ಮಡಿಕೇರಿ, ಜು. 1: ಪ್ರತಿಷ್ಠಿತ ಉದ್ದಿಮೆಗಳು, ರೆಸಾರ್ಟ್ ಮುಂತಾದ ಸಂಸ್ಥೆಗಳ ಜಾಹೀರಾತುಗಳನ್ನು ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಪ್ರದರ್ಶಿಸಿದ್ದು, ವರ್ಷದಿಂದ ವರ್ಷಕ್ಕೆ ನಗರಸಭೆಗೆ ತೆರಿಗೆ ರೂಪದಲ್ಲಿ ಹಣವನ್ನು ಪಾವತಿಸದಿರುವ ಅಂಶ ಬಹಿರಂಗಗೊಂಡಿದೆ.ಇಂತಹ ಜಾಹೀರಾತುಗಳಿಂದ ಕಳೆದ ಸಾಲಿನಲ್ಲಿ ನಗರಸಭೆಗೆ ರೂ. 4.19 ಲಕ್ಷ ಹಣ ಸಂದಾಯವಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಂಬಂಧಪಟ್ಟ ಜಾಹೀರಾತುದಾರರಿಂದ ಯಾವದೇ ಹಣ ಪಾವತಿಯಾಗಿಲ್ಲ ಎಂದು ಗೊತ್ತಾಗಿದೆ.
ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ನಗರಸಭೆ ಆಡಳಿತವು ಆಯುಕ್ತೆ ಶುಭ ಅವರ ನಿರ್ದೇಶನದಂತೆ, ನಗರದ ಚೈನ್ಗೇಟ್ ಬಳಿಯಿಂದ ಮುಖ್ಯ ರಸ್ತೆಯ ಅಲ್ಲಲ್ಲಿ ಬಿತ್ತರಿಸಿರುವ ಜಾಹೀರಾತುಗಳನ್ನು ತೆರವುಗೊಳಿಸಲು ಕ್ರಮಕೈಗೊಂಡಿದೆ.ಕೆಲವೆಡೆ ವಿದ್ಯುತ್ ತಂತಿಗಳು ಹಾದು ಹೋಗಿರುವ ಅಪಾಯಕಾರಿ ಸ್ಥಳದಲ್ಲೂ ಇಂತಹ ಬೃಹತ್ ಜಾಹೀರಾತು ಪರದೆಗಳನ್ನು ಬಿತ್ತರಿಸಲಾಗಿದ್ದು, ಚೆಸ್ಕಾಂ ಅಧಿಕಾರಿಗಳ ಸಹಕಾರ ಪಡೆದು ಎಲ್ಲವನ್ನು ತೆರವುಗೊಳಿಸಲಾಗುವದು ಎಂದು ಆಯುಕ್ತೆ ಶುಭ ಸುಳಿವು ನೀಡಿದ್ದಾರೆ. ಯಾರು ನಗರಸಭೆಗೆ ನಿಯಮಾನುಸಾರ ಹಣ ಪಾವತಿಸಿ ರಶೀತಿ ಹೊಂದಿಕೊಳ್ಳುತ್ತಾರೋ ಅಂತಹವರಿಗೆ ಮಾತ್ರ ಮುಂದೆ ಜಾಹೀರಾತಿಗೆ ಅವಕಾಶ ನೀಡುವದಾಗಿ ಸ್ಪಷ್ಟಪಡಿಸಿದ್ದಾರೆ.