ಸೋಮವಾರಪೇಟೆ, ಜು. 1: “ಅದೆಷ್ಟು ಕಾರ್ಯಕ್ರಮಗಳಿಗೆ ನಾನು ಆಶ್ರಯದಾತ..,ಸಾವಿರಾರು ಮಂದಿಯ ಓಡಾಟ.., ಜನಸಾಮಾನ್ಯರ ಸಂಭ್ರಮದ ಪ್ರತೀಕ, ಸರ್ಕಾರಿ ಸಭೆ ಸಮಾರಂಭಗಳಿಗೆ ನಾನೇ ಪ್ರಮುಖ, ಎಲ್ಲರಿಗೂ ನಾನೆಂದರೆ ಅದೆಷ್ಟು ಪ್ರೀತಿ.., ನಾನದೆಷ್ಟು ಅದೃಷ್ಟವಂತ, ಸರ್ಕಾರಿ ಕಟ್ಟಡವೆಂಬ ಅನಾದರವೂ ಇಲ್ಲದೇ ನನ್ನನ್ನು ಬಳಸಿಕೊಳ್ಳುವ ಮಂದಿ.., ಅಬ್ಬಬ್ಬಾ...!!! 11 ವರ್ಷದಿಂದ ಇಂತಹ ಕನಸು ಕಂಡು ಇದೀಗ ನನ್ನ ಮನಸ್ಸೇ ಕಲ್ಲಾಗಿ ಹೋಗಿದೆ.., ಶಾಸಕರೇ ನನ್ನೀ ಕನಸನ್ನು ನನಸು ಮಾಡುವಿರಾ..?
ಅಂದ ಹಾಗೆ ನಾನು ಶತಮಾನೋತ್ಸವ ಭವನ, ನಿಮಗೆ ಗೊತ್ತಿಲ್ಲದೇ ಇರೋಕೆ ಸಾಧ್ಯನೇ ಇಲ್ಲ ಬಿಡಿ. 2007 ರಲ್ಲಿ ರೂ. 1.25 ಕೋಟಿ ವೆಚ್ಚದಲ್ಲಿ ನನ್ನ ಹೆಸರಿನಲ್ಲೇ ಭೂಮಿ ಪೂಜೆ ನೆರವೇರಿದ ಸಂದರ್ಭ ನಾನದೆಷ್ಟು ಸಂಭ್ರಮಪಟ್ಟಿದ್ದೆ ಗೊತ್ತಾ?
ಅವತ್ತು ಎಂಎಲ್ಎ ಆಗಿದ್ದ ಬಿ.ಎ.ಜೀವಿಜಯ ಶಾಸಕರ ನಿಧಿಯಿಂದ ರೂ. 18 ಲಕ್ಷ ನೀಡಿದಾಗ ಹಿರಿಹಿರಿ ಹಿಗ್ಗಿ ಹೋಗಿದ್ದೆ. ನಂತರ ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ವಿವಿಧ ಹಂತಗಳಲ್ಲಿ ರೂ. 15 ಲಕ್ಷ, ರಾಜ್ಯ ಸಭಾ ಸದಸ್ಯ ರೆಹಮಾನ್ಖಾನ್ರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೀಡಿದ ರೂ 4 ಲಕ್ಷ, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ. 2.5 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ 3 ಲಕ್ಷ ಒದಗಿಸಿದಾಗಲಂತೂ ನಾನು ಮೇಲಿನಂತೆ ಕನಸು ಕಂಡು ಸಂಭ್ರಮದ ಅಲೆಯಲ್ಲಿ ತೇಲಾಡಿದ್ದೆ. ನನಗೆ ಫೌಂಡೇಷನ್ ಹಾಕಿ, ಕಟ್ಟಡ ನಿರ್ಮಾಣಕ್ಕೆ ಕೆಲಸಗಾರರು ಬಂದಾಗಲಂತೂ ಸ್ವರ್ಗದಲ್ಲಿ ತೇಲಾಡಿದ್ದೆ..,ಆದರೆ..!
ಅರ್ಧ ಕೆಲಸ ಮಾಡಿದ ಮೇಲೆ ಹಣ ಇಲ್ಲ ಅಂತ ಕೆಲಸ ನಿಲ್ಲಿಸಿದರಲ್ಲಾ..? ಆವಾಗ ಅನುಭವಿಸಿದ ಯಾತನೆ ಇಲ್ಲಿಯವರೆಗೂ ಮುಂದುವರೆದುಕೊಂಡೇ ಬಂದಿದೆ. ನಾನು ಈಗ ಹೇಗಿದ್ದೇನೆ ಅಂತ ಕೇಳುವವರೇ ಇಲ್ಲ ಮಾನ್ಯ ಅಪ್ಪಚ್ಚು ರಂಜನ್ ಅವರೇ.., 10 ವರ್ಷ ಕಳೆದ ಮೇಲೆಯೂ ನನ್ನತ್ತ ತಿರುಗಿ ನೋಡೋ ಎಂಎಲ್ಎ ಇಲ್ಲವಲ್ಲ ಎಂದು ಅದೆಷ್ಟು ನೊಂದುಕೊಂಡಿದ್ದೇನೆ ಗೊತ್ತಾ? ನಿಮಗ್ಯಾಕೆ ನನ್ನ ಮೇಲೆ ಸಿಟ್ಟು, ನಾನೇನು ಪಾಪ ಮಾಡಿದ್ದೇನೆ ಶಾಸಕರೇ..?
ಇದೂ ಅಲ್ಲದೇ, ಕೇಂದ್ರ ಸರ್ಕಾರ ಪುರಸ್ಕøತ ಯುಐಡಿಎಸ್ಎಸ್ಎಂಟಿ ಯೋಜನೆಯಡಿ ಪ್ರತಿ ಪಟ್ಟಣ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ರೂ. 20 ಕೋಟಿಗಳ ಕ್ರಿಯಾಯೋಜನೆಯನ್ನು ರೂಪಿಸಲಾಗುತ್ತಿತ್ತು. ಅದರಂತೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಿಂದ ನನ್ನ ಕಟ್ಟಡ ಪೂರ್ಣಗೊಳಿಸಿ ಸಾವಿರಾರು ಮಂದಿಗೆ ಉಪಯೋಗ ಕಲ್ಪಿಸಲು ಒಂದು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಈ ಸಂದರ್ಭವಂತೂ ನಾನೆಷ್ಟು ಖುಷಿ ಪಟ್ಟಿದ್ದೆ ಗೊತ್ತಾ. ಆವಾಗಲೂ ನೀವೇ ಶಾಸಕರು.., ನಿಮ್ಮ ಪಕ್ಷದವರೇ ಪ.ಪಂ. ಅಧ್ಯಕ್ಷರಾಗಿದ್ರು.
ಆ ದಿನ ನನಗೆ ಇನ್ನೂ ನೆನಪಿದೆ 2013ರ ಅ. 22. ಪಂಚಾಯಿತಿ ಅಧ್ಯಕ್ಷೆ ಲೀಲಾ ನಿರ್ವಾಣಿ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯಿತಿ ಪ್ರಥಮ ಸಾಮಾನ್ಯ ಸಭೆಯಲ್ಲಿ ನನಗೋಸ್ಕರ ಮೀಸಲಿಟ್ಟಿದ್ದ ಹಣವನ್ನು ಪಟ್ಟಣದ ಕುಡಿಯುವ ನೀರಿನ ಸರಬರಾಜಿಗೆ ಮೋಟಾರು ಖರೀದಿಸಲು ಮಾರ್ಪಾಡು ಮಾಡುವಂತೆ ನಿಮ್ಮ ಪಾರ್ಟಿಯ ಲೀಲಾ ನಿರ್ವಾಣಿ, ಬಿ.ಈ. ರಮೇಶ್ (ಈಗ ಅವರಿಲ್ಲ) ಕಾಂಗ್ರೆಸ್ನ ಶೀಲಾ ಡಿಸೋಜ, ಮೀನಾ ಕುಮಾರಿ ವಾದಿಸಿದರು ಸಾರ್. ನಾನಿರುವ ಜಾಗ ಚೌಡ್ಲು ಗ್ರಾಮ ಪಂಚಾಯಿತಿಗೆ ಸೇರುತ್ತೆ. ಪಟ್ಟಣ ಅಭಿವೃದ್ಧಿಗೆ ಮೀಸಲಾದ ಹಣವನ್ನು ಇಲ್ಲಿಗೆ ವಿನಿಯೋಗಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದಾಗ ಎದೆಗೆ ಚೂರಿ ಇರಿದಷ್ಟೇ ನೋವಾಯಿತು. ಆವಾಗ ನನ್ನ ಬೆನ್ನಹಿಂದೆ ನಿಂತಿದ್ದು ಯಾರು ಗೊತ್ತಾ? ಆವಾಗ ಜೆಡಿಎಸ್ನಲ್ಲಿದ್ದ, ಈಗ ಬಿಜೆಪಿ ಸೇರಿ ಅಧ್ಯಕ್ಷೆಯಾಗಿರುವ ವಿಜಯಲಕ್ಷ್ಮಿ ಮೇಡಂ.., ಸದಸ್ಯರಾದ ಬಿ.ಎಂ.ಸುರೇಶ್, ಕಾಂಗ್ರೆಸ್ನ ಬಿ.ಸಿ.ವೆಂಕಟೇಶ್ ಮಾತ್ರ. ನನಗಾಗಿ ಕ್ರಿಯಾಯೋಜನೆಯಲ್ಲಿ ಮೀಸಲಿಟ್ಟ ಹಣವನ್ನು ಬದಲಾವಣೆ ಮಾಡಬಾರದು ಎಂದು ಎಷ್ಟೇ ಪಟ್ಟುಹಿಡಿದರೂ ಸಹ ಇವರ ಮಾತಿಗೆ ಬೆಲೆ ನೀಡಿಲ್ಲ ಸಾರ್ ನಿಮ್ಮ ಪಾರ್ಟಿಯ ಸದಸ್ಯರು.
ಶಾಸಕರೇ.., ನಾನು ಸುಸಜ್ಜಿತವಾಗಿ ನಿರ್ಮಾಣವಾದ್ರೆ ಪಟ್ಟಣದ ಜನರಿಗೆ, ಸಂಘ-ಸಂಸ್ಥೆಗಳಿಗೆ ಉಪಯೋಗವಾಗಲ್ವಾ? ನಾನೇನು ಪಟ್ಟಣದಿಂದ ಐದಾರು ಕಿ.ಮೀ. ದೂರದಲ್ಲಿದ್ದೇನಾ? ನಿಮ್ಮ ಆಫೀಸ್, ಪ.ಪಂ. ಕಚೇರಿಯಿಂದ ನಿಂತು ಕೂಗಿದರೇ ಸಾಕು ನನಗೆ ಕೇಳಿಸುತ್ತೆ. ಬಸ್ ಸ್ಟ್ಯಾಂಡ್ನಲ್ಲಿ ನಿಂತು ನೋಡಿದ್ರೂ ನಾನ್ ಕಾಣ್ತೀನಿ. ಮುಂದೆ ಪಟ್ಟಣ ಪಂಚಾಯಿತಿ ವಿಸ್ತಾರವಾದರೆ ನಾನೂ ಸಹ ಪಟ್ಟಣಕ್ಕೆ ಸೇರ್ತೀನಿ ತಾನೇ?
ಅದೂ ಇರ್ಲಿ ಬಿಡಿ, ಅಂದು ಜೆಡಿಎಸ್ನಲ್ಲಿದ್ದ ವಿಜಯಲಕ್ಷ್ಮೀ ಅವರು ಈಗ ಬಿಜೆಪಿ ಸೇರಿ ಅಧ್ಯಕ್ಷೆ ಆದ ಮೇಲೆ ನನ್ನ ಬಗ್ಗೆ ಚಿಂತಿಸೋದನ್ನೇ ಬಿಟ್ರು. ಪಾರ್ಟಿ ಬದಲು ಮಾಡಿದ ಹಾಗೆ ನನ್ನ ಮೇಲಿನ ಕಾಳಜಿಯೂ ಬದಲಾಯಿತು. ನಾನಂತೂ ಇದೆಲ್ಲವನ್ನೂ ನೋಡಿ ನೋಡಿ ಒಂದು ದಿನ ಕುಸಿದು ಬೀಳ್ತೀನೇನೋ ಅಂತ ಆತಂಕ ಆಗ್ತಿದೆ.
ನಾನೇ ಬಂದು ನಿಮ್ಮ ಬಳಿ ನನ್ನ ಗೋಳಿನ ಕಥೆ ಹೇಳ್ಬೇಕು ಅಂದುಕೊಳ್ತೀನಿ.., ಆದ್ರೆ ನಿಮ್ಮ ಸುತ್ತಮುತ್ತ ಇರೋ ಕೆಲವರು ನಿಮಗೆ ನನ್ನ ಬಗ್ಗೆ ಚಾಡಿ ಹೇಳಿದ್ದಾರೆ ಅಂತ ಗೊತ್ತಾಗಿ ಸುಮ್ಮನಾಗ್ತೀನಿ. ನಾನೇನಾದ್ರೂ ಚೆನ್ನಾಗಿ ಆದ್ರೆ ಅದರ ಬಿರುದು ಜೀವಿಜಯ ಅವ್ರಿಗೆ ಹೋಗುತ್ತೆ. ಜೀವಿಜಯ ಮಾಡಿದ ಕೆಲ್ಸ ಅಂತ ಜನ ಮಾತಾಡ್ಕೋತ್ತಾರೆ ಅಂತ ನಿಮ್ಮ ಕಿವಿ ಊದಿದ್ದಾರೆ ಅಲ್ವಾ.., ಆದ್ರೆ ಒಂದಿಬ್ಬರು ಹೇಳಿದ ಚಾಡಿ ಮಾತಿಗೆ ಸಾವಿರಾರು ಮಂದಿ ಜನರಿಗೆ ಉಪಯೋಗ ಆಗುವ ನನ್ನನ್ನ ಮೂಲೆಗುಂಪು ಮಾಡ್ಬೇಡಿ ಸಾರ್.
ನೀವು ನನ್ನ ಬಗ್ಗೆ ಕಾಳಜಿ ತೋರಿ ನರಕಯಾತನೆಯಿಂದ ಬಿಡುಗಡೆ ಮಾಡಿದ್ರೆ ನಿಮ್ಮ ಕಾರ್ಯವನ್ನು ಶ್ಲಾಘಿಸೋ ಮಂದಿ ನೂರುಪಟ್ಟು ಹೆಚ್ಚಾಗ್ತಾರೆ. ಕೆಲವರ ಮಾತು ಕೇಳಿ ಈವರೆಗೂ ನನ್ನನ್ನು ದೂರವಿಟ್ಟಿರಿ. ಈ ಸಲದ ಎಲೆಕ್ಷನ್ಲಿ ಇದೇ ವಿಷಯಕ್ಕೆ ಜೇಸೀ ವೇದಿಕೆಯಲ್ಲಿ ವಿರೋಧ ಪಕ್ಷದವರು ನಿಮ್ಮ ವಿರುದ್ಧ ಎಷ್ಟು ಮಾತಾಡಿದ್ರು ಗೊತ್ತಾ? ಕನಿಷ್ಟ ನನ್ನ ಕಟ್ಟಡ ಪೂರ್ಣಗೊಳಿಸಲು ಆಗಿಲ್ಲ ಈ ಶಾಸಕರಿಗೆ ಅಂದಾಗ ಸಭಿಕರು ಹೌದು ಹೌದು ಅಂತ ತಲೆಯಾಡಿಸಿದ್ರು, ನಿಮ್ಮ ವಿರುದ್ಧ ಮಾತಾಡಿದ್ರು, ಯಾಕೆ ಗೊತ್ತಾ? ಒಂದಿಬ್ಬರು ಹೇಳಿದ ಮಾತು ಕೇಳಿ ನನ್ನನ್ನು ಕಡೆಗಣಿಸಿದಕ್ಕೆ. ಮುಂದೆ ಹೀಗಾಗದಂತೆ ನೋಡ್ಕಳಿ ಸಾರ್.
ಅಂದಹಾಗೆ ನಾನೀಗ ಯಾವ ಪರಿಸ್ಥಿತಿಯಲಿದ್ದೇನೆ ಗೊತ್ತಾ? ಮಳೆಗಾಳಿಗೆ ರಕ್ಷಣೆ ನೀಡಬೇಕಾದ ನಾನೇ ಮಳೆಗಾಳಿಯಿಂದ ನಲುಗಿ ಹೋಗಿದ್ದೇನೆ. ನನ್ನ ಮೇಲೆ ಕುರುಚಲು ಬೆಳೆದು ವಿಕಾರವಾಗಿದ್ದೇನೆ. ಸುತ್ತಮುತ್ತ ಕಾಡುಬೆಳೆದು ಅಸಹ್ಯವಾಗಿದ್ದೇನೆ. ಪುಂಡ ಪೋಕರಿಗಳು ಬಂದು ಮದ್ಯ ಕುಡಿದು ಬಾಟಲಿಯನ್ನು ನನ್ನೊಳಗೆ ಎಸೀತಾರೆ. ಗಾಂಜಾ ಸೇವನೆ ಮಾಡೋರಿಗಂತೂ ನನ್ನ ನೆಲೆಯೇ ಆಗ್ಬೇಕು. ಗಾಂಜಾ ಹೊಗೆಯಿಂದ ನಾನು ಮಂಕಾಗುತ್ತಿದ್ದೇನೆ. ನನ್ನ ಕಿಟಕಿ ಬಾಗಿಲುಗಳೋ ಮುರಿದು ಬಿದ್ದಿವೆ. ಕೆಲವು ಕಳ್ಳರ ಪಾಲಾಗಿವೆ. ಜನಗಳಿಗೆ ಆಶ್ರಯವಾಗಬೇಕಿದ್ದ ನಾನು ದನಗಳಿಗೆ ಆಶ್ರಯ ನೀಡುವ ಕೊಟ್ಟಿಗೆಯಾಗಿದ್ದೇನೆ, ಸಾಕಾಗಿದೆ ಈ ಬದುಕು ಸಾರ್!
ಶಾಸಕರೇ ನಾನು ಉತ್ತಮವಾಗಿ ನಿರ್ಮಾಣವಾದರೆ ನೀವೇ ಅದನ್ನು ಉದ್ಘಾಟಿಸಿ, ಒಂದಿಷ್ಟು ಸಂಘಸಂಸ್ಥೆಗಳಿಗೆ ಹೇಳಿ ದೊಡ್ಡ ಕಾರ್ಯಕ್ರಮ ಮಾಡೋಣ. ಜನರಿಗೆ ಉಪಯೋಗ ಮಾಡಿದ ಕೀರ್ತಿಯೂ ನಿಮಗೆ ಬಂದೇ ಬರುತ್ತೆ. ಒಂದಿಬ್ಬರ ಮಾತನ್ನು ಪಕ್ಕಕ್ಕಿಡಿ. ನನ್ನ ಬಗ್ಗೆ ಒಂದಿಷ್ಟು ಕರುಣೆ ತೋರಿ. ಹನ್ನೊಂದು ವರ್ಷದ ವನವಾಸದಿಂದ ನನಗೆ ಮುಕ್ತಿ ಕೊಡಿ. ಶಾಸಕರೇ ಕೈ ಮುಗಿದು ಕೇಳ್ತೀನಿ..ಕುಸಿದು ಬೀಳುವದರೊಳಗೆ ನನ್ನ ಸಂಕಷ್ಟಕ್ಕೆ ಮುಕ್ತಿ ಕೊಡಿ. ಈ 5 ವರ್ಷದಲ್ಲಿ ನನ್ನ ಬಗ್ಗೆ ಖಂಡಿತಾ ಕಾಳಜಿ ವಹಿಸ್ತೀರಾ ಅನ್ನೋ ಭರವಸೆ ಇದೆ! ಅದಕ್ಕಾಗಿಯೇ ಈ ಪತ್ರ..!
ಇಂತಿ- ಶತಮಾನೋತ್ಸವ ಭವನ