ಸೋಮವಾರಪೇಟೆ, ಜು. 2: ಸಂವಿಧಾನಾತ್ಮಕವಾಗಿ ಅಳವಡಿಸಲ್ಪಟ್ಟಿ ರುವ ಕಾನೂನುಗಳು ದೇಶದ ಜನರ ಒಳಿತಿಗಾಗಿಯೇ ಇವೆ. ಇವುಗಳ ಪಾಲನೆ ಸಾಮಾಜಿಕ ಕರ್ತವ್ಯವಾಗ ಬೇಕು ಎಂದು ಇಲ್ಲಿನ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ್ ಎಫ್. ದೊಡ್ಡಮನಿ ಅಭಿಪ್ರಾಯಿಸಿದರು.ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಜೇಸೀ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾನೂನು ಅರಿವು-ಕಾನೂನು ಸಾಕ್ಷರತಾ ರಥದ ಜಾಗೃತಿ, ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದರು. ವಿಶ್ವದಲ್ಲಿ ಸಹಜ ಸಾವಿಗಿಂತ ಅಪಘಾತದಿಂದ ಅಧಿಕ ಸಾವುಗಳು ಸಂಭವಿಸುತ್ತಿದೆ ಎಂಬದನ್ನು ವಿಶ್ವಸಂಸ್ಥೆಯ ಸಮೀಕ್ಷೆ ತಿಳಿಸಿದೆ. ರಸ್ತೆ ಸುರಕ್ಷಾ ಕ್ರಮಗಳು, ಚಾಲ್ತಿಯಲ್ಲಿರುವ ಕಾನೂನುಗಳನ್ನು ಪಾಲಿಸದೇ ಇರುವದರಿಂದ ಅವಘಡ, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದರು.

ಪಾದಚಾರಿಗಳು ಹಾಗೂ ವಾಹನ ಸವಾರರು ರಸ್ತೆ ನಿಯಮ ಗಳನ್ನು ಪಾಲಿಸಬೇಕು. ಕೆಲ ಸಾವಿರ ಗಳ ಮೊಬೈಲ್‍ಗಳಿಗೆ ಸ್ಕ್ರೀನ್ ಗಾರ್ಡ್ ಅಳವಡಿಸುವ ಜನರು ಬೆಲೆ ಕಟ್ಟಲಾಗದ ತಮ್ಮ ಜೀವದ ಬಗ್ಗೆ ಹೆಚ್ಚು ಕಾಳಜಿ ವಹಿಸುವದಿಲ್ಲ. ತಲೆಯನ್ನು ರಕ್ಷಿಸುವ ಹೆಲ್ಮೆಟ್‍ಗಳನ್ನು ಧರಿಸಲು ಹಿಂದೇಟು ಹಾಕುವದು ಸರಿಯಲ್ಲ ಎಂದ ನ್ಯಾಯಾಧೀಶರು, 18 ವರ್ಷಕ್ಕಿಂತ ಒಳಪಟ್ಟ ಮಕ್ಕಳು ವಾಹನ ಚಾಲಿಸಿದರೆ ಅಪರಾಧ. ವಾಹನ ಚಾಲನಾ ಸಂದರ್ಭ ಅಗತ್ಯ ದಾಖಲಾತಿಗಳನ್ನು ಹೊಂದಿರಬೇಕು ಎಂದು ಕಿವಿಮಾತು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿವಿಲ್ ನ್ಯಾಯಾಧೀಶರಾದ ಎಸ್.ಎಸ್. ಭರತ್ ಮಾತನಾಡಿ, ರಸ್ತೆ ನಿಯಮಗಳನ್ನು ಯಾರೂ ಉಲ್ಲಂಘಿಸ ಬಾರದು ಎಂದರಲ್ಲದೇ, ಸಾಕ್ಷರತಾ ರಥದ ಮೂಲಕ ಜನಸಾಮಾನ್ಯರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಕಾನೂನು ಸೇವಾ ಸಮಿತಿಯ ವತಿಯಿಂದ ಉಚಿತ ಕಾನೂನು ಅರಿವು, ಕಾನೂನು ನೆರವು, ಲೋಕ ಅದಾಲತ್ ಮೂಲಕ ಅಪರಾಧ ಪ್ರಕರಣಗಳನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ಪ್ರತಿ 2 ನಿಮಿಷಕ್ಕೊಂದು ಅಪಘಾತ ನಡೆಯುತ್ತಿದೆ. ಶಿಕ್ಷಣ ಹಾಗೂ ಕಾನೂನಿನ ಅರಿವಿನ ಕೊರತೆಯಿಂದ ಅಪರಾಧಗಳು ಹೆಚ್ಚುತ್ತಿವೆ ಎಂದರು.

ಮಾದಕ ವಸ್ತುಗಳು, ಮದ್ಯಪಾನ ಸೇವನೆ, ಅತೀವೇಗ, ಅಜಾಗರೂಕತೆ, ಮೊಬೈಲ್ ಬಳಸಿಕೊಂಡು ವಾಹನ ಚಾಲನೆ ಮಾಡುವದರಿಂದ ಅವಘಡ ಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಸವಾರರು ಜಾಗ್ರತೆ ವಹಿಸಬೇಕು ಎಂದರು. ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಅವರು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಠಾಣಾಧಿ ಕಾರಿ ಎಂ.ಶಿವಣ್ಣ, ತಹಶೀಲ್ದಾರ್ ಮಹೇಶ್, ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶ್ರೀಕಾಂತ್, ವಕೀಲರುಗಳಾದ ಮಾನಸ, ಪಿ.ವಿ. ರೂಪಾ, ಜೀವನ್‍ಕುಮಾರ್ ಅವರುಗಳು ಉಪಸ್ಥಿತರಿದ್ದರು. ನಂತರ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಕಾಯ್ದೆಗಳ ಬಗ್ಗೆ ಕಾನೂನು ಅರಿವು ಕಾರ್ಯಾಗಾರ ನಡೆಯಿತು.