ಕುಶಾಲನಗರ, ಜು. 1: ಕುಶಾಲನಗರ ತಾವರೆಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದೆ. ಜಿಲ್ಲಾಧಿಕಾರಿಗಳ ಆದೇಶದಂತೆ ಕಾರ್ಯಾಚರಣೆ ಮುಂದುವರೆದಿದ್ದು ಕೆರೆಯ ಮೇಲೆ ನಿರ್ಮಿಸಲಾದ ರಸ್ತೆಯನ್ನು ಸಂಪೂರ್ಣ ತೆರವುಗೊಳಿಸಲು ಜೆಸಿಬಿ ಯಂತ್ರಗಳ ಮೂಲಕ ಕೆಲಸ ನಡೆಸುತ್ತಿದೆ. ಖಾಸಗಿ ಸಂಸ್ಥೆಯ ಬಡಾವಣೆಗೆ ಅಕ್ರಮವಾಗಿ ದಾರಿ ನಿರ್ಮಿಸಿದ ಪ್ರಕರಣದ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಇನ್ನೆರೆಡು ದಿನಗಳ ಕಾಲ ಮುಂದುವರೆಯಲಿದೆ ಎಂದು ಸೋಮವಾರಪೇಟೆ ತಾಲೂಕು ತಹಸೀಲ್ದಾರ್ ಮಹೇಶ್ ತಿಳಿಸಿದ್ದಾರೆ.

ತಾವರೆಕೆರೆ ಹಿಂಭಾಗದಲ್ಲಿ ಅಸ್ತಿತ್ವದಲ್ಲಿದ್ದ ಕಡಂಗವನ್ನು ನಿವೇಶನಗಳಾಗಿ ಪರಿವರ್ತಿಸಿದ್ದು ಇದನ್ನು ತಕ್ಷಣ ಪಟ್ಟಣ ಪಂಚಾಯ್ತಿ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ನಾಗರೀಕರು ಆಗ್ರಹಿಸಿದ್ದಾರೆ. ರತಿ ಮಾದಪ್ಪ ಎಂಬವರಿಗೆ ಸೇರಿದ ಭೂಮಿಯನ್ನು ಬೆಂಗಳೂರಿನ ರಿಯಲ್ ಎಸ್ಟೇಟ್ ಸಂಸ್ಥೆಯೊಂದು ಅಭಿವೃದ್ಧಿಗೊಳಿಸುತ್ತಿದ್ದು ಇದಕ್ಕೆ ಕುಶಾಲನಗರ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಪಟ್ಟಣ ಪಂಚಾಯ್ತಿ ಅನುಮೋದನೆ ನೀಡಿರುವದು ಸರಿಯಲ್ಲ ಪ್ರಮುಖರಾದ ಕೆ.ಜಿ.ಮನು ಮತ್ತು ವಿ.ಎಸ್.ಆನಂದಕುಮಾರ್ ತಿಳಿಸಿದ್ದಾರೆ. ಕೂಡಲೆ ಆರ್‍ಟಿಸಿಯನ್ನು ರದ್ದುಗೊಳಿಸಲು ಕ್ರಮಕೈಗೊಳ್ಳ ಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲಿ ಯಾವದೇ ರಸ್ತೆ ನಿರ್ಮಾಣಕ್ಕೆ ಪಟ್ಟಣ ಪಂಚಾಯ್ತಿ ಆಡಳಿತ ಅನುಮೋದನೆ ನೀಡಿಲ್ಲ. ಈ ಬಗ್ಗೆ ಯಾವದೇ ಸಭೆಯಲ್ಲಿ ಚರ್ಚೆ ನಡೆದಿಲ್ಲ ಎಂದು ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಂ.ಎಂ. ಚರಣ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.