ಸೋಮವಾರಪೇಟೆ, ಜೂ. 30: ಸಮೀಪದ ಚೌಡ್ಲು ಗ್ರಾ.ಪಂ. ವ್ಯಾಪ್ತಿಯ ಆಲೇಕಟ್ಟೆಯಿಂದ ಗಾಂಧಿನಗರಕ್ಕೆ ತೆರಳುವ ರಸ್ತೆಯಲ್ಲಿರುವ ಮೊಯಿದ್ದೀನ್ ಮೇಸ್ತ್ರಿ ಮನೆಯ ಮುಂಭಾಗದಲ್ಲಿ ಭೂ ಕುಸಿಯುತ್ತಿದ್ದು ರಸ್ತೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ.

ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ವ್ಯಾಪ್ತಿಗೆ ಒಳಪಟ್ಟಿರುವ ರಸ್ತೆ ಇದಾಗಿದ್ದು, ಪ್ರಸಕ್ತ ಮಳೆಗಾಲದಲ್ಲಿ ಕುಸಿಯುವ ಹಂತದಲ್ಲಿದೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಈಗಾಗಲೇ ದೂರು ನೀಡಲಾಗಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮಳೆಗಾಲದಲ್ಲಿ ರಸ್ತೆ ಕುಸಿದು ಬೀಳುವ ಹಂತದಲ್ಲಿದ್ದು, ಪಕ್ಕದ ಮನೆಗಳಿಗೆ ಹಾನಿಯಾಗುವ ಸಂಭವವಿದೆ. ಈ ರಸ್ತೆಯಲ್ಲಿ ದಿನಂಪ್ರತಿ ನೂರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೆ ಪ್ರತಿದಿನ ಶಾಲಾ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುವದರಿಂದ ಆತಂಕ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕಳೆದ ಆರು ತಿಂಗಳ ಹಿಂದೆಯೇ ತಡೆಗೋಡೆ ನಿರ್ಮಿಸುವಂತೆ ಮನವಿ ಸಲ್ಲಿಸಲಾಗಿತ್ತು. ಇಪ್ಪತ್ತೈದು ಮೀಟರ್ ತಡೆಗೋಡೆ ನಿರ್ಮಿಸುವ ಭರವಸೆಯನ್ನು ಜಿಪಂ ಎಇಇ ನೀಡಿದ್ದರು. ಆದರೆ ಇದುವರೆಗೆ ಕಾಮಗಾರಿ ಪ್ರಾರಂಭಿಸಿಲ್ಲ ಎಂದು ಮಲಂಗ್ ಷಾವಲಿ ಯೂತ್ ಕಮಿಟಿ ಅಧ್ಯಕ್ಷ ಅಬ್ದುಲ್ ಅಜೀಜ್ ಆರೋಪಿಸಿದ್ದಾರೆ