ಮಕ್ಕಳ ಕಳ್ಳರೆಂದು ಐವರ ಹತ್ಯೆ
ದುಲೆ, ಜು. 1: ಕೆಲ ದಿನಗಳ ಹಿಂದೆ ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಮಕ್ಕಳ ಕಳ್ಳರ ವದಂತಿ ಮಹಾರಾಷ್ಟ್ರದಲ್ಲಿ ವ್ಯಾಪಿಸಿದ್ದು, ಐವರು ಅಮಾಯಕರು ಬಲಿಯಾಗಿದ್ದಾರೆ. ದುಲೆ ಜಿಲ್ಲೆಯ ಗ್ರಾಮವೊಂದರಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಐವರು ಅಮಾಯಕರನ್ನು ಗ್ರಾಮಸ್ಥರು ಸೇರಿ ಮನಬಂದಂತೆ ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ರೈನಪಾಡದ ಬುಡುಕಟ್ಟು ಜನಾಂಗದವರು ಇನ್ನಿತರರೊಂದಿಗೆ ಐವರು ರಾಜ್ಯ ಸಾರಿಗೆ ಬಸ್ಸಿನಲ್ಲಿ ಇಳಿಯುವದನ್ನು ನೋಡಿದ್ದಾರೆ. ಅವರಲ್ಲಿ ಒಬ್ಬ ಆಗಾಗ್ಗೆ ಬಾಲಕಿಯನ್ನು ಮಾತನಾಡಿಸಲು ಪ್ರಯತ್ನಿಸುವದನ್ನು ಗ್ರಾಮಸ್ಥರು ನೋಡಿದ್ದಾರೆ. ವಾರಾಂತ್ಯ ದಿನವಾದ ಇಂದು ಗ್ರಾಮಸ್ಥರೆಲ್ಲರು ಹಿಂಡು ಹಿಂಡಾಗಿ ಬಂದಿ ಐವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂದು ಪೆÇಲೀಸರು ತಿಳಿಸಿದ್ದಾರೆ.
ಬಜೆಟ್ ಮಂಡನೆಗೆ ಕಾಂಗ್ರೆಸ್ ಸಮ್ಮತಿ
ಬೆಂಗಳೂರು, ಜು. 1: ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದಂತೆ ರೈತರ ಕೃಷಿ ಸಾಲ ಮನ್ನಾಗೆ ಹಸಿರು ನಿಶಾನೆ ಸಿಕ್ಕಿದ್ದು ನೂತನ ಬಜೆಟ್ ಮಂಡನೆಗೆ ಸಮ್ಮತಿಸಲಾಗಿದೆ. ರೈತರ ಸಾಲ ಮನ್ನಾ ವಿಷಯವಾಗಿ ಇದ್ದ ಗೊಂದಲಗಳು ನಿವಾರಣೆಯಾಗಿದೆ. ಕುಮಾರಸ್ವಾಮಿ ಅವರ ಹಠಕ್ಕೆ ಕೊನೆಗೂ ಮಣಿದ ಕಾಂಗ್ರೆಸ್ ಆರ್ಥಿಕ ಹೊರೆ ಆಗದ ರೀತಿಯಲ್ಲಿ ಸಾಲಮನ್ನಾ ಮಾಡಲು ಒಪ್ಪಿಗೆ ನೀಡಿದೆ. ತಾ. 5 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಲಿರುವ ಬಜೆಟ್ನಲ್ಲಿ ರೈತರ ಸಾಲಮನ್ನಾ ಕುರಿತು ಘೋಷಣೆ ಮಾಡಲಿದ್ದಾರೆ. ಕುಮಾರಕೃಪ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಜೆಡಿಎಸ್ನ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನೀಶ್ ಅಲಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಉಪಸ್ಥಿತರಿದ್ದರು.
ಕೋಳಿಗೂ ಕೆಎಸ್ಆರ್ಟಿಸಿ ಟಿಕೆಟ್
ಚಿಕ್ಕಬಳ್ಳಾಪುರ, ಜು. 1: ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಒಬ್ಬರು ಬಾಡೂಟಕ್ಕಾಗಿ ಎರಡು ನಾಟಿ ಕೋಳಿಗಳನ್ನು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದ ಪ್ರಯಾಣಿಕನಿಂದ ಹಣ ಪಡೆದು ಕೋಳಿಗಳಿಗೂ ಟಿಕೆಟ್ ನೀಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಇಂದು ಭಾನುವಾರವಾದ್ದರಿಂದ ಬಾಡೂಟಕ್ಕಾಗಿ ಮೂದಲೂಡ ಗ್ರಾಮದ ಶ್ರೀನಿವಾಸ್ ಎಂಬವರು ಎರಡು ನಾಟಿ ಕೋಳಿಗಳನ್ನು ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಲು ಬಸ್ ಹತ್ತಿದ್ದರು. ಟಿಕೆಟ್ ನೀಡಲು ಬಂದ ಕಂಡಕ್ಟರ್ ಕೋಳಿಗಳನ್ನು ಕಂಡ ಅವುಗಳಿಗೂ ಟಿಕೆಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇದರಿಂದ ಶ್ರೀನಿವಾಸ್ ತಮ್ಮ ಟಿಕೆಟ್ ದರ 24 ರೂ. ಮತ್ತು ಒಂದು ಕೋಳಿಗೆ 12 ರೂ. ನಂತೆ ಎರಡು ಕೋಳಿಗೆ 24 ರೂಪಾಯಿ ಒಟ್ಟಾರೆ 48 ರೂಪಾಯಿ ನೀಡಿದ್ದು ಹಣ ಪಡೆದ ಕಂಡಕ್ಟರ್ ಟಿಕೆಟ್ ನೀಡಿದ್ದಾರೆ. ಇದನ್ನು ನೋಡಿ ದಂಗಾದ ಕೆಲ ಪ್ರಯಾಣಿಕರು ಕಂಡಕ್ಟರ್ನನ್ನು ಪ್ರಶ್ನಿಸಿದರೆ ಕಾನೂನು ಇರೋದೇ ಹೀಗೆ ಎಂದು ಉತ್ತರ ನೀಡಿದ್ದಾನೆ ಎನ್ನಲಾಗಿದೆ.
ರಷ್ಯಾ ಕ್ಷಿಪಣಿ ಖರೀದಿಸಿದ ಭಾರತ
ನವದೆಹಲಿ, ಜು. 1: ಅಮೇರಿಕಾ ಸರ್ಕಾರದ ನಿರ್ಬಂಧದ ಭೀತಿ ನಡುವೆಯೂ ರಷ್ಯಾದ ಸುಧಾರಿತ ಕ್ಷಿಪಣಿ ರಕ್ಷಾ ಕವಚ ವ್ಯವಸ್ಥೆ ಟ್ರಯಂಫ್ ಎಸ್-400ಅನ್ನು ಖರೀದಿ ಮಾಡಲು ಭಾರತ ಇನ್ನಷ್ಟು ತ್ವರಿತಗತಿಯಲ್ಲಿ ಹೆಜ್ಜೆ ಇಟ್ಟಿದೆ. ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವಂತೆ ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸುಮಾರು ರೂ. 39,000 ಕೋಟಿ ಮೌಲ್ಯದ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಅಂಕಿತ ಹಾಕಿದ್ದಾರೆ ಎನ್ನಲಾಗಿದೆ. ವರದಿಯಲ್ಲಿರುವಂತೆ ಕ್ಷಿಪಣಿ ವ್ಯವಸ್ಥೆ ಖರೀದಿ ಸಂಬಂಧ ಒಪ್ಪಂದದಲ್ಲಿದ್ದ ಕೆಲ ಸಮಸ್ಯೆಗಳನ್ನು ನಿವಾರಿಸಲು ಒಪ್ಪಂದದಲ್ಲಿ ಕೆಲ ತಿದ್ದುಪಡಿ ಮಾಡಿ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ ಎನ್ನಲಾಗಿದೆ. ಈ ಸಂಬಂಧ ಕಳೆದ ಗುರುವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ರಕ್ಷಣಾ ಸ್ವಾಧೀನ ಸಮಿತಿ ಸಭೆ ಸೇರಿದ್ದು, ಸಭೆಯಲ್ಲಿ ರಷ್ಯಾದ ರಕ್ಷಣಾ ಅಧಿಕಾರಿಗಳೂ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಯುಪಿ ಯಲ್ಲಿ ವ್ಯಕ್ತಿಗೆ ಅನಾಗರಿಕ ಶಿಕ್ಷೆ
ಬುಲಂದ್ಶಹರ್, ಜು. 1: ಪುತ್ರ ಮುಸ್ಲಿಂ ಯುವತಿಯನ್ನು ವಿವಾಹವಾದ ಕಾರಣಕ್ಕೆ, ವ್ಯಕ್ತಿಯೊಬ್ಬರಿಗೆ ಸಾರ್ವಜನಿಕವಾಗಿ ತನ್ನ ಉಗುಳು ತಾನೇ ನೆಕ್ಕುವಂತೆ ಪಂಚಾಯಿತಿಯೊಂದು ಶಿಕ್ಷೆ ನೀಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಉತ್ತರಪ್ರದೇಶದ ಬುಲಂದ್ಶಹರ್ನ ಹಬೀಬ್ಪುರ ಗ್ರಾಮದಲ್ಲಿ ವ್ಯಕ್ತಿಯ ಮೇಲೆ ದೌರ್ಜನ್ಯವೆಸಗಲಾಗಿದ್ದು, ಶಿಕ್ಷೆ ನೀಡುವ ವೇಳೆ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವದಾಗಿಯೂ ಬೆದರಿಕಯೊಡ್ಡಲಾಗಿದ್ದು, ಕುಟುಂಬದೊಂದಿಗೆ ಕೂಡಲೇ ಗ್ರಾಮ ಬಿಡುವಂತೆ ತಿಳಿಸಲಾಗಿದೆ. ಮುಸ್ಲಿಂ ಯುವತಿಯೊಂದಿಗೆ ವಿವಾಹವಾದ ಕಾರಣ ಪಂಚಾಯಿತಿ ಸಭೆಯಲ್ಲಿ ಉಗುಳು ಉಗಿದು, ಮತ್ತೆ ಅದನ್ನು ನೆಕ್ಕುವಂತೆ ಶಿಕ್ಷೆ ನೀಡಲಾಯಿತು. ಅಲ್ಲದೆ, ಕುಟುಂಬದೊಂದಿಗೆ ಗ್ರಾಮವನ್ನು ತೊರೆಯುವಂತೆ ಆದೇಶಿಸಲಾಯಿತು. ಅಲ್ಲದೆ, ನನ್ನ ಪತ್ನಿ ಹಾಗೂ ಮಗಳನ್ನೂ ಕೂಡ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಬೇಕೆಂದು ಹೇಳಿದ್ದರು ಎಂದು ಸಂತ್ರಸ್ತ ವ್ಯಕ್ತಿ ಹೇಳಿಕೊಂಡಿದ್ದಾರೆ. ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬುಲಂದರ್ ಶೆಹರ್ ಎಸ್ಪಿ, ಘಟನೆ ಸಂಬಂಧ ಈಗಾಗಲೇ ದೂರು ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಆರಂಭಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಪೊಲೀಸ್ ಠಾಣೆಯಲ್ಲೇ ಸೀಮಂತ
ಮಳವಳ್ಳಿ, ಜು. 1: ಪೆÇಲೀಸರೆಂದರೆ ದಿನದ 24 ಗಂಟೆಯೂ ಕೆಲಸ ಮಾಡುವವರು. ಇಂತವರಿಗೆ ಸಮಯವೇ ಇರುವದಿಲ್ಲ. ಇದರ ನಡುವೆಯೂ ಮಹಿಳಾ ಪೇದೆಗಳಿಗೆ ಠಾಣೆಯಲ್ಲೇ ಸೀಮಂತ ಮಾಡಿದ ಅಪರೂಪದ ಪ್ರಸಂಗ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪೆÇಲೀಸ್ ಠಾಣೆಯ ಪೆÇಲೀಸರು ತಮ್ಮ ಠಾಣೆಯ ಇಬ್ಬರು ಮಹಿಳಾ ಪೆÇಲೀಸ್ ಸಿಬ್ಬಂದಿಗೆ ಸೀಮಂತ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಮಳವಳ್ಳಿ ಠಾಣೆಯಲ್ಲಿ ಕೆಲಸ ಮಾಡುವ ಪ್ರೇಮಾ ಮತ್ತು ಶೃತಿ ಅವರಿಗೆ ಠಾಣೆಯ ಸಿಬ್ಬಂದಿ ತಮ್ಮ ಸ್ವಂತ ಸಹೋದರಿಯರಿಗೆ ಮಾಡುವ ರೀತಿಯಲ್ಲಿ ಸೀಮಂತ ಕಾರ್ಯ ಮಾಡಿದ್ದಾರೆ. ಮಳವಳ್ಳಿ ಪೆÇಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಆಗಿ ಕೆಲಸ ನಿರ್ವಹಿಸುತ್ತಿರುವ ಶೃತಿ ಹಾಗೂ ಪ್ರೇಮ ಹೆರಿಗೆ ರಜೆ ಪಡೆದು ಮನೆಗೆ ತೆರಳಲು ಅವರು ಮುಂದಾಗಿದ್ದರು. ಈ ಹಿನ್ನೆಲೆ ಅವರ ಸಹೋದ್ಯೋಗಿಗಳು ಪೆÇಲೀಸ್ ಠಾಣೆಯಲ್ಲೇ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡು, ಮನೆಗಳಲ್ಲಿ ಕುಟುಂಬ ವರ್ಗದವರು ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಾಡುವಂತೆಯೇ ಮಳವಳ್ಳಿ ಪೆÇಲೀಸ್ ಠಾಣೆಯಲ್ಲಿ ಹಿಂದೂ ಸಂಸ್ಕೃತಿಯಂತೆ ಸೀಮಂತ ಮಾಡಿದರು.
ಒಂದೇ ಕುಟುಂಬದ 11 ಮಂದಿ ಸಾವು
ನವದೆಹಲಿ, ಜು. 1: ರಾಜಧಾನಿ ದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಒಂದೇ ಕುಟುಂಬದ 11 ಮಂದಿಯ ಮೃತದೇಹಗಳು ಮನೆಯೊಂದರಲ್ಲಿ ನಿಗೂಢವಾಗಿ ಪತ್ತೆಯಾಗಿರುವ ಘಟನೆ ಭಾನುವಾರ ನಡೆದಿದೆ. ದೆಹಲಿಯ ಬುರಾರಿ ಪ್ರದೇಶದಲ್ಲಿರುವ ಮನೆಯೊಂದರಲ್ಲಿ 7 ಮಂದಿ ಮಹಿಳೆಯರು ಹಾಗೂ ನಾಲ್ವರು ಪುರುಷರ ಮೃತದೇಹಗಳು ಪತ್ತೆಯಾಗಿವೆ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿರುವ ಪೆÇಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. ಸಾವಿಗೆ ಪ್ರಮುಖ ಕಾರಣಗಳು ತಿಳಿದುಬಂದಿಲ್ಲ. ಮೃತ ಕುಟುಂಬದವರು ಪೀಠೋಪಕರಣ ಮತ್ತು ಕಿರಾಣಿ ಅಂಗಡಿಯನ್ನಿಟ್ಟುಕೊಂಡಿದ್ದರು. ಪ್ರಾಥಮಿಕ ತನಿಖಾ ವರದಿಯಲ್ಲಿ ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಕೊಲೆ ಆಯಾಮದಿಂದಲೂ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.