಾವತಿ ಸಂಘಟನೆ ಅಧ್ಯಕ್ಷ ಎಚ್.ಕೆ. ರಮೇಶ್ ಆರೋಪಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪಟ್ಟಣದ ಮುಖ್ಯರಸ್ತೆಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಹೇಮಾವತಿ ನದಿ ದಡವಿದ್ದು, ಅಲ್ಲಿ ಇಡೀ ಪಟ್ಟಣದ ಕಸವನ್ನು ಟ್ರ್ಯಾಕ್ಟರ್‍ನಲ್ಲಿ ತುಂಬಿಸಿ ತಂದು ಸುರಿಯಲಾಗುತ್ತಿದೆ. ಇದರಿಂದಾಗಿ ನದಿಯ ಒಡಲು ಕಸದ ಗುಂಡಿಯಾಗಿದೆ. ಕಸ ಕರಗಿ ಗಬ್ಬು ವಾಸನೆಯಿಂದ ನೊಣಗಳ ಹಾವಳಿ ಹೆಚ್ಚಾಗಿ ಪರಿಸರ ಮಾಲಿನ್ಯಗೊಳ್ಳುತ್ತಿದೆ.

ಕಸದ ರಾಶಿ ನದಿಯಲ್ಲಿ ತುಂಬಿ ಕೆಳಭಾಗದ ಗುಡುಗಳಲೆ, ಮೂದರವಳ್ಳಿ, ಬಾಗೇರಿ, ಹಂಡ್ಲಿ ಗ್ರಾಮಗಳಲ್ಲಿ ಸಾವಿರಾರು ಮಂದಿ ರೈತರು, ಜಾನುವಾರುಗಳು, ಪ್ರಾಣಿ- ಪಕ್ಷಿಗಳು ಈ ಕಲುಷಿತ ನೀರನ್ನೇ ಅವಲಂಬಿಸುವ ದುಸ್ಥಿತಿ ಬಂದೊದಗಿದೆ. ಜೀವಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ನದಿ ಒಡಲನ್ನು ಕಸದಿಂದ ಮುಕ್ತಗೊಳಿಸದಿದ್ದಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು, ವಿದ್ಯಾರ್ಥಿ ಗಳೊಂದಿಗೆ ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ರಮೇಶ್, ಕರುಣ್ ಕುಮಾರ್, ಆದರ್ಶ, ಮೋಹನ್, ಕಿರಣ್, ಕಾವೇರಿ ಸೇನೆ ತಾಲೂಕು ಅಧ್ಯಕ್ಷ ಶಶಿ, ವಿಶ್ವಾಸ್, ವಿನೋದ್ ಮತ್ತಿತರರು ಎಚ್ಚರಿಸಿದ್ದಾರೆ.