ಮಡಿಕೇರಿ, ಜು. 2: ರಾಜ್ಯ ಸರಕಾರ ಘೋಷಿಸಿರುವ ಸಾಲಮನ್ನಾ ಯೋಜನೆಯಲ್ಲಿ ಕಾಫಿ ಬೆಳೆಯನ್ನು ಸೇರ್ಪಡೆ ಮಾಡದೆ ಇರುವದರ ವಿರುದ್ಧ ತಾ. 4 ರಂದು ಅಮ್ಮತ್ತಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಅಮ್ಮತ್ತಿ ರೈತ ಸಂಘದ ವತಿಯಿಂದ ಅಂದು ಪಟ್ಟಣ ಮಧ್ಯೆ ಬೆಳಿಗ್ಗೆ 10.30 ರಿಂದ 11.30ರ ವರೆಗೆ ರಸ್ತೆ ತಡೆ ನಡೆಸಲಾಗುವದು ಎಂದು ಸಂಘದ ಕಾರ್ಯದರ್ಶಿ ಮನೆಯಪಂಡ ಗೌತಮ್ ಪೊನ್ನಪ್ಪ ತಿಳಿಸಿದ್ದಾರೆ.

ಇಂದು ಅಧ್ಯಕ್ಷ ಕಾವಡಿಚಂಡ ಯು. ಗಣಪತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಲಮನ್ನಾಕ್ಕೆ ಕಾಫಿ ಬೆಳೆಯನ್ನು ಪರಿಗಣಿಸದೆ ಇರುವ ರಾಜ್ಯ ಸರಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಲಾಯಿತು. ಕಾಫಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ದರ ಕುಸಿತ ಹಾಗೂ ಇಳುವರಿ ಕುಸಿತದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರಿಗೂ ಸಾಲಮನ್ನಾ ಸೌಲಭ್ಯ ಸಿಗಬೇಕೆಂದು ಒತ್ತಾಯಿಸಲಾಯಿತು.

ಈ ಬಗ್ಗೆ ಸರಕಾರದ ಗಮನ ಸೆಳೆಯಲು ತಾ. 4 ರಂದು ಬೆಳಿಗ್ಗೆ 10.30 ರಿಂದ 11.30ರ ವರೆಗೆ ಅಮ್ಮತ್ತಿ ಪಟ್ಟಣದಲ್ಲಿ ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುವಿನ್ ಗಣಪತಿ ಸೇರಿದಂತೆ ಬೆಳೆಗಾರರು ಪಾಲ್ಗೊಂಡಿದ್ದರು.

ಸಮಗ್ರ ಕೊಡಗಿನ ಸಮಸ್ಯೆ ಇದಾಗಿದ್ದು, ಜಿಲ್ಲೆಯ ಎಲ್ಲ ಕಾಫಿ ಬೆಳೆಗಾರರು ಪಾಲ್ಗೊಳ್ಳುವಂತೆ ಕೋರಲಾಯಿತು.