ಸಿದ್ದಾಪುರ, ಜೂ. 30: ಸಿದ್ದಾಪುರ ಗ್ರಾ.ಪಂ. ಗ್ರಾಮಸಭೆಯು ಅಧ್ಯಕ್ಷ ಎಂ.ಕೆ. ಮಣಿ ಅಧ್ಯಕ್ಷತೆಯಲ್ಲಿ ನಡೆಯಿತು. ಇಲ್ಲಿನ ಸೆಂಟಿನರಿ ಹಾಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅಧ್ಯಕ್ಷರ ಗಮನ ಸೆಳೆದರು. ಪ್ರಾರಂಭದಲ್ಲಿ ಗ್ರಾಮ ಸಭೆಗೆ ಗ್ರಾಮಸ್ಥರ ಸಂಖ್ಯೆ ಕಡಿಮೆ ಇರುವ ಕಾರಣ ಗ್ರಾಮಸ್ಥರು ಆಕ್ಷೇಪ ವ್ಯಕ್ತ ಪಡಿಸಿದರು. ಬಳಿಕ ನಡೆದ ಸಭೆಯಲ್ಲಿ ರಸ್ತೆ, ಕುಡಿಯುವ ನೀರು, ನಿವೇಶನ, ಕಸ ವಿಲೇವಾರಿ, ತಡೆಗೋಡೆ ಮುಂತಾದ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಕಾಡಾನೆ ಹಾವಳಿ, ವಿದ್ಯುತ್ ಸಮಸ್ಯೆ, ಆರೋಗ್ಯ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಇದೇ ಸಂದರ್ಭ ಮಾತನಾಡಿದ ಗ್ರಾಮಸ್ಥ ಮುಸ್ತಫ, ಕಸದ ವಿಲೇವಾರಿಗೆ ಈಗಾಗಲೇ ಜಾಗವನ್ನು ಕಂದಾಯ ಇಲಾಖೆಯು ಗ್ರಾ.ಪಂ.ಗೆ ಹಸ್ತಾಂತರ ಮಾಡಲಾಗಿದ್ದು, ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು. ಈ ಸಂದರ್ಭ ಮಾಹಿತಿ ನೀಡಿದ ಗ್ರಾಮ ಲೆಕ್ಕಿಗ ಮಂಜುನಾಥ್, ಘಟ್ಟದಳದಲ್ಲಿ 50 ಸೆಂಟ್ ಸರಕಾರಿ ಜಾಗವನ್ನು ಒತ್ತುವರಿ ಬಿಡಿಸಿ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು ವರ್ಗಾಯಿ ಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮಸ್ಥರಾದ ಕೆ.ಸಿ. ಬಷೀರ್, ಹೆಚ್.ಬಿ. ರಮೇಶ್ ಮಾತನಾಡಿ, ಕಂದಾಯ ಇಲಾಖೆ ಜಾಗ ನೀಡಿದ್ದರೂ, ಯಾಕಾಗಿ ಕಸ ವಿಲೇವಾರಿ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಮಾಹಿತಿ ನೀಡಿ, ಜಾಗದಲ್ಲಿ ಕಸ ವಿಲೇವಾರಿ ಮಾಡಲು ಕಡತವನ್ನು ಕಾರ್ಯನಿರ್ವಹಣಾಧಿಕಾರಿಗೆ ಕಳುಹಿಸಲಾಗಿದೆ. ಬಳಿಯಲ್ಲಿಯೇ ತೋಡು ಹರಿಯುತ್ತಿರುವದರಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ದೊರೆತಿಲ್ಲ ಎಂದರು.

ಪಟ್ಟಣದಲ್ಲಿ ಕೋಳಿ ವ್ಯಾಪಾರ ನಡೆಸುವ ಬಗ್ಗೆ ಚರ್ಚಿಸಲಾಯಿತು.

ಈ ಸಂದರ್ಭ ಕಂದಾಯ ಇಲಾಖೆಯಿಂದ ಅನಿಲ್ ಹಾಗೂ ಮಂಜುನಾಥ್, ಅರಣ್ಯ ಇಲಾಖೆ ಯಿಂದ ಆರ್.ಎಫ್.ಓ ದೇವಯ್ಯ, ಸೆಸ್ಕ್ ಇಲಾಖೆಯಿಂದ ಚಂಪಾ ಸೇರಿದಂತೆ ಅಧಿಕಾರಿಗಳು ಇದ್ದರು.

ಸಭೆಯ ನೋಡಲ್ ಅಧಿಕಾರಿಯಾಗಿ ಸಿದ್ದಾಪುರದ ಪಶುವೈದ್ಯಾಧಿಕಾರಿ ಡಾ| ತಮ್ಮಯ್ಯ ಭಾಗವಹಿಸಿದ್ದರು.

.