ಕುಶಾಲನಗರ, ಜೂ. 30: ಕುಶಾಲನಗರದ ಬೈಚನಹಳ್ಳಿ ಬಳಿ ಒತ್ತುವರಿಯಾಗಿದ್ದ ತಾವರೆಕೆರೆ ಜಾಗವನ್ನು ಜಿಲ್ಲಾಡಳಿತ ದಿಢೀರ್ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ. ಶನಿವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶಿಲನೆ ನಡೆಸುವದರೊಂದಿಗೆ ಸ್ಥಳೀಯ ಅಧಿಕಾರಿಗಳಿಗೆ ಆದೇಶ ನೀಡಿದ ಬೆನ್ನಲ್ಲೇ ಜಿಲ್ಲಾಡಳಿತ ಮಧ್ಯಾಹ್ನದಿಂದ ಜೆಸಿಬಿ ಯಂತ್ರಗಳನ್ನು ಬಳಸಿ ಅಕ್ರಮವಾಗಿ ನಿರ್ಮಿಸಲಾದ ರಸ್ತೆ ಕಾಮಗಾರಿಯನ್ನು ತೆರವು ಗೊಳಿಸಿದೆ. ಇದಕ್ಕೂ ಮುನ್ನ ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ ಶಂಷುದ್ದಿನ್ ಅವರ ಉಪಸ್ಥಿತಿಯಲ್ಲಿ ಮರುಸರ್ವೆ ಕಾರ್ಯ ನಡೆಸಲಾಯಿತು. ಸರ್ವೆ ಕಾರ್ಯದ ವರದಿ ಬೆನ್ನಲ್ಲೇ ಉಪವಿಭಾಗಾಧಿಕಾರಿ ಮಹೇಶ್ ಕೋನರೆಡ್ಡಿ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ತಹಶೀಲ್ದಾರ್ ಮತ್ತಿತರ ಅಧಿಕಾರಿಗಳ ನೇತೃತ್ವದಲ್ಲಿ ಕೆರೆಯನ್ನು ಆಕ್ರಮಿಸಿದ ಜಾಗದ ಕಾಮಗಾರಿ ಸ್ಥಗಿತಗೊಳಿಸಲಾಯಿತು.ಬೆಂಗಳೂರಿನ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ರತಿ ಮಾದಪ್ಪ ಎಂಬವರ ಜಾಗ ಖರೀದಿಸಿ ಅಭಿವೃದ್ಧಿಗೊಳಿಸುವದರೊಂದಿಗೆ ಕುಶಾಲನಗರದ ಐತಿಹಾಸಿಕ ಕೆರೆಯಾಗಿದ್ದ ತಾವರೆಕೆರೆಯ ಒತ್ತುವರಿ ಹಾಗೂ ಅಕ್ರಮ ರಸ್ತೆ ಕಾಮಗಾರಿ ನಡೆಸಿರುವ ಬಗ್ಗೆ ಶಕ್ತಿ ಸಮಗ್ರ ವರದಿ ಪ್ರಕಟ ಮಾಡಿತ್ತು.

ಈ ವರದಿ ಬೆನ್ನಲ್ಲೇ ಕಾವೇರಿ ನದಿ ಸ್ವಚ್ಛತಾ ಆಂದೋಲನ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಕೆರೆಗೆ ಮಣ್ಣು ಹಾಕಿ ಮುಚ್ಚಿರುವ ಬಗ್ಗೆ ದೂರು ಸಲ್ಲಿಸಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದರು. ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಕೆರೆಗೆ ಹಾಕಿರುವ ಮಣ್ಣನ್ನು ತೆರವುಗೊಳಿಸಲು ಸ್ಥಳೀಯ ಆಡಳಿತಕ್ಕೆ

(ಮೊದಲ ಪುಟದಿಂದ) ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೆರೆಯಿಂದ ಮಣ್ಣನ್ನು ಖಾಲಿ ಮಾಡಲು ಸಂಬಂಧಿಸಿದ ಭೂಮಾಲೀಕರು ಮುಂದಾಗಿದ್ದರು. ಆದರೆ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಕೆರೆ ಮೇಲಿನ ರಸ್ತೆಯನ್ನು ತೆರವುಗೊಳಿಸಿರಲಿಲ್ಲ. ಶನಿವಾರ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಕುಶಾಲನಗರ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವದರೊಂದಿಗೆ ಕೂಡಲೆ ಕೆರೆ ಜಾಗ ಅನ್ನು ಸ್ವಸ್ಥಿತಿಗೆ ತರುವಂತೆ ಆದೇಶ ನೀಡಿದರು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುವದಾಗಿ ಎಚ್ಚರಿಕೆ ನೀಡಿ ಶನಿವಾರ ಸಂಜೆ ಒಳಗಾಗಿ ಸರಿಪಡಿಸುವಂತೆ ಗಡುವು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಸರ್ವೆ ಅಧಿಕಾರಿಗಳ ತಂಡ ಸ್ಥಳೀಯ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ವೆ ಕಾರ್ಯ ಮುಗಿಸುವದರೊಂದಿಗೆ ಅಕ್ರಮ ಕಾಮಗಾರಿಯನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಕುಶಾಲನಗರ ತಾವರೆಕೆರೆ ಅಂದಾಜು ಪ್ರಕಾರ 1.91 ಎಕರೆ ವಿಸ್ತೀರ್ಣ ಹೊಂದಿದ್ದರೂ ಕೆಲವೆಡೆ ಒತ್ತುವರಿಯಾಗಿರುವದು ಕಂಡುಬಂದಿದೆ. ಉಪಗ್ರಹ ಆಧಾರಿತ ನಕ್ಷೆ ಪ್ರಕಾರ ಕೆರೆಯ ವಿಸ್ತೀರ್ಣ ಅಂದಾಜು 3.70 ಎಕರೆ ಇರುವ ಸಾಧ್ಯತೆಯಿದೆ ಎಂದು ಸ್ಥಳದಲ್ಲಿದ್ದ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಶಂಷುದ್ದಿನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆರೆ ಜಾಗವನ್ನು ಯಾವದೇ ರೀತಿಯಲ್ಲಿ ಪರಭಾರೆಯಾಗದಂತೆ ಇಲಾಖೆಯ ಮೂಲಕ ಸೂಕ್ತ ಸರ್ವೆ ಕಾರ್ಯ ನಡೆಸಲಾಗಿದೆ ಎಂದರು. ಇದುವರೆಗೆ 4 ಬಾರಿ ಕೆರೆ ಸರ್ವೆ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿ ಮಹೇಶ್ ಕೋನರೆಡ್ಡಿ ಪ್ರತಿಕ್ರಿಯಿಸಿ ಸರಕಾರಿ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ಜಿಲ್ಲಾಡಳಿತ ಕಾರ್ಯಪಡೆ ಕೆಲಸ ನಿರ್ವಹಿಸುತ್ತಿದೆ. ತಾವರೆಕೆರೆಯ ರಕ್ಷಣೆಗೆ ಎಲ್ಲಾ ರೀತಿಯ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಲಿದೆ ಎಂದರು.

ಕೆರೆ ಜಾಗ ಒತ್ತುವರಿಯಾಗಿದ್ದರೂ ಕೂಡ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಬಗ್ಗೆ ಸ್ಥಳದಲ್ಲಿದ್ದ ಪಂಚಾಯ್ತಿ ಅಭಿಯಂತರೆ ಶ್ರೀದೇವಿ ಅವರನ್ನು ಸ್ಥಳೀಯ ಗೆಳೆಯರ ಬಳಗದ ಪದಾಧಿಕಾರಿಗಳು ತರಾಟೆಗೆ ತೆಗೆದುಕೊಂಡ ದೃಶ್ಯ ಕಂಡುಬಂತು. ಅಕ್ರಮವಾಗಿ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟ ಸಂಬಂಧಿಸಿದ ಕುಡಾ ಹಾಗೂ ಪಟ್ಟಣ ಪಂಚಾಯ್ತಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಕುಶಾಲನಗರ ಹಿತರಕ್ಷಣಾ ಸಮಿತಿ ಪ್ರಮುಖರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಕಾರ್ಯಾಚರಣೆ ರಾತ್ರಿ ಕೂಡ ನಡೆಯಿತು

ಕಾರ್ಯಾಚರಣೆ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯರಾದ ಮಧುಸೂದನ್, ಮಾಜಿ ಸದಸ್ಯರಾದ ಅಬ್ದುಲ್ ಖಾದರ್, ಮುಸ್ತಾಫ, ಗುಡ್ಡೆಹೊಸೂರು ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ, ಕಂದಾಯ ನಿರೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಗೌತಮ್, ಕೆರೆ ಸಂರಕ್ಷಣಾ ಸಮಿತಿ ಪ್ರಮುಖರಾದ ಎಂ.ಎನ್.ಚಂದ್ರಮೋಹನ್, ಕೆ.ಜಿ.ಮನು, ಮಂಜುನಾಥ್, ಪುಟ್ಟಸ್ವಾಮಿ, ಜೆಡಿಎಸ್ ನಗರಾಧ್ಯಕ್ಷ ವಿ.ಎಸ್.ಆನಂದಕುಮಾರ್, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಗ್ರಾಮಸ್ಥರು ಇದ್ದರು.