ಕುಶಾಲನಗರ, ಜು. 1: ಕರ್ತವ್ಯನಿಷ್ಠೆಯೊಂದಿಗೆ ನಿರ್ದಿಷ್ಟ ಗುರಿ ಹೊಂದಿದಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಆರ್.ರವಿಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಶಾಲನಗರದ ಗಂಧದಕೋಟಿಯಲ್ಲಿರುವ ಅರಣ್ಯ ತರಬೇತಿ ಕೇಂದ್ರದಲ್ಲಿ ನಡೆದ 88ನೇ ತಂಡದ ಅರಣ್ಯ ರಕ್ಷಕರ ಬುನಾದಿ ತರಬೇತಿಯ ಘಟಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತರಬೇತಿ ಹೊಂದಿರುವ ಅರಣ್ಯ ರಕ್ಷಕರು ಮುಂದಿನ ದಿನಗಳಲ್ಲಿ ಅಧಿಕಾರಿಗಳಾಗುವ ಅವಕಾಶ ಹೊಂದಿದ್ದು, ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಕಠಿಣ ಪರಿಶ್ರಮದ ಅಗತ್ಯವಿದೆ. ಯಾವದೇ ರೀತಿಯ ಸಮಾಜ ಬಾಹಿರ ಚಟುವಟಿಕೆಗಳಿಗೆ, ರಾಜಕೀಯ ಒತ್ತಡಗಳಿಗೆ ಬಲಿಯಾಗದೆ ಪ್ರಾಮಾಣಿಕರಾಗಿ ತಮ್ಮ ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಮಾತನಾಡಿ, ಸರಕಾರಿ ಉದ್ಯೋಗದಲ್ಲಿ ವೈಯಕ್ತಿಕ ಜೀವನಕ್ಕಿಂತ ಕರ್ತವ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಜನಸಾಮಾನ್ಯರೊಂದಿಗೆ ಬೆರೆತು ಕೆಲಸ ಮಾಡುವಂತಹ ಮನಸ್ಥಿತಿ, ಪ್ರತಿಯೊಬ್ಬರನ್ನು ಗೌರವದಿಂದ ಕಾಣುವದರೊಂದಿಗೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವಂತ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಘಟಿಕೋತ್ಸವದಲ್ಲಿ ರಾಜ್ಯದ ವಿವಿಧ ಭಾಗಗಳ 55 ಅಭ್ಯರ್ಥಿಗಳಿಗೆ ತರಬೇತಿಯ ಪ್ರಮಾಣ ಪತ್ರ, ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಎಸ್. ಚಿಣ್ಣಪ್ಪ, ರೋಶಿನಿ, ದಯಾನಂದ, ಕೆ.ಎ.ನೆಹರು, ಟಿ.ಕೆ. ಜೀವನ್ಕುಮಾರ್, ಎಂ. ಶಿವಪ್ಪ, ವಲಯ ಅರಣ್ಯಾಧಿಕಾರಿ ಮೇದಪ್ಪ ವೇದಿಕೆಯಲ್ಲಿದ್ದರು. ತರಬೇತಿ ಕೇಂದ್ರದ ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಗಣಪತಿ ನಾಯ್ಕ, ಜಿ. ವಿನಿತಾ ಕಾರ್ಯಕ್ರಮ ನಿರ್ವಹಿಸಿದರು.