ಸೋಮವಾರಪೇಟೆ, ಜೂ. 29: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸುವ ಮೂಲಕ ಹೊಗೆ ಮುಕ್ತ ಗ್ರಾಮದ ಕನಸನ್ನು ಸಾಕಾರಗೊಳಿಸಬೇಕಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆಯಿತ್ತರು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ತಾಲೂಕಿನ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಉಜ್ವಲ ಯೋಜನೆಯ ಬಗ್ಗೆ ಮಾಹಿತಿ, ಪ್ರಧಾನ ಮಂತ್ರಿ ಎಲ್‍ಪಿಜಿ ಪಂಚಾಯತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ಯಾವೊಬ್ಬ ಮನೆಯ ಮಹಿಳೆಯೂ ಹೊಗೆಯಿಂದ ಸಂಕಷ್ಟ ಅನುಭವಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಉಚಿತವಾಗಿ ಗ್ಯಾಸ್ ಒದಗಿಸುವ ಯೋಜನೆಯನ್ನು ಜಾರಿಗೆ ತಂದಿದ್ದು, ಬಿಪಿಎಲ್ ಕಾರ್ಡ್‍ದಾರರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ರಂಜನ್ ತಿಳಿಸಿದರು.

ಸೌದೆ ಒಲೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾ ಮಗಳು, ಗ್ಯಾಸ್ ಒಲೆಯನ್ನು ಉಪಯೋಗಿಸುವ ವಿಧಾನ, ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹೆಚ್.ಪಿ. ಗ್ಯಾಸ್ ಕಂಪೆನಿಯ ಗಣೇಶ್ ಅವರು ಮಹಿಳೆ ಯರಿಗೆ ಮಾಹಿತಿ ಒದಗಿಸಿದರು.

ತಾಲೂಕಿನ ಬೆಸೂರು ಗ್ರಾಮ ಪಂಚಾಯಿತಿಯ ನಿಲುವಾಗಿಲು, ಆಗಳಿ, ಚಿಕ್ಕಭಂಡಾರ ಗ್ರಾಮವನ್ನು ಮೊದಲ ಹಂತದಲ್ಲಿ ಹೊಗೆಮುಕ್ತ ಗ್ರಾಮಗಳನ್ನಾಗಿಸುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, ಇದುವರೆಗೂ ಗ್ಯಾಸ್ ಸಂಪರ್ಕ ಪಡೆಯದವರು ಅವಶ್ಯ ದಾಖಲೆಗಳನ್ನು ನೀಡಿದರೆ ಉಚಿತವಾಗಿ ಗ್ಯಾಸ್ ಸೌಲಭ್ಯ ಒದಗಿಸಲಾಗುವದು ಎಂದು ಕಾರ್ಯಕ್ರಮದಲ್ಲಿದ್ದ ಗಜಾನನ ಗ್ಯಾಸ್ ಸರ್ವಿಸ್‍ನ ಮಾಲೀಕ ಹಾಗೂ ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ. ರವಿ ತಿಳಿಸಿದರು.

ಬೆಸೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ರೋಟರಿ ಕ್ಲಬ್ ಕಾರ್ಯದರ್ಶಿ ನಾಗೇಶ್, ವಲಯ ಸೇನಾನಿ ಭರತ್ ಭೀಮಯ್ಯ, ಪದಾಧಿಕಾರಿ ಎ.ಎಸ್. ಮಲ್ಲೇಶ್ ಸೇರಿದಂತೆ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.