ಮಡಿಕೇರಿ, ಜೂ. 29: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ನೀಡುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗೆ ಹನ್ನೆರಡು ಸದಸ್ಯರ ವರದಿ ಆಯ್ಕೆಯಾಗಿದ್ದು, ‘ಶಕ್ತಿ’ಗೆ ಎರಡು ಪ್ರಶಸ್ತಿ ಲಭ್ಯವಾಗಿದೆ. ಜುಲೈ 22 ರಂದು ಪತ್ರಿಕಾ ಭವನದಲ್ಲಿ ನಡೆಯುವ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.

ಪತ್ರಕರ್ತರ ಸಂಘದಿಂದ ನೀಡಲಾಗುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ ‘ಶಕ್ತಿ’ಯಲ್ಲಿ ಪ್ರಕಟವಾದ ವಿಜಯ ಹಾನಗಲ್ ಬರೆದ ಮದ್ಯ ಮಾರಾಟ ಮುಕ್ತ ನೆಮ್ಮದಿಯ ತಾಣ ಶಾಂತಳ್ಳಿ ವರದಿ ಆಯ್ಕೆಯಾಗಿದೆ. ಸಂಘದ ಮಾಜಿ ಅಧ್ಯಕ್ಷ ಕೆ.ಕೆ.ಶಶಿಧರ್ ಸ್ಮರಣಾರ್ಥ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ಶಕ್ತಿಯಲ್ಲಿ ಪ್ರಕಟವಾದ ಕಾಯಪಂಡ ಶಶಿ ಸೋಮಯ್ಯ ಬರೆದ ದೇವರು ಕೊಟ್ಟರೂ ಪೂಜಾರಿ ಕೊಡ ಎಂಬ ಸ್ಥಿತಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ವರದಿ ಆಯ್ಕೆಯಾಗಿದೆ.

ಸಂಘದ ಉಪಾಧ್ಯಕ್ಷರಾಗಿದ್ದ ಸಿ.ಎನ್. ಸುನಿಲ್ ಕುಮಾರ್ ಸ್ಮರಣಾರ್ಥ ಸ್ಥಾಪಿಸಿರುವ ಅತ್ಯುತ್ತಮ ವೀಡೀಯೋಗ್ರಾಫಿ ಪ್ರಶಸ್ತಿಗೆ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಮನೋಜ್ ಕುಮಾರ್ ಅವರ ಬ್ರಹ್ಮಗಿರಿ ಬೆಟ್ಟದ ಸೊಬಗು ವೀಡಿಯೋ ಆಯ್ಕೆಯಾಗಿದೆ. ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿರುವ ಅತ್ಯತ್ತಮ ತನಿಖಾ ವರದಿ ಪ್ರಶಸ್ತಿಗೆ ಆಂದೋಲನಾದಲ್ಲಿ ಪ್ರಕಟವಾದ ಎಂ.ಎನ್. ನಾಸೀರ್ ಬರೆದ ಕಾವೇರಿ ನಾಡಿನಲ್ಲಿ ನದಿಯೊಡಲಿಗೆ ಕನ್ನ ವರದಿ ಆಯ್ಕೆಯಾಗಿದೆ.

(ಮೊದಲ ಪುಟದಿಂದ) ಕೋವರ್‍ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಕೋವರ್‍ಕೊಲ್ಲಿ ಚಂದ್ರಶೇಖರ್ ಸ್ಮರಣಾರ್ಥ ಸ್ಥಾಪಿಸಿರುವ ಮಾನವೀಯ ವರದಿಗೆ ಕೊಡಗು ಧ್ವನಿ ಪತ್ರಿಕೆಯಲ್ಲಿ ಪ್ರಕಟವಾದ ರಾಕೇಶ್ ಕೊಡಗು ಬರೆದ ಪಾಕಿಸ್ತಾನ ವಶದಲ್ಲಿರುವ ಮಗನಿಗಾಗಿ ಹಂಬಲಿಸುತ್ತಿರುವ ಹೆತ್ತ ಕರುಳು ವರದಿ ಆಯ್ಕೆಯಾಗಿದೆ. ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ವರದಿ ಪ್ರಶಸ್ತಿಗೆ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಪುತ್ತರಿರ ಕರುಣ್ ಕಾಳಯ್ಯ ಬರೆದ ಪುಂಡಾನೆಗಳಿಗೆ ಪಾಠ ವರದಿ ಆಯ್ಕೆಯಾಗಿದೆ.

ಕೊಡಗು ಜಿಲ್ಲಾ ಬೆಳೆಗಾರರ ಸಂಘ ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ, ತಾಯಿ ಅಜ್ಜಮಾಡ ಸುಬ್ಬಯ್ಯ ಹಾಗೂ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ವರದಿ ಪ್ರಶಸ್ತಿಗೆ ಕನ್ನಡಪ್ರಭಾ ಪತ್ರಿಕೆಯಲ್ಲಿ ಪ್ರಕಟವಾದ ವಿಘ್ನೇಶ್ ಎಂ. ಭೂತನಕಾಡು ಬರೆದ ಪುನಶ್ಚೇತನ ಹಾದಿಯಲ್ಲಿದೆ ಕೊಡಗಿನ ವಿಶಿಷ್ಟ ಕಿತ್ತಳೆ ಬೆಳೆ ವರದಿ ಆಯ್ಕೆಯಾಗಿದೆ. ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಮಾವ ಕೋಟೇರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ ಪ್ರಶಸ್ತಿಗೆ ಪ್ರಜಾಸತ್ಯದಲ್ಲಿ ಪ್ರಕಟವಾದ ಟಿ.ಜೆ. ಕಿಶೋರ್‍ಕುಮಾರ್ ಶೆಟ್ಟಿ ಬರೆದ ಆರ್ಜಿ ತರ್ಮೆಮೊಟ್ಟೆಯಲ್ಲಿ 18 ತಿಂಗಳಲ್ಲಿ 14 ಮರಣ ವರದಿ ಆಯ್ಕೆಯಾಗಿದೆ.

ಕೈಬುಲಿರ ಪಾರ್ವತಿ ಬೋಪಯ್ಯ ತಮ್ಮ ತಂದೆ, ತಾಯಿ ಉತ್ತಯ್ಯ-ಸುಬ್ಬವ್ವ ಹೆಸರಿನಲ್ಲಿ ಸ್ಥಾಪಿಸಿರುವ ಪರಿಸರ ಮತ್ತು ನೈರ್ಮಲ್ಯ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟವಾದ ಸುನಿಲ್ ಪೊನ್ನೇಟಿ ಬರೆದ ದೋಣಿಗಳ ಅಬ್ಬರಕ್ಕೆ ಕರಗುತ್ತಿವೆ ದುಬಾರೆ ದ್ವೀಪಗಳು ವರದಿ ಆಯ್ಕೆಯಾಗಿದೆ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನಿರ್ದೇಶಕ ಎಸ್.ಎ. ಮುರಳೀಧರ ತಮ್ಮ ತಾಯಿ ಪಾರ್ವತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟವಾದ ಹಿರಿಕರ ರವಿ ಬರೆದ ಭತ್ತದ ಕಣಜದಲ್ಲಿ ಬರದ ಕಾರ್ಮೋಡ ವರದಿ ಆಯ್ಕೆಯಾಗಿದೆ. ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಕಾಧ್ಯಕ್ಷ ಮಂದ್ರಿರ ಮೋಹನ್‍ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟವಾದ ಸಣ್ಣುವಂಡ ಕಿಶೋರ್ ನಾಚಪ್ಪ ಬರೆದ ಕಾರೇಕಾಡ್ಸ್ ಹೆಸರಿನಲ್ಲಿ ಶುದ್ಧ ಹಾಲು ಮಾರಾಟ ವರದಿ ಆಯ್ಕೆಯಾಗಿದೆ.

ಶಕ್ತಿ ಸಂಪಾದಕರಾಗಿದ್ದ ಬಿ.ಜಿ. ಅನಂತಶಯನ ತಮ್ಮ ಹೋಂಸ್ಟೇ ಆಲ್ಪೆನ್ ಗ್ಲೋ ಹೆಸರಿನಲ್ಲಿ ಸ್ಥಾಪಿಸಿರುವ ಸುದ್ದಿ ಛಾಯಾಚಿತ್ರ ಪ್ರಶಸ್ತಿಗೆ ವಿಜಯವಾಣಿಯಲ್ಲಿ ಪ್ರಕಟವಾಗಿರುವ ಸುನಿಲ್ ಪೊನ್ನೇಟಿ ಅವರ ನಿಸರ್ಗಧಾಮಕ್ಕೆ ಹೊಸ ಸ್ಪರ್ಶ ಶಿರೋನಾಮೆಯ ಚಿತ್ರ ಆಯ್ಕೆಯಾಗಿದೆ.

ಸ್ವಸ್ಥ ಸಂಸ್ಥೆ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಪ್ರಶಸ್ತಿಗೆ ವಿಶ್ವವಾಣಿಯಲ್ಲಿ ಪ್ರಕಟವಾದ ಎಚ್.ಟಿ. ಅನಿಲ್ ಬರೆದ ವಿಶೇಷ ಚೇತನ ಮಕ್ಕಳಿಗೆ ದೇವರಪುರದಲ್ಲಿದೆ ಅಮೃತವಾಣಿ ವರದಿ ಆಯ್ಕೆಯಾಗಿದೆ. ಜಿಲ್ಲಾ ಪಂಚಾಯಿ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ತಮ್ಮ ತಾಯಿ ಬಲ್ಲಾರಂಡ ಮಾಚಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ರಾಜಕೀಯ ವರದಿ ಪ್ರಶಸ್ತಿಗೆ ವಿಶ್ವವಾಣಿಯಲ್ಲಿ ಪ್ರಕಟವಾದ ಯಾರಿಗೂ ಬೇಡವಾದ ಟಿಪ್ಪು ಜಯಂತಿ ಈ ಸರಕಾರಕೆ ಮಾತ್ರ ಬೇಕಂತೆ ವರದಿ ಆಯ್ಕೆಯಾಗಿದೆ.

ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ತಮ್ಮ ತಂದೆ ಮೇರಿಯಂಡ ಪೂವಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಹುಲಿ ಸಂರಕ್ಷಣೆ ಕುರಿತಾದ ವರದಿ ಪ್ರಶಸ್ತಿಗೆ ವಿಶ್ವವಾಣಿಯಲ್ಲಿ ಪ್ರಕಟವಾದ ಇಟ್ಟಿದ್ದ ಉರುಳಿಗೆ ಲೆಕ್ಕ ಸಿಕ್ಕಿತ್ತು, ಪ್ರಾಣಿಗಳ ಸಾವಿಗೆ ? ವರದಿ ಆಯ್ಕೆಯಾಗಿದೆ. ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ಮಂಡಿಬೆಲೆ ದ್ಯಾವಮ್ಮ ಶಾಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಗೆ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿರುವ ಬಾಚರಣಿಯಂಡ ಅನು ಕಾರ್ಯಪ್ಪ ಅವರ ಬ್ರಹ್ಮಗಿರಿ ಬೆಟ್ಟದ ಸೊಬಗು ವರದಿ ಆಯ್ಕೆಯಾಗಿದೆ.