ಮಡಿಕೇರಿ, ಜೂ. 30: ಕೊಡಗಿನ ಮೂಲಕ ಮೈಸೂರು- ತಲಚೇರಿ ಸಂಪರ್ಕದ ರೈಲು ಮಾರ್ಗದ ವಿಚಾರವಾಗಿ ಇದೀಗ ಒಂದೆರಡು ದಿನಗಳಿಂದ ಬೇರೆ ಬೇರೆ ಮಾಧ್ಯಮಗಳಲ್ಲಿ ಮತ್ತೊಮ್ಮೆ ವಿಚಾರ ಪ್ರಸ್ತಾಪವಾಗುತ್ತಿದ್ದು, ಈ ವಿಚಾರ ಹಲವು ಗೊಂದಲಗಳಿಗೂ ಎಡೆಯಾಗಿದೆ. ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಅತಿ ಉತ್ಸಾಹದಲ್ಲಿರುವ ಕೇರಳದಲ್ಲಿ ಅಲ್ಲಿನ ವಿವಿಧ ಲಾಬಿಗಳು ಅವರದ್ದೇ ಆದ ಪ್ರಯತ್ನ ಮುಂದುವರಿಸುತ್ತಿವೆ. ಇದರಂತೆ ಈ ಉದ್ದೇಶಿತ ರೈಲು ಮಾರ್ಗದ ವಿಚಾರವಾಗಿ ಅಲ್ಲಿ ನಡೆಯುತ್ತಿರುವ ಪ್ರಯತ್ನಗಳು ಮಾಧ್ಯಮಗಳಲ್ಲಿ ವರದಿಯಾಗಿವೆ. ಈ ಕುರಿತು ಕೇರಳದಲ್ಲಿ ಟೆಕ್ನಿಕಲ್ ಬಿಡ್ ತೆರೆಯಲಾಗುತ್ತಿದೆ. ಅಲ್ಲದೆ ಡಿ.ಪಿ.ಆರ್. ತಯಾರಿಸಲು ವಿದೇಶಿ ಕಂಪೆನಿಗಳು ಕೂಡ ಆಸಕ್ತವಾಗಿವೆ ಎಂಬದು ಇದೀಗ ಬಯಲಾದ ಮಾಹಿತಿ. ಈ ಮಾರ್ಗಕ್ಕೆ ಸಂಬಂಧಿಸಿದಂತೆ ಕೊಡಗು ಸೇರಿದಂತೆ ಮೈಸೂರು ವಿಭಾಗದಲ್ಲಿ ಇರುವ ವಿರೋಧದ ನಡುವೆಯೂ ಕೇರಳದಲ್ಲಿ ಇಂತಹ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕ- ಗೊಂದಲವನ್ನು ಒಂದೆಡೆ ಸೃಷ್ಟಿಸಿದೆ.

ಇದು ಕೇವಲ ಸಂಪೂರ್ಣವಾಗಿ ಕೇರಳದಲ್ಲಿ ನಡೆಯುತ್ತಿರುವ ಪ್ರಯತ್ನ ಮಾತ್ರವಾಗಿದೆ. ಆದರೆ ಕರ್ನಾಟಕ ರಾಜ್ಯ ಸರಕಾರ ಈ ಕುರಿತು ಯಾವದೇ ಹಸಿರು ನಿಶಾನೆ ತೋರಿಲ್ಲ. ಅಲ್ಲದೆ ಕೇಂದ್ರದ ಮುಂದೆ ಈ ವಿಚಾರದ ಪ್ರಸ್ತಾಪವಿಲ್ಲ. ಇದು 1968ರಿಂದ ಕೇರಳದಿಂದ ನಡೆಯುತ್ತಿರುವ ಪ್ರಯತ್ನದ ಮತ್ತೊಂದು ಭಾಗವಷ್ಟೇ ಎಂಬದು ‘ಶಕ್ತಿ’ ಈ ಕುರಿತಾದ (ಮೊದಲ ಪುಟದಿಂದ) ವಿಚಾರವನ್ನು ಸ್ಪಷ್ಟಪಡಿಸಲು ಯತ್ನಿಸಿದ ಸಂದರ್ಭ ಕೆಲವು ಮೂಲಗಳಿಂದ ತಿಳಿದುಬಂದಿದೆ. ‘ಶಕ್ತಿ’ಗೆ ತಿಳಿದುಬಂದಂತೆ ಕೇರಳದಲ್ಲಿ ನಡೆದ ಹಾಗೂ ನಡೆಯುತ್ತಿರುವ ವಿಚಾರಗಳನ್ನು ಈ ಮೂಲಗಳು ಅಲ್ಲಗಳೆದಿಲ್ಲ. ಆದರೆ ಕರ್ನಾಟಕದಲ್ಲಿ ಈ ಕುರಿತಾಗಿ ಯಾವದೇ ಪ್ರಯತ್ನಗಳು ನಡೆದಿಲ್ಲ. ಈ ಹಿಂದೆ ಇರುವ ವಿರೋಧಿ ನಿಲುವೇ ಈಗಲೂ ಇದೆ. ಕೇರಳದಲ್ಲಿ ಅಲ್ಲಿನ ಲಾಬಿಗಳು ಪ್ರಯತ್ನ ನಡೆಸುತ್ತಿದ್ದರೆ ಇದಕ್ಕೆ ಏನೂ ಮಾಡಲಾಗದು. 1968ರಿಂದ ಇದು ಅಂದಾಜು 13ನೇ ಪ್ರಯತ್ನವಾಗಿದೆಯೇ ವಿನಃ ಕರ್ನಾಟಕದಿಂದಾಗಲಿ ಅಥವಾ ಕೇಂದ್ರದ ಮೂಲಕವಾಗಲಿ ಇದಕ್ಕೆ ಯಾವದೇ ಮನ್ನಣೆ ನೀಡಲಾಗಿಲ್ಲ. ಅಲ್ಲದೆ, ಈ ಪ್ರಸ್ತಾಪವನ್ನು ಮಾನ್ಯ ಮಾಡುವ ಅಂಶಗಳೂ ಮುಂದಿಲ್ಲವೆನ್ನಲಾಗಿದೆ. ಕೇರಳದ ಮಣ್ಣಿನಲ್ಲಿ ಅಲ್ಲಿನವರು ಏನೇ ಪ್ರಯತ್ನ ನಡೆಸಲಿ ಆದರೆ ರಾಜ್ಯದ ಮೂಲಕ ಇದಕ್ಕೆ ಪರಿಗಣನೆ ಇಲ್ಲದಿರುವದರಿಂದ ಇದೂ ಕೂಡ ಈ ಹಿಂದಿನ ಪ್ರಯತ್ನಗಳಂತೆ ನೆನೆಗುದಿಗೆ ಬೀಳಲೇಬೇಕು ಎಂಬದು ಈ ವಿಭಾಗದ ಹಲವರ ಖಚಿತ ನಿಲುವಾಗಿದೆ. ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ದಕ್ಷಿಣ ಕೊಡಗಿನಲ್ಲಿ ಕೆಲವರು ಸರ್ವೆ ನಡೆಸಿರುವದು ಕೂಡ ಜಿಲ್ಲೆಯಲ್ಲಿ ರೈಲು ಮಾರ್ಗಕ್ಕೆ ಇರುವ ವಿರೋಧದ ಆತಂಕವನ್ನು ಹೆಚ್ಚಿಸಿದೆ. ಆದರೆ ಈ ಕಾರ್ಯಕ್ಕೆ ಮುಂದಾಗಿದ್ದವರು ಅಧಿಕೃತವಾಗಿ ನಿಯೋಜನೆಗೊಂಡ ವ್ಯಕ್ತಿಗಳಲ್ಲ. ಕೊಡಗಿನ ಜಿಲ್ಲಾಧಿಕಾರಿಗಳೂ ಇದನ್ನು ಸ್ಪಷ್ಟಪಡಿಸಿದ್ದರು. ಅಲ್ಲದೆ ಇಲ್ಲಿನ ಜನಪ್ರತಿನಿಧಿಗಳು ಸೇರಿ ಕೇಳಿಬಂದಿರುವ ವಿರೋಧ ಯಥಾ ಸ್ಥಿತಿಯಲ್ಲೇ ಇದೆ. ಸದನದಲ್ಲೂ ಉದ್ದೇಶಿತ ಈ ರೈಲು ಮಾರ್ಗದ ಕುರಿತಾದ ಪ್ರಸ್ತಾಪಕ್ಕೆ ಒಪ್ಪಿಗೆಯಿಲ್ಲ ಎಂಬದೂ ದೃಢಪಟ್ಟಿದೆ. ಕೇಂದ್ರದ ರೈಲ್ವೆ ಸಚಿವರು ಸೇರಿದಂತೆ ಕೇಂದ್ರದಿಂದಲೂ ಇದಕ್ಕೆ ಸಾಧ್ಯತೆಯ (ಫೀಜಿಬಿಲಿಟಿ) ಒಪ್ಪಿಗೆ ನೀಡಲಾಗಿಲ್ಲ. ಇದೇ ಖಚಿತ ನಿಲುವು ಪ್ರಸ್ತುತವೂ ಇರುವದಾಗಿ ‘ಶಕ್ತಿ’ಗೆ ತಿಳಿದುಬಂದಿದೆ.

ಈ ಹಿಂದೆ ಜಿಲ್ಲೆಯಲ್ಲಿ ಮಕ್ಕಂದೂರು ತನಕ ರೈಲು ಮಾರ್ಗದ ಸಮೀಕ್ಷೆ ನಡೆದಿದೆಯಾದರೂ ಇದು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ವಿಚಾರ ಮಾತ್ರವಾಗಿದೆ. ಅದರಂತೆ ಕೇರಳದಲ್ಲಿ ನಡೆಯುತ್ತಿರುವದು ಅಲ್ಲಿನ ಪ್ರಯತ್ನವಷ್ಟೇ ಎನ್ನಲಾಗಿದೆ.

ಏಕೀಕರಣ ರಂಗ ಪ್ರತಿಕ್ರಿಯೆ

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ತಿಂಗಳ ಹಿಂದೆ ಕೇಂದ್ರ ಸಚಿವರಾದ ಅನಂತಕುಮಾರ್, ರೈಲ್ವೆ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಕೇಂದ್ರ ರೈಲ್ವೆ ಮಂಡಳಿಯ ಅಧ್ಯಕ್ಷರನ್ನೂ ಸಂಪರ್ಕಿಸಿದ್ದ ಕೊಡಗು ಏಕೀಕರಣ ರಂಗದ ಪ್ರಮುಖರಾದ ತಮ್ಮು ಪೂವಯ್ಯ ಅವರಿಂದ ‘ಶಕ್ತಿ’ ಮಾಹಿತಿ ಬಯಸಿದಾಗ ಅವರು ಕೂಡ ಕೇಂದ್ರ ಹಾಗೂ ರಾಜ್ಯದಿಂದ ಹಸಿರು ನಿಶಾನೆ ಇಲ್ಲದಿರುವ ಬಗ್ಗೆ ಖಾತರಿ ಇದೆ ಎಂದರು. ಈ ಕುರಿತು ಮತ್ತೆ ಹಲವು ದಾಖಲೆಗಳನ್ನು ಸಂಗ್ರಹಿಸಲಾಗಿದ್ದು, ಈ ವಿಚಾರದ ಕುರಿತು ಚರ್ಚೆ ನಡೆಸಲಿರುವದಾಗಿಯೂ ಅವರು ಈ ಸಂದರ್ಭ ಸ್ಪಷ್ಟಪಡಿಸಿದರು. ಉದ್ದೇಶಿತ ರೈಲು ಮಾರ್ಗದಿಂದ ಯಾವದೇ ಹೆಚ್ಚು ಪ್ರಯೋಜನ ಇಲ್ಲ ಎಂಬ ಅರಿವು ಕೇರಳಕ್ಕೂ ಆಗಿದೆ. ಅಲ್ಲದೆ ಕೊಡಗಿನ ಮೂಲಕ ಸಾಧ್ಯತೆಯೂ ಇಲ್ಲ. ಇದೀಗ ಮಾನಂದವಾಡಿಯಿಂದ ನಂಜನಗೂಡು ಮಾರ್ಗವಾಗಿ ಮೈಸೂರು ತಲಪುವ ಮತ್ತೊಂದು ಪ್ರಸ್ತಾವನೆಯೂ ಸಿದ್ಧಗೊಂಡಿರುವ ಮಾಹಿತಿ ಲಭಿಸಿರುವದಾಗಿ ತಮ್ಮು ಪೂವಯ್ಯ ‘ಶಕ್ತಿ’ಗೆ ತಿಳಿಸಿದರು.

ಸಂಸದ ಹೇಳಿಕೆ

ಬೆಂಗಳೂರಿನಲ್ಲಿ ಇಂದು ಕಾವೇರಿ ನದಿ ಸಂಬಂಧ ನಡೆದ ಸರ್ವಪಕ್ಷಗಳ ಸಭೆಯಲ್ಲಿ ತಲಚೇರಿ, ದಕ್ಷಿಣ ಕೊಡಗು, ಮೈಸೂರು ರೈಲು ಮಾರ್ಗದ ವಿಚಾರ ಪ್ರಸ್ತಾಪಿಸಿ ಸಂಸದ ಪ್ರತಾಪ್ ಸಿಂಹ ವಿರೋಧಿಸಿದ್ದಾರೆ. ಯಾವದೇ ಕಾರಣಕ್ಕೂ ಅನುಮತಿ ನೀಡಬಾರದು, ಈ ಮಾರ್ಗವನ್ನು ವಿರೋಧಿಸಿ ಮುಖ್ಯ ಕಾರ್ಯದರ್ಶಿಗಳು ಕೇರಳದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುವಂತೆ ಸೂಚಿಸಿ ಎಂದು ಕೇಳಿದ್ದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಿಂಹ ತಿಳಿಸಿದ್ದಾರೆ.