ಗೋಣಿಕೊಪ್ಪ ವರದಿ, ಜು. 2: ದೇವನೂರು ಗ್ರಾಮದಲ್ಲಿ ಕರುವಿನ ಮೇಲೆ ದಾಳಿ ನಡೆಸಿರುವ ಹುಲಿ ಕರುವನ್ನು ತಿಂದು ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲಿನ ಕಾಫಿ ಬೆಳೆಗಾರ ಆದೇಂಗಡ ತಾರಾ ಅಯ್ಯಮ್ಮ ಎಂಬವರಿಗೆ ಸೇರಿದ 3 ವರ್ಷದ ಕರುವನ್ನು ಕೊಟ್ಟಿಗೆಯಿಂದ ಹೊತ್ತೊಯ್ದು ತಿಂದಿದೆ. ಶನಿವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅವರ ತಾಳೆ ತೋಟದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ಮೂಡಿಸಿದೆ.
ಹುಲಿ ಚಲನವಲನ ಬಗ್ಗೆ ಎಚ್ಚರ
ಚೆಟ್ಟಳ್ಳಿ : ಚಿಕ್ಲಿಹೊಳೆಯ ಡ್ಯಾಮ್ ರಸ್ತೆಯ ಅರಣ್ಯದೊಳಗೆ ಹುಲಿಗಳ ಚಲನವಲನ ಕಂಡುಬಂದಿದ್ದು ಅರಣ್ಯದಂಚಿನ ಸಾರ್ವಜನಿಕರು,ಸಾಕು ಪ್ರಾಣಿಗಳ ಬಗ್ಗೆ ನಿಗಾವಹಿಸುವಂತೆ ಹಾಗೂ ಶಾಲಾ ಮಕ್ಕಳು ತೆರಳುವಾಗ ಎಚ್ಚರ ವಹಿಸಬೇಕೆಂದು ಮೀನುಕೊಲ್ಲಿ ವಿಭಾಗದ ಉಪವಲಯ ಅರಣ್ಯ ಅಧಿಕಾರಿ ದೇವಿಪ್ರಸಾದ್ ಬಾನಂಡ ಕೋರಿದ್ದಾರೆ.
ಕಾಡಾನೆ ಧಾಳಿ - ಗಂಭೀರ
ಗೋಣಿಕೊಪ್ಪಲು ವರದಿ : ಭಾನುವಾರ ಕಾಡಾನೆ ದಾಳಿಗೆ ಒಳಗಾಗಿದ್ದ ತೈಲಾ ಗ್ರಾಮದ ತೀತೀರ ವೇಣು ಅವರಿಗೆ ತಲೆ ಹಾಗೂ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಮೈಸೂರು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಬೆಳಿಗ್ಗೆ ವಾಕಿಂಗ್ ತೆರಳುತ್ತಿದ್ದಾಗ ಮನೆಯ ಸಮೀಪ ಕಾಡಾನೆ ಧಾಳಿ ನಡೆಸಿತ್ತು. ಈ ಸಂದರ್ಭ ಉರುಳಿ ಬಿದ್ದ ವೇಣು ಚರಂಡಿಯಲ್ಲಿ ಸಿಲುಕಿಕೊಂಡಿದ್ದರು. ಆನೆ ದಂತದಿಂದ ತಿವಿಯಲು ಪ್ರಯತ್ನಿಸಿತಾದದರೂ ಚರಂಡಿಯಲ್ಲಿ ಬಿದ್ದ ಕಾರಣ ತಪ್ಪಿಸಿಕೊಂಡಿದ್ದರು. ನಂತರ ಗೋಣಿಕೊಪ್ಪ ಲೋಪಮುದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಇದೀಗ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದೆ ಹಾಗೂ ತಲೆಗೆ ಪೆಟ್ಟಾಗಿದೆ.