ಸೋಮವಾರಪೇಟೆ, ಜು.1: 2017 ಜೂ.28ರಂದು ಕಸ್ತೂರಿ ರಂಗನ್ ವರದಿ ಜಾರಿಯಾಗಿದ್ದು, ಇದರಿಂದ ಜಿಲ್ಲೆಯ 22 ಗ್ರಾಮಗಳು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಒಳಪಟ್ಟಿವೆ. ಕಸ್ತೂರಿ ರಂಗನ್ ವರದಿ ಯಥಾಸ್ಥಿತಿ ಯಲ್ಲೇ ಅನುಷ್ಠಾನಗೊಂಡಿದ್ದು, ಇದಕ್ಕೆ ಜಿಲ್ಲೆಯ ಶಾಸಕರು ಹಾಗೂ ಸಂಸದರೇ ಕಾರಣರಾಗಿದ್ದಾರೆ ಎಂದು ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದ ಪ್ರತಾಪ್ ಸಿಂಹ ಅವರು ಕಸ್ತೂರಿ ರಂಗನ್ ವಿಷಯ ವನ್ನು ನನ್ನ ಹೆಗಲಿಗೆ ಹಾಕಿ ಎಂದು ಹೇಳಿ ಹೋದವರು ನಂತರ ಈ ಬಗ್ಗೆ ಯಾವದೇ ವಿರೋಧ ವ್ಯಕ್ತಪಡಿಸದೇ ಸುಮ್ಮನಾಗಿದ್ದಾರೆ. ಶಾಸಕರುಗಳೂ ಸಹ ಈ ಬಗ್ಗೆ ಮೌನವಹಿಸಿದ್ದಾರೆ ಎಂದು ದೂರಿದರು.

ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಕುರಿತು 2016 ಜೂ.15ರಂದು ಅಧಿಸೂಚನೆ ಹೊರಡಿಸಿ, ತಕರಾರು ಸಲ್ಲಿಸಲು 60 ದಿನಗಳ ಅವಕಾಶ ನೀಡಿತ್ತು. ಆದರೆ ಕಸ್ತೂರಿ ರಂಗನ್ ವಿಷಯವನ್ನು ಹೆಗಲಿಗೆ ಹಾಕಿಕೊಂಡಿದ್ದ ಸಂಸದರು, ಮಡಿಕೇರಿ ಶಾಸಕರಾದ ಅಪ್ಪಚ್ಚು ರಂಜನ್ ಹಾಗೂ ವೀರಾಜಪೇಟೆ ಶಾಸಕರಾದ ಕೆ.ಜಿ.ಬೋಪಯ್ಯ ಅವರುಗಳು ಜಿಲ್ಲೆಯ ಜನರ ಪರವಾಗಿ ಹೋರಾಟ ಮಾಡದೆ ಮೌನಕ್ಕೆ ಶರಣಾಗಿ, ಕಸ್ತೂರಿ ರಂಗನ್ ವರದಿ ಜಾರಿಯಾಗುವದಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದರು.

ನೂತನ ಅಧಿಸೂಚನೆಯಂತೆ ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯ ಅರಣ್ಯ ಪ್ರದೇಶ, ತೋಟಗಾರಿಕೆ ಹಾಗೂ ಕೃಷಿ ಪ್ರದೇಶಗಳನ್ನು ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಕ್ಕಾಗಿ ಬಳಸುವಂತಿಲ್ಲ. ಈಗಾಗಲೆ ರೈತರು ಆಸ್ತಿ ಹಕ್ಕಿನಿಂದ ವಂಚಿತರಾಗಿದ್ದಾರೆ. ಮುಂದೆ ವಲಸೆ ಹೋಗುವಂತಹ ದುಸ್ಥಿತಿ ಬರಲಿದೆ ಎಂದು ಸುರೇಶ್ ಅಭಿಪ್ರಾಯಿಸಿದರು.

ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಸಮೀಪದ ಗ್ರಾಮಗಳಲ್ಲಿನ ಜನರು ಆಸ್ತಿ ದಾಖಲಾತಿಗಳಿಲ್ಲದೆ ಈಗಾಗಲೇ ತೊಂದರೆಯ ಬದುಕು ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿನವರ ಬದುಕು ಇನ್ನಷ್ಟು ದುಸ್ತರವಾಗಲಿದೆ. ಈ ಭಾಗದ ರೈತಾಪಿ ವರ್ಗದ ಸಮಸ್ಯೆ ಬಗೆಹರಿಸಲು ಶಾಸಕರು ಮುಂದಾಗದಿರುವದು ಖಂಡನೀಯ ಎಂದರು.

ಗೋಷ್ಠಿಯಲ್ಲಿದ್ದ ಶಾಂತಳ್ಳಿ ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್ ಮಾತನಾಡಿ, ಇಲ್ಲಿನ ಶಾಸಕರಾದ ಅಪ್ಪಚ್ಚು ರಂಜನ್ ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಆದರೆ ಶಾಸಕರ ಕಚೇರಿಯ ಸಮೀಪದಲ್ಲೇ ಇರುವ ತಾಲೂಕು ಕಚೇರಿ ಭ್ರಷ್ಟಾಚಾರದ ಕೂಪವಾಗಿದೆ. ಅಲ್ಲಿನ ನೌಕರರು ಯಾವ ರೀತಿಯಲ್ಲಿ ಲಂಚ ಪಡೆಯುತ್ತಾರೆ ಎಂಬದು ಶಾಸಕರಿಗೆ ಗೊತ್ತಿದ್ದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಲೋಕೋಪಯೋಗಿ ಇಲಾಖೆಯ ಬಹುತೇಕ ಕಾಮಗಾರಿ ಗಳು ಕಳಪೆಯಾಗುತ್ತಿದೆ. ಕಳಪೆ ಮಾಡಿದ ಗುತ್ತಿಗೆದಾರರು ಹಾಗೂ ಇಂಜಿನಿಯರ್‍ಗಳ ವಿರುದ್ಧ ಕ್ರಮ ಕೈ ಗೊಳ್ಳುವಂತೆ ಶಾಸಕರು ಒತ್ತಾಯಿಸುತ್ತಿಲ್ಲ. ಕಳಪೆ ಕಾಮಗಾರಿ ನಡೆದ ಸ್ಥಳಗಳಿಗೆ ಭೇಟಿ ನೀಡುತ್ತಿಲ್ಲ. ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಒತ್ತಡ ಹೇರುತ್ತಿಲ್ಲ. ಕೇವಲ ಭಾಷಣದಲ್ಲಿ ಭ್ರಷ್ಟಾಚಾರದ ವಿರುದ್ಧ ಮಾತನಾಡಿದರೆ, ಭ್ರಷ್ಟಾಚಾರ ತಗ್ಗುವದಿಲ್ಲ ಎಂದು ಟೀಕಿಸಿದರು.

ಗೋಷ್ಠಿಯಲ್ಲಿ ತಾಲೂಕು ಕಾಫಿ ಬೆಳೆಗಾರರ ಸಂಘದ ಉಪಾಧ್ಯಕ್ಷ ಬಿ.ಪಿ.ಬಸಪ್ಪ, ಪ್ರಮುಖರಾದ ಎ.ಆರ್.ಸಿಂಧು, ಬಿ.ಎಸ್.ಸುರೇಶ್, ಬಗ್ಗನ ಹರೀಶ್ ಉಪಸ್ಥಿತರಿದ್ದರು.