ಕೂಡಿಗೆ, ಜು. 2: ಸಮೀಪದ ತೊರೆನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಕ್ಕಅಳುವಾರದಲ್ಲಿನ ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರದಲ್ಲಿ “ಕ್ಯಾಂಪಸ್ ನೋಡಬನ್ನಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಉಪಕುಲಪತಿ ಡಾ. ಸಿ.ಕೆ. ಕಿಶೋರ್ಕುಮಾರ್ ಮಾತನಾಡಿ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಭ್ಯಾಸ ಮಾಡುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಯಾವದೇ ವಿವರಗಳನ್ನು ಪಡೆದುಕೊಳ್ಳಲು ಈ ಓಪನ್ ಹೌಸ್ ಯೋಜನೆ ಪ್ರಾರಂಭವಾಗಿದೆ. ನಾಲ್ಕನೇ ವರ್ಷದ ಸಂಚಿಕೆಯ ಮಹತ್ವದ ಕಾರ್ಯಕ್ರಮ ಇದಾಗಿದೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣಕ್ಕೆ ಪೂರಕವಾದ ವ್ಯವಸ್ಥೆ ಮಾಡುವದು. ಮೂಲಭೂತ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಆಸಕ್ತ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಆಗಮಿಸಿ ಇಲ್ಲಿನ ಸ್ಥಿತಿಗತಿಗಳನ್ನು ಅರಿತುಕೊಳ್ಳುವಂತೆ ಹೇಳಿದರು.
ಸರ್ಕಾರದ ನೆರವಿನಲ್ಲಿ ಬೆಳೆಯುತ್ತಿರುವ ವಿಶ್ವವಿದ್ಯಾನಿಲಯಗಳು ಖಾಸಗಿ ಸಹಭಾಗಿತ್ವದ ವಿಶ್ವವಿದ್ಯಾನಿಲಯಗಳೊಂದಿಗೆ ಸ್ವರ್ಧೆ ನಡೆಸಬೇಕಾದ ಅನಿವಾರ್ಯತೆ ಇರುವಾಗ ಎಲ್ಲ ಸ್ನಾತಕೋತ್ತರ ಕೇಂದ್ರಗಳು ಸಂಪೂರ್ಣ ಮೂಲಭೂತ ಸೌಲಭ್ಯಗಳೊಂದಿಗೆ ಸ್ಪರ್ಧೆಯ ಶಿಕ್ಷಣವನ್ನು ಕೊಡುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಸ್ನಾತಕೋತ್ತರ ಕೇಂದ್ರದಲ್ಲಿ ಅವಶ್ಯಕತೆ ಇರುವ ಎಲ್ಲಾ ಮೂಲಭೂತ ಸೌಲಭ್ಯವನ್ನು ಹಂತ ಹಂತವಾಗಿ ಅನುಷ್ಠಾನಗೊಳಿಸುವದು. ಉದ್ಯೋಗಗಳು ಸಿಗುವದನ್ನು ಖಾತರಿಪಡಿಸಿಕೊಳ್ಳಲು ಉತ್ತಮ ಅವಕಾಶಗಳಿವೆ. ಮಂಗಳೂರು ವಿಶ್ವವಿದ್ಯಾನಿಯವು ದೇಶದಲ್ಲಿ 12ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಮೊದಲ ಸ್ಥಾನ ಗಳಿಸಿದೆ ಎಂದರು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉದ್ಘಾಟಿಸಿ ಮಾತನಾಡಿ, ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪತ್ರಿಕೋದ್ಯಮ ವಿಭಾಗ ಅಭಿವೃದ್ಧಿ ಹೊಂದುವ ಅವಶ್ಯವಿದೆ. ಚಿಕ್ಕಅಳುವಾರ ಕೇಂದ್ರದಲ್ಲಿ ನೂತನವಾಗಿ ಪರಿಚಯಿಸಿರುವ ಈ ವಿಭಾಗಕ್ಕೆ ಯಾರೇ ಆಸಕ್ತ ವಿದ್ಯಾರ್ಥಿಗಳು ದಾಖಲಾಗಿ ಉತ್ತಮ ಸಾಧನೆ ಮಾಡಿದ್ದಲ್ಲಿ ಅವರಿಗೆ ಬದುಕಿಗೆ ಆಸರೆಯಾಗುವ ಉತ್ತಮ ವೇತನದ ನೌಕರಿ ಸಿಗಲಿದೆ. ಆ ಹಿನ್ನೆಲೆಯಲ್ಲಿ ಯಾವದೇ ಪದವಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಪತ್ರಿಕೋದ್ಯಮ ಶಿಕ್ಷಣವನ್ನು ಪಡೆಯಬಹುದು. ಸಮಾಜವನ್ನು ಎದುರಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ಹೆಚ್ಚಿನ ಪೈಪೋಟಿಯು ನಡೆಯುತ್ತಿರುವದರಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಉತ್ತಮ ಅವಕಾಶಗಳು ಇವೆ ಎಂದರು.
ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಪ್ರೋ. ಬಿ.ಎಚ್.ಶೇಖರ್ ಮಾತನಾಡಿ, ಉತ್ತಮ ವಾತಾವರಣದಲ್ಲಿ ಈ ಸ್ನಾತಕೋತ್ತರ ಕೇಂದ್ರ ಸ್ಥಾಪನೆಯಾಗಿದೆ. ಸ್ನಾತಕೋತ್ತರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಯಾವದೇ ಮಾಹಿತಿಯನ್ನು ಕೇಂದ್ರದ ಸಂಪನ್ಮೂಲಗ್ರಾಹಿಗಳಾಗಿರುವ ಪ್ರಾಧ್ಯಾಪಕ ಸಮುದಾಯದಿಂದ ಆಯಾ ವಿಷಯಕ್ಕೆ ಪೂರಕವಾಗಿ ಪಡೆದುಕೊಳ್ಳಬಹುದು. ಆರ್ಥಿಕ ಸಂಪನ್ಮೂಲದ ಅವಶ್ಯಕತೆಯಿರುವ ವಿದ್ಯಾರ್ಥಿಗಳು ಬ್ಯಾಂಕ್ನ ಸೌಲಭ್ಯಗಳನ್ನು ಪಡೆದುಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದರು.
ಸಮಾರಂಭವನ್ನು ಉದ್ದೇಶಿಸಿ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಬಿ.ದೇವರಾಜ್, ಪ್ರಾಧ್ಯಾಪಕಿ ಕೆ.ಸಿ. ಪುಷ್ಪಲತಾ ಮಾತನಾಡಿದರು.
ಈ ಸಂದರ್ಭ ವೇದಿಕೆಯಲ್ಲಿ ಚಿಕ್ಕಅಳುವಾರ ಕೇಂದ್ರದ ವಿಶೇಷಾಧಿಕಾರಿ ಪ್ರಾಧ್ಯಾಪಕ, ಡಾ. ನಾಗಪ್ಪಗೌಡ, ಪ್ರೋ. ಮಂಜುಳಾ ಶಾಂತರಾಮ್, ಕೇಂದ್ರದ ಪ್ರಾಧ್ಯಾಪಕರಾದ ಚಂದ್ರಶೇಖರಯ್ಯ, ಜಯಶಂಕರ್, ಧರ್ಮಪ್ಪ, ರಾಜಕುಮಾರ್ಮೇಟಿ, ಮಡಿಕೇರಿ ಎಫ್ಎಂಸಿ ಕಾಲೇಜಿನ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ, ಕೇಂದ್ರದ ಉಪನ್ಯಾಸಕರು ಹಾಗೂ ಕೇಂದ್ರ ಸಲಹಾ ಸಮಿತಿ ಸದಸ್ಯ ಪ್ರೇಮ್ಕುಮಾರ್ ಇದ್ದರು.
ಕ್ಯಾಂಪಸ್ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಕಾರ್ಯಕ್ರಮವನ್ನು ಉಪನ್ಯಾಸಕ ಡಾ. ಜಮೀರ್ ಅಹಮ್ಮದ್ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ನೂರಾರು ಆಸಕ್ತ ವಿದ್ಯಾರ್ಥಿಗಳು ಪೋಷಕರೊಂದಿಗೆ ಕೇಂದ್ರಕ್ಕೆ ಆಗಮಿಸಿ, ತಮ್ಮ ಆಯ್ಕೆಯ ವಿಭಾಗಗಳಿಗೆ ಸೇರ್ಪಡೆಗೊಳ್ಳಲು ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರಿಂದ ಮಾಹಿತಿ ಪಡೆದುಕೊಂಡರು.