ಗೋಣಿಕೊಪ್ಪ, ಜು. 2: ಕಾನೂನಿನ ಅರಿವು ಎಲ್ಲರೂ ಹೊಂದಿರಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಪೊನ್ನಂಪೇಟೆ ಜೆ.ಎಂ.ಎಫ್.ಸಿ. ಸಿವಿಲ್ ನ್ಯಾಯಾಧೀಶ ಮೋಹನ್‍ಗೌಡ ಹೇಳಿದರು.
ವೀರಾಜಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿ, ಪೊನ್ನಂಪೇಟೆ ವಕೀಲರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಶಾಂಭವನಂದ ಸಭಾಂಗಣದಲ್ಲಿ ನಡೆದ ವಿಶೇಷ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಪ್ಪು ನಡೆದ ಸಂದರ್ಭ ಭಯ ಪಡದೆ ಪೊಲೀಸ್ ದೂರು ದಾಖಲಿಸುವಂತಾಗಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲೆ ಬಿ.ಯು. ಪ್ರತಿಷ್ಟ ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟುವ ಬಗ್ಗೆ ಮತ್ತು ಜನನ-ಮರಣ ಕಾಯ್ದೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ, ಸಾಯಿ ಶಂಕರ್ ವಿದ್ಯಾಸಂಸ್ಥೆ, ಸಂತ ಅಂಥೋಣಿ ಶಾಲೆ, ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲೆ, ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪೊನ್ನಂಪೇಟೆ ವಕೀಲ ಸಂಘದ ಅಧ್ಯಕ್ಷ ಎಸ್.ಡಿ ಕಾವೇರಪ್ಪ, ಗೀತಾ ಸಾರನಂದ ಸ್ವಾಮೀಜಿ, ವಕೀಲ ಎಂ.ಜಿ. ರಾಕೇಶ್, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತ ಇದ್ದರು.