ಗೋಣಿಕೊಪ್ಪಲು, ಜು. 2: ಭತ್ತ ಬೆಳೆಯನ್ನು ಸಮಗ್ರ ಬೇಸಾಯ ಪದ್ಧತಿಯಡಿಯಲ್ಲಿ ಬೆಳೆಯಲು ಮುಂದಾಗುವ ಮೂಲಕ ಉತ್ಪಾದನೆ ಹೆಚ್ಚಿಸಿಕೊಳ್ಳಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಕೊಳ್ಳಬೇಕಿದೆ. ಉತ್ತಮ ಬೆಳೆಪದ್ಧತಿಯಿಂದ ಹೆಚ್ಚು ಇಳುವರಿ ಪಡೆಯಲು ಭತ್ತದ ಸಸಿಮಡಿಗೂ ಮುನ್ನ ಅನುಸರಿಸ ಬೇಕಾದ ಬೀಜೋಪಚಾರದ ಬಗ್ಗೆ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರ ಸಲಹೆ ನೀಡಿದೆ.
ಭತ್ತದ ಬೀಜದಿಂದ ಬರುವ ಬೆಂಕಿರೋಗ, ಊದುಬತ್ತಿರೋಗ, ಕಂದು ಎಲೆಚುಕ್ಕಿ ರೋಗ ಮತ್ತು ಹುಸಿಕಾಡಿಗೆ ರೋಗಾಣುಗಳು ಮಣ್ಣು, ನೀರು, ಗಾಳಿ, ಬಿತ್ತನೆ ಬೀಜ ಮುಖಾಂತರ ರೈತರಿಗೆ ಅಪಾರ ಆರ್ಥಿಕ ನಷ್ಟ ಹೆಚ್ಚಾಗುತ್ತಿದೆ. ರೈತರು ಅತಿ ಸರಳ ಮತ್ತು ಕಡಿಮೆ ಖರ್ಚಿನಲ್ಲಿ ಬೀಜದಿಂದ ಪ್ರಸಾರವಾಗುವ ಈ ರೋಗಗಳನ್ನು ಬಿಜೋಪಚಾರ ಮಾಡಿ ಬಿತ್ತನೆ ಮಾಡುವದರಿಂದ ಬೀಜಗಳಿಗೆ, ಮೊಳಕೆಯೊಡೆಯುವ ಸಸಿಗಳಿಗೆ ಹಾಗೂ ಮುಂದಿನ ಸಸ್ಯ ಬೆಳವಣಿಗೆ ಹಂತದಲ್ಲಿ ಬರುವ ಅನೇಕ ರೋಗಗಳಿಂದ ರಕ್ಷಣೆಯನ್ನು ಒದಗಿಸಬಹುದಾಗಿದೆ.
ಹಾನಿಕಾರಕ ರೋಗಾಣುಗಳಾದ ಶಿಲೀಂಧ್ರ, ದುಂಡಾಣು ಮತ್ತು ನಂಜಾಣು ಸೂಕ್ಷ್ಮ ಜೀವಿಗಳು ಬೀಜಗಳ ಹೊರಮೈ ಹಾಗೂ ಒಳಮೈ ಆವರಿಸಿ ಬೀಜಗಳು ಮೊಳಕೆಯೊಡೆ ಯುವಾಗ ಸಸಿಗಳು ಬೆಳೆಯುವಾಗ ಸೇರಿಕೊಂಡು ಬೆಳೆಯ ವಿವಿಧ ಬೆಳವಣಿಗೆಯ ಹಂತದಲ್ಲಿ ರೋಗವು ಉಲ್ಬಣಿಸಿ ಬೆಳೆಯ ಹಾನಿಗೆ ಕಾರಣ ವಾಗುತ್ತವೆ. ಇದನ್ನು ಮನಗಂಡು ಬೀಜೋಪಚಾರ ಮಾಡಬೇಕಿದೆ.
ಬೀಜೋಪಚಾರ ಮಾಡುವ ವಿಧಾನ
ಪ್ರತೀ ಎಕರೆಗೆ ಶಿಫಾರಸ್ಸು ಮಾಡಿದ 25 ರಿಂದ 30 ಕೆ.ಜಿ ಭತ್ತದ ಬೀಜವನ್ನು ತೆಗೆದುಕೂಂಡು 1:4 ಪ್ರಮಾಣದ ಉಪ್ಪಿನ ದ್ರಾವಣದಲ್ಲಿ (4 ಲೀ. ನೀರಿಗೆ 1 ಕೆ.ಜಿ ಉಪ್ಪು) ಅದ್ದಿ ಗಟ್ಟಿ ಮತ್ತು ಜೊಳ್ಳು ಬೀಜಗಳನ್ನು ಬೇರ್ಪಡಿಸಬೇಕು.
ಗಟ್ಟಿಯಾದ ಬೀಜಗಳನ್ನು ಬೇರ್ಪಡಿಸಿದ ನಂತರ 2 ರಿಂದ 3 ಬಾರಿ ತಣ್ಣೀರಿನಲ್ಲಿ ತೊಳೆದು 24 ಗಂಟೆಗಳ ಕಾಲ ಬಿತ್ತನೆ ಬೀಜವನ್ನು ನೀರಿನಲ್ಲಿ ನೆನೆಸಬೇಕು.
ನೆನೆಸಿದ ಬೀಜಗಳನ್ನು ನೀರಿ ನಿಂದ ತೆಗೆದು ಎಕರೆಗೆ ಬೇಕಾದ 25 ರಿಂದ 30 ಕೆ.ಜಿ ಬಿತ್ತನೆ ಬೀಜಕ್ಕೆ 100 ರಿಂದ 120 ಗ್ರಾಂ ಕಾರ್ಬೆಂಡೆಜಿಮ್ (ಪ್ರತಿ ಕೆ.ಜಿ ಬಿತ್ತನೆ ಬೀಜಕ್ಕೆ 4 ಗ್ರಾಂ) ಎಂಬ ಶಿಲೀಂಧ್ರ ನಾಶಕವನ್ನು ಚೆನ್ನಾಗಿ ಮಿಶ್ರಣ ಮಾಡಿ ನೆರಳಿನಲ್ಲಿ ಒಣಗಿಸಬೇಕು.
ಈ ರೀತಿ ಬೀಜೋಪಚಾರ ಮಾಡಿದ ಬಿತ್ತನೆ ಬೀಜವನ್ನು ಒಂದು ಚೀಲದಲ್ಲಿ ಗಟ್ಟಿಯಾಗಿ ಕಟ್ಟಿ ಮೊಳಕೆಯೊಡೆಯಲು ಇಟ್ಟು ನಂತರ ಸಸಿಮಡಿಗೆ ಉಪಯೋಗಿಸಬೇಕು. ಈ ರೀತಿ ಬೀಜೋಪಚಾರ ಮಾಡಿದ ಬೀಜದಿಂದ ಭತ್ತಕ್ಕೆ ಬರುವ ಅನೇಕ ರೋಗಗಳನ್ನು ತಡೆಗಟ್ಟಬಹುದಾಗಿದೆ.
ಬೀಜೋಪಚಾರ ಮಾಡುವಾಗ ಗಮನಿಸಬೇಕಾದ ಅಂಶಗಳು
ಶಿಫಾರಸ್ಸು ಮಾಡಿದ ಶಿಲೀಂಧ್ರ ನಾಶಕವನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ ಬೀಜೋಪಚಾರ ಮಾಡಬೇಕು.
ಬೀಜೋಪಚಾರ ಮಾಡಿದ ಬಿತ್ತನೆ ಬೀಜಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕು. ಎರಡು ಮೂರು ಶಿಲೀಂಧ್ರ ನಾಶಕಗಳನ್ನು ಒಟ್ಟಿಗೆ ಮಿಶ್ರಣ ಮಾಡಿ ಬೀಜೋಪಚಾರ ಮಾಡಬಾರದು. ಬಿತ್ತನೆ ಬೀಜಕ್ಕೆ ಬೀಜೋಪಚಾರ ಮಾಡುವ ಸಂದÀರ್ಭದಲ್ಲಿ ಕೈಗಳಿಗೆ ಪ್ಲಾಸ್ಟಿಕ್ ಚೀಲ ಅಥವಾ ಗ್ಲೌಸ್ಗಳನ್ನು ಬಳಸಿ ಬೀಜೋಪಚಾರ ಮಾಡಬೇಕು.
ಈ ರೀತಿಯಾಗಿ ರೈತರು ಶಿಫಾರಸ್ಸು ಮಾಡಿದ ಶಿಲೀಂಧ್ರ ನಾಶಕವನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಉಪಯೋಗಿಸಿ ಬೀಜೋಪಚಾರ ಮಾಡುವದರಿಂದ ಬೀಜಗಳಿಂದ ಪ್ರಸಾರವಾಗುವ ಅನೇಕ ರೋಗಗಳನ್ನು ಅತಿ ಸುಲಭವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ಹತೋಟಿ ಮಾಡಬಹುದಲ್ಲದೆ, ರೋಗರಹಿತ ಬೆಳೆಯಿಂದ ಅಧಿಕ ಇಳುವರಿಯನ್ನು ಪಡೆಯಬಹುದು.
ವೈಜ್ಞಾನಿಕ ವಿಧಾನವನ್ನು ಅನುಸರಿಸಿ, ಖರ್ಚನ್ನು ಕಡಿಮೆಮಾಡಿ ಬೆಳೆಯಲ್ಲಿ ಬರುವ ಅನೇಕ ರೋಗ ಗಳನ್ನು ಕಡಿಮೆ ಮಾಡಿ ಇಳುವರಿ ಯನ್ನು ಹೆಚ್ಚಿಸಬೇಕಿದೆ. ಇದರಿಂದ ಭತ್ತ ಬೇಸಾಯವನ್ನು ಮತ್ತಷ್ಟು ಕಾಲ ಪೋಷಣೆ ಮಾಡಲು ಸಹಕಾರಿ ಯಾಗಲಿದೆ ಎಂದು ಸಸ್ಯ ಸಂರಕ್ಷಣಾ ತಜ್ಞ ಡಾ. ವೀರೇಂದ್ರ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.
ವರದಿ: ಸುದ್ದಿಪುತ್ರ