ಮಡಿಕೇರಿ, ಜೂ. 30 : ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಬಡವರ ಕಲ್ಯಾಣಕ್ಕಾಗಿ ರೂಪಿಸಿರುವ ಅನೇಕ ಯೋಜನೆಗಳು ಕಾರು-ಬಂಗಲೆಯೊಂದಿಗೆ ಹತ್ತಾರು ಎಕರೆ ತೋಟಗಳನ್ನು ಹೊಂದಿರುವ ಬಲಾಢ್ಯರಿಗೆ ಕಲ್ಪಿಸಿ; ಬಡ ರೈತರು ಮತ್ತು ಕಾರ್ಮಿಕರನ್ನು ವಂಚಿಸ ಲಾಗುತ್ತಿದೆ ಎಂಬ ಗಂಭೀರ ಆರೋಪ ಇಂದಿನ ತಾ.ಪಂ. ಪ್ರಗತಿ ಪರಿಶೀಲನಾ ಸಭೆಯಲ್ಲಿ ವ್ಯಕ್ತವಾಯಿತು.ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಇಲಾಖೆಯ ಕಾರ್ಯವೈಖರಿ ವಿರುದ್ಧ ಜನಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ, ವಸತಿ ಯೋಜನೆಯೂ ಸೇರಿದಂತೆ ಸರಕಾರದ ಸೌಲಭ್ಯ ಪಡೆಯುವಲ್ಲಿ ಆದಾಯ ದೃಢೀಕರಣ ನೀಡುವಾಗ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು ಮತ್ತು ನಿರೀಕ್ಷಕರು ಬಡವರ ಶೋಷಣೆಯಲ್ಲಿ ತೊಡಗಿರುವ ಅಸಮಾಧಾನ ವ್ಯಕ್ತವಾಯಿತು.
ಮೂರ್ನಾಡು, ಬಲ್ಲಮಾವಟಿ, ಗಾಳಿಬೀಡು ಸೇರಿದಂತೆ ವಸತಿ ಯೋಜನೆಯಡಿ ಬಡವರ ಮನೆಗೆ ಹೆಚ್ಚಿನ ಆದಾಯ ದೃಢೀಕರಣ ಪತ್ರಗಳನ್ನು ನೀಡಿ, ಅವಕಾಶ ಕೈ ತಪ್ಪುವಂತೆ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂತು. ಚೇಲಾವರ ಗ್ರಾಮದ ಸಣ್ಣ ರೈತರೊಬ್ಬರಿಗೆ ತಂದೆ-ತಾಯಿ ಸಹಿತ ಪ್ರತಿ ಸದಸ್ಯರಿಗೆ ಕುಟುಂಬದಲ್ಲಿ ತಲಾ ರೂ. 12 ಲಕ್ಷದಂತೆ ಆದಾಯ ಪತ್ರ ಕಲ್ಪಿಸಿರುವ ಬಗ್ಗೆಯೂ ಆರೋಪ ಕೇಳಿ ಬಂತು.
ಈ ಬಗ್ಗೆ ಪಂಚಾಯಿತಿ ಹಾಗೂ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆ ಮಂದಿ ಆಮಿಷಗಳಿಗೆ ಒಳಗಾಗಿ ಬಡವರಿಗೆ ಯಾವದೇ ಸೌಲಭ್ಯ ಕೈಗೆಟುಕದಂತೆ ವಂಚಿಸು ತ್ತಿದ್ದಾರೆ ಎಂದು ಬಲ್ಲಮಾವಟಿ ಗ್ರಾ.ಪಂ. ಅಧ್ಯಕ್ಷೆ ಸರಸು ಪೆಮ್ಮಯ್ಯ, ಮೂರ್ನಾಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸೇರಿದಂತೆ ಇತರರು ಅಸಮಾಧಾನ ವ್ಯಕ್ತಪಡಿಸಿದರು.(ಮೊದಲ ಪುಟದಿಂದ) ಈ ಹಂತದಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರು, ತಹಶೀಲ್ದಾರ್ ಕುಸುಮ ಅವರಿಗೆ ತಾಕೀತು ಮಾಡಿ ಅಂಥ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರ ವಿರುದ್ಧ ಜಿಲ್ಲಾಧಿಕಾರಿ ಅವರಿಗೆ ದೂರು ಸಲ್ಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ನಿರ್ದೇಶಿಸಿದರು. ಇಂಥ ಪರಿಸ್ಥಿತಿ ಅಧಿಕಾರಿಗಳಿಂದ ನಡೆಯುತ್ತಿದ್ದರೆ, ಸರಕಾರ ಬಡವರಿಗೆ ನೆರವು ಕಲ್ಪಿಸುವದಾದರೂ ಹೇಗೆಂದು ಪ್ರಶ್ನಿಸಿದರು.ಪಿಡಿಓಗೆ ಸೂಚನೆ : ಗಾಳಿಬೀಡು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಶಿಕಿರಣ್ ಕೆಲವರಿಗೆ ಮನೆ ನಿರ್ಮಾಣಕ್ಕೂ ಸೂಕ್ಷ್ಮ ಪರಿಸರ ವಿಷಯದಲ್ಲಿ ಅಡ್ಡಿಪಡಿಸುತ್ತಿರುವದಾಗಿ ನೇರ ಪ್ರಶ್ನಿಸಿದ ಶಾಸಕರು, ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ಮೊದಲೇ ಅರಣ್ಯ ಇಲಾಖೆ ಜತೆಗೂಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವದಾಗಿ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮೀಣ ಜನತೆಗೆ ಮೂಲಭೂತ ಸೌಲಭ್ಯಕ್ಕೆ ಅಡ್ಡಿಪಡಿಸುವ ಮುನ್ನ ತಮ್ಮ ಮನೆಗಳಿಗೆ ಹಾಗಾದರೆ ಹೇಗಾಗಬಹುದು ನೋಡಿಕೊಳ್ಳಿ ಎಂದು ಮಾರ್ಮಿಕವಾಗಿ ನುಡಿದರು.
ಇಂಥ ಕಿರುಕುಳ ನಿಲ್ಲಿಸುವಂತೆ ಯೂ ಅಧಿಕಾರಿಗೆ ಸೂಚಿಸಿದರು.
ಇಂಜಿನಿಯರ್ ತರಾಟೆಗೆ : ಮಡಿಕೇರಿ ನಗರಸಭಾ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಬಗ್ಗೆ ಇಂಜಿನಿಯರ್ ಪ್ರಸನ್ನ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಈ ಕಾಮಗಾರಿಯಿಂದ ನಗರದ ರಸ್ತೆಗಳೆಲ್ಲ ಹಾಳಾಗಿ ಜನತೆ ಹಿಡಿಶಾಪ ಹಾಕುತ್ತಿದ್ದು, ನಗರಸಭೆಗೂ ನಿಮ್ಮಿಂದ ಕೆಟ್ಟ ಹೆಸರು ಬರುವಂತಾಗಿದೆ ಎಂದು ಚಾಟಿ ಬೀಸಿದರು.
ಗಾಂಜಾ ದಂಧೆಗೆ ಆಕ್ರೋಶ : ಜಿಲ್ಲೆಯ ಪಟ್ಟಣ ಪ್ರದೇಶಗಳ ಸಹಿತ ಗ್ರಾಮೀಣ ಭಾಗಗಳಿಗೂ ಅಕ್ರಮ ಗಾಂಜಾ ದಂಧೆ ವ್ಯಾಪಿಸಿದ್ದು, ಇತ್ತ ಪೊಲೀಸ್ ಇಲಾಖೆ ನಿಗಾವಹಿಸುವಂತೆ ಶಾಸಕರು ಸೂಚಿಸಿದರೆ; ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಎಲ್ಲೆಡೆ ಗಸ್ತು ನಡೆಸುವಂತೆ ಪೊಲೀಸ್ ಇಲಾಖೆಗೆ ಸಲಹೆಯಿತ್ತರು. ಸ್ವತಃ ತಾ.ಪಂ. ಅಧ್ಯಕ್ಷೆ ಶೋಭಾ ಮೋಹನ್, ಸದಸ್ಯೆ ಕುಮುದ ರಶ್ಮಿ ಹಾಗೂ ಇತರರು ಗಾಂಜಾ ದಂಧೆಯಲ್ಲಿ ಯುವ ಸಮೂಹ ಮತ್ತು ವಿದ್ಯಾರ್ಥಿಗಳು ಸಿಲುಕಿರುವದಾಗಿ ಆತಂಕ ವ್ಯಕ್ತಪಡಿಸುತ್ತಾ; ಪೊಲೀಸ್ ಇಲಾಖೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿದರು.
ಕುಂಡಾಮೇಸ್ತ್ರಿ ಪ್ರತಿಧ್ವನಿ : ಮಡಿಕೇರಿಗೆ ಕುಂಡಾಮೇಸ್ತ್ರಿಯಿಂದ ಕುಡಿಯುವ ನೀರಿನ ಯೋಜನೆ ಕಲ್ಪಿಸಲು ಕಾಮಗಾರಿ ಇನ್ನು ಪೂರೈಸದೆ ಇರುವ ಬಗ್ಗೆ ಶಾಸಕ ಬೋಪಯ್ಯ ಅಸಮಾಧಾನ ಹೊರ ಹಾಕಿದರು. ಈ ಬಗ್ಗೆ ಹಂತ ಹಂತವಾಗಿ ಯೋಜನೆ ಪೂರ್ಣಗೊಳಿಸಲಾಗುತ್ತಿದೆ ಎಂದು ಆಯುಕ್ತೆ ಶುಭ ನುಡಿದರು. ಆ ಸಲುವಾಗಿ ಯೋಜನೆಯನ್ನು ಇನ್ನು ಕೂಡ ನಗರಸಭೆ ತನ್ನ ಸುಪರ್ದಿಗೆ ವಹಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಅಸಮಾಧಾನಗೊಳ್ಳದ ಶಾಸಕರು ಈ ವಿಷಯದಲ್ಲಿಯೂ ಇಂಜಿನಿಯರ್ ವಿರುದ್ಧ ಹರಿಹಾಯ್ದರು.
ಕೃಷಿ, ಶಿಶು ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರ್ವಜನಿಕ ಶಿಕ್ಷಣ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ, ಪರಿಶಿಷ್ಟ ಜಾತಿ - ವರ್ಗಗಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಅನುಪಾಲನಾ ವರದಿ ಮಂಡನೆಯೊಂದಿಗೆ ಚರ್ಚಿಸಿ ಸೂಕ್ತ ಕ್ರಮಕ್ಕೆ ತೀರ್ಮಾನಿಸಲಾಯಿತು. ತಾ.ಪಂ. ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸದಸ್ಯರುಗಳಾದ ಅಪ್ರು ರವೀಂದ್ರ, ಉಮಾ ಪ್ರಭು, ಶ್ರೀಧರ್, ಸುಭಾಷ್ ಸೋಮಯ್ಯ, ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್ ಮೊದಲಾದವರು ಅಬ್ಕಾರಿ ಇಲಾಖೆ ಕಾರ್ಯವೈಖರಿ ಸೇರಿದಂತೆ ಇತರ ವಿಷಯಗಳ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ತಾ.ಪಂ. ಅಧಿಕಾರಿ ಲಕ್ಷ್ಮೀ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ವಿವರಣೆ ನೀಡಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಗ್ರಾ.ಪಂ. ಪ್ರತಿನಿಧಿಗಳು, ಇಲಾಖಾ ಪ್ರಮುಖರು ಭಾಗವಹಿಸಿ ಮಾಹಿತಿಯಿತ್ತರು.