ಮಡಿಕೇರಿ, ಜು. 2: ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ 2018-19ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಡಿ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಅಥವಾ ಆಯಾಯ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ತಾ. 16 ರವರೆಗೆ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸಲ್ಲಿಸಲು ತಾ. 31 ಕೊನೆಯ ದಿನವಾಗಿದೆ. ಒಂದು ಬಾರಿ ನಿಗಮದ ಯಾವದಾದರು ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವದಿಲ್ಲ.

ಅರ್ಹತೆಗಳು: ಅರ್ಜಿದಾರರು ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3ಬಿಗೆ ಸೇರಿದವರಾಗಿರಬೇಕು. (ವಿಶ್ವಕರ್ಮ ಅದರ ಉಪ ಸಮುದಾಯಗಳು, ಉಪ್ಪಾರ ಅದರ ಉಪ ಸಮುದಾಯಗಳು, ಅಂಬಿಗ ಅದರ ಉಪ ಸಮುದಾಯಗಳು ಮತ್ತು, ರಾಜ್ಯ ಸರ್ಕಾರದ ಯೋಜನೆಗಳಿಗೆ ಅವರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ ರೂ. 40 ಸಾವಿರಗಳು ಪಟ್ಟಣ ಪ್ರದೇಶದವರಿಗೆ ರೂ. 55 ಸಾವಿರಗಳ ಒಳಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಅರ್ಜಿದಾರರು ಕೆ.ವೈ.ಸಿ. ಬಗ್ಗೆ ಆಧಾರ್ ಕಾರ್ಡ್/ಚುನಾವಣಾ ಗುರುತಿನ ಚೀಟಿ/ಪಾನ್ ಕಾರ್ಡ್ ದಾಖಲೆಗಳನ್ನು ಕಡ್ಡಾಯವಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿದಾರರು ಐ.ಎಫ್.ಸಿ. ಕೋಡ್ ಹೊಂದಿರುವ ರಾಷ್ಟ್ರೀಕೃತ/ ಗ್ರಾಮೀಣ ಬ್ಯಾಂಕ್ ಖಾತೆಗಳನ್ನು ಹೊಂದಿರಬೇಕು.

ಇಲಾಖೆಯ ವಿವಿಧ ಸೌಲಭ್ಯಗಳಿಗೆ ಕೃಷಿ, ಗಂಗಾ ಕಲ್ಯಾಣ ಇತರ ಕಸುಬುಗಳಿಗೆ ಇಚ್ಚಿಸುವ ಹಿಂದುಳಿದ ವರ್ಗದ ಫಲಾಪೇಕ್ಷಿಗಳು ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ರಾಡ್ರಿಗಸ್ ಕಟ್ಟಡದ ಎದುರು, ರೇಸ್‍ಕೋರ್ಸ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ಅಥವಾ ಆಯಾಯ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಚೇರಿಯಲ್ಲಿ ನಿಗದಿಪಡಿಸಿದ ಅರ್ಜಿಗಳನ್ನು ತಾ. 2 ರಿಂದ 16 ರೊಳಗೆ ಉಚಿತವಾಗಿ ಪಡೆಯುವದು. ಅರ್ಜಿ ಪಡೆಯಲು ಬರುವಾಗ ಆಧಾರ್ ಕಾರ್ಡ್‍ನ್ನು ಕಡ್ಡಾಯವಾಗಿ ತರುವದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ತಾ. 31 ರೊಳಗೆ ಸಲ್ಲಿಸುವದು. ಹೆಚ್ಚಿನ ಮಾಹಿತಿಗಾಗಿ 08272-221656 ದೂರವಾಣಿ ಮುಖಾಂತರ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಸಂಪರ್ಕಿಸುವದು.