ಆಲೂರು-ಸಿದ್ದಾಪುರ, ಜೂ. 30: ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಈ ಭಾಗದ ರೈತರಲ್ಲಿ, ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿದೆ. ಹಾಸನ ಜಿಲ್ಲೆಯ ಆಲೂರು ಮತ್ತು ಯಸಳೂರು ಮೀಸಲು ಅರಣ್ಯದ ಮೂಲಕ ಕಟ್ಟೆಪುರ ಮೀಸಲು ಅರಣ್ಯಕ್ಕೆ ಬರುವ ಕಾಡಾನೆಗಳ ಹಿಂಡು ಕೊಡಗು ಜಿಲ್ಲೆಯ ಕಟ್ಟೆಪುರ, ಹಂಪಾಪುರ, ಜರ್ನಾಧನಹಳ್ಳಿ, ಯಸಳೂರು, ಬಿಳಹ, ಬೆಂಬಳೂರು, ಮಾದ್ರೆ ಗ್ರಾಮಗಳಲ್ಲಿ ಹಾಗೂ ಶನಿವಾರಸಂತೆ ವ್ಯಾಪ್ತಿಯ ಬಾಣವಾರ, ಆಲೂರು, ಎಳನೀರುಗುಂಡಿ ಗೋಪಾಲಪುರ, ಹಿತ್ಲುಕೇರಿ, ರಾಮನಹಳ್ಳಿ, ಕಾರ್ಗೋಡು, ಮುಳ್ಳೂರು, ನಿಡ್ತ, ಕಣಿವೆ, ಬಸವನಹಳ್ಳಿ, ಮಾಲಂಬಿ, ಆಲೂರು-ಸಿದ್ದಾಪುರ, ಕಂತೆಬಸವನಹಳ್ಳಿ, ಹಿತ್ಲುಗದ್ದೆ, ಆಲದಮರ ಮುಂತಾದೆಡೆ ಸಂಚರಿಸುತ್ತಿದೆ, ಕಳೆದ ಐದಾರು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ರಾತ್ರಿ ವೇಳೆಯಲ್ಲಿ ಕಾಡಾನೆಗಳ ಹಿಂಡು ರೈತರ ಕಾಫಿ ತೋಟ, (ಮೊದಲ ಪುಟದಿಂದ) ಬಾಳೆ ತೋಟ ಹೊಲ-ಗದ್ದೆಗಳಿಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಿರುವದು ಆತಂಕ ಸೃಷ್ಟಿಸಿದೆ.ಕಳೆದ 15 ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ನಿಡ್ತ ಮತ್ತು ಮಾಲಂಬಿ ಮೀಸಲು ಅರಣ್ಯದಿಂದ ಬರುವ ಐದಾರೂ ಕಾಡಾನೆಗಳು ಹಗಲು ವೇಳೆಯಲ್ಲಿ ಸಂಚರಿಸಿರುತ್ತವೆ. ಅರಣ್ಯಗಳಿಂದ ಬರುವ ಕಾಡಾನೆಗಳು ಈ ಗ್ರಾಮಗಳಲ್ಲಿರುವ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುತ್ತವೆ. ಪ್ರತಿದಿನ ರೈತರ ಕಾಫಿ ತೋಟ ಮತ್ತು ಬಾಳೆ ತೋಟಗಳಿಗೆ ನುಗ್ಗಿ ಕೃಷಿ ಫಸಲನ್ನು ತುಳಿದು ಧ್ವಂಸಗೊಳಿಸುತ್ತವೆ. ಕಾಡಾನೆಗಳು ರಸ್ತೆಯಿಂದ ಕಾಫಿ ತೋಟಗಳಿಗೆ ರಾಜಾರೋಷವಾಗಿ ತಿರುಗಾಡುವದರಿಂದ ಜನರಿಗೆ ಆತಂಕ ಸೃಷ್ಟಿಯಾಗಿದೆ.

ಕಳೆದ ಅನೇಕ ವರ್ಷಗಳಿಂದ ಕೊಡ್ಲಿಪೇಟೆ ಮತ್ತು ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿರುವದರ ಬಗ್ಗೆ ಮತ್ತು ಹಾವಳಿಯನ್ನು ನಿಯಂತ್ರಿಸದಿರುವ ಬಗ್ಗೆ ಈ ಭಾಗದ ರೈತರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆಯಿಂದ ಸ್ಪಂದನ ಸಿಗುತ್ತಿಲ್ಲ ಎಂದು ಆರೋಪಿಸಿರುತ್ತಾರೆ. ಅರಣ್ಯ ಇಲಾಖೆಯಿಂದ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಎರಡು ವರ್ಷದ ಹಿಂದೆ ಒಂದೆರೆಡು ಪುಂಡಾನೆಗಳನ್ನು ಹಿಡಿಯಲಾಗಿದ್ದರೂ ಕಾಡಾನೆಗಳ ಹಾವಳಿ ಮಾತ್ರ ನಿಯಂತ್ರಣವಾಗಿಲ್ಲ. ಸೋಲಾರ್ ಬೇಲಿಯನ್ನು ನಿರ್ಮಿಸಿಕೊಟ್ಟಿದೆ. ಕೆಲವು ಕಡೆಗಳಲ್ಲಿ ಕಂದಕ ನಿರ್ಮಾಣ ಮಾಡುವಾಗ ದೊಡ್ಡದೊಡ್ಡ ಬಂಡೆಕಲ್ಲುಗಳು ಸಿಗುವದರಿಂದ ಕಾಮಗಾರಿ ಕಾರ್ಯಕ್ಕೆ ಅಡ್ಡಿಯಾಗುತ್ತದೆ, ಇದರಿಂದ ಕೆಲವು ಕಾಡಾನೆಗಳು ಕಂದಕದಲ್ಲಿರುವ ಬಂಡೆಕಲ್ಲುಗಳನ್ನು ದಾಟಿ ಗ್ರಾಮದೊಳಗೆ ಸಲೀಸಾಗಿ ನುಗ್ಗುತ್ತವೆ. ಕಾಡಾನೆ ಸಂಚರಿಸುವ ಎಚ್ಚರಿಕೆ ಸೂಚಿಸುವ ಫಲಕ ಮತ್ತು ಬ್ಯಾನರ್‍ಗಳನ್ನು ಅಳವಡಿಸಿ ಜನರನ್ನು ಎಚ್ಚರಿಸುವ ಪ್ರಯತ್ನ ಮಾಡಿತು. ಆದರೆ ರಾತ್ರಿ ವೇಳೆ ಕಾಡಾನೆಗಳು ಅಳವಡಿಸಿದ ಫಲಕ ಮತ್ತು ಬ್ಯಾನರ್‍ಗಳನ್ನು ಕಿತ್ತು ನುಸುಳಿ ಬರುತ್ತಿವೆ.

ಈ ವ್ಯಾಪ್ತಿಯ ಕಾಫಿ ತೋಟ, ಬಾಳೆ ತೋಟ, ಶುಂಠಿ ಕೃಷಿ ಮಾಡಿರುವ ಗದ್ದೆಗಳಿಗೆ ಬಂದು ಕಷ್ಟಪಟ್ಟು ಬೆಳೆದ ಕೃಷಿ ಫಸಲುಗಳನ್ನು ತುಳಿದು ಧ್ವಂಸಗೊಳಿಸುತ್ತಿವೆ. ಅಷ್ಟೆಯಲ್ಲದೆ ಈ ಕಾಡಾನೆಗಳು ಹಗಲು ವೇಳೆಯಲ್ಲೆ ತಿರುಗಾಡುತ್ತಿರುತ್ತವೆ. ಇದರಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಕಾಡಾನೆ ಬೆಳೆ ನಷ್ಟಗೊಳಿಸಿರುವದಕ್ಕೆ ಕೊಡುವ ಪರಿಹಾರ ಯಾವದಕ್ಕೂ ಸಾಕಾಗುವದಿಲ್ಲ. ಇದರ ಬದಲಿಗೆ ಸರಕಾರ ಮತ್ತು ಅರಣ್ಯ ಇಲಾಖೆ ಮಿತಿಮೀರಿದ ಕಾಡಾನೆಗಳನ್ನು ನಿಯಂತ್ರಿಸಲು ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಬೆಳೆಗಾರ ಎಸ್.ಸಿ. ಶೇಖರ್ ಹಾಗೂ ಇತರರು ಆಗ್ರಹಿಸಿದ್ದಾರೆ.

ಕೊಡ್ಲಿಪೇಟೆ ಹಾಗೂ ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾಡಾನೆಗಳು ಹೆಚ್ಚಾಗಿರುವ ಬಗ್ಗೆ ಇಲಾಖೆಯ ಗಮನಕ್ಕೆ ಬಂದಿದೆ, ಈಗ ಕೊಡ್ಲಿಪೇಟೆ ಕಟ್ಟೆಪುರ ವ್ಯಾಪ್ತಿಯಲ್ಲಿ 4 ಕಾಡಾನೆಗಳ ಹಿಂಡು ಮತ್ತು ಶನಿವಾರಸಂತೆ ವ್ಯಾಪ್ತಿಯಲ್ಲಿ 8 ಕಾಡಾನೆಗಳ ಹಿಂಡು ಸೇರಿದಂತೆ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 1 ಪುಂಡಾನೆ ಸಂಚರಿಸುತ್ತಿರುವದು ಗಮನಕ್ಕೆ ಬಂದಿದ್ದು, ಕಾಡಾನೆ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆಯಿಂದ ಆದಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ರೈತರಿಂದ ದೂರು ಬಂದಾಗ ಕಾಡಾನೆಗಳನ್ನು ಬೇರೆಡೆಗೆ ಓಡಿಸುವ ಕಾರ್ಯವನ್ನು ಮಾಡಲಾಗಿದೆ. ಆದರೆ ಕಾಡಾನೆಗಳನ್ನು ಹಿಡಿಯಲು ಸರಕಾರದಿಂದ ಆದೇಶ ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿ ಕೊಟ್ರೇಶ್ ಸ್ಪಷ್ಟಪಡಿಸಿದ್ದಾರೆ. - ದಿನೇಶ್ ಮಾಲಂಬಿ