ಸೋಮವಾರಪೇಟೆ, ಜು. 2: ಭಾರತೀಯ ಸೈನ್ಯ ಮತ್ತು ಹಾಕಿ ಕ್ಷೇತ್ರಕ್ಕೆ ಕೊಡಗಿನ ಕೊಡುಗೆ ಅಪಾರ. ಸೈನ್ಯ ಮತ್ತು ಹಾಕಿ ಕ್ರೀಡೆಗೂ ಕೊಡಗಿಗೂ ಅವಿನಾಭಾವ ನಂಟಿದೆ. ಈಗಾಗಲೇ ಕೊಡಗಿನ ಹಲವು ಹಾಕಿಪಟುಗಳು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಇಂತವರ ಸಾಲಿಗೆ ಸೇರ್ಪಡೆಗೊಳ್ಳುವ ನಿಟ್ಟಿನಲ್ಲಿ, ಉದಯೋನ್ಮುಖ ಆಟಗಾರರಾಗಿ ತಾಲೂಕಿನ ಮೋಕ್ಷಿತ್ ಭರವಸೆ ಮೂಡಿಸುತ್ತಿದ್ದಾನೆತಾಲೂಕಿನ ದೊಡ್ಡಮಳ್ತೆ ಗ್ರಾಮದ ಉದಯ ಮತ್ತು ರೇಣು ದಂಪತಿಗಳ ಪುತ್ರನಾದ ಮೋಕ್ಷಿತ್, ಸೇನೆಯ ಎಂಇಜಿ ಕ್ರೀಡಾಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಭೂಪಾಲ್‍ನಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರೀಯ ಕಿರಿಯರ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸುವ ಮೂಲಕ ಕರ್ನಾಟಕದ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾನೆ. ಬಾಲ್ಯದಿಂದಲೇ ಹಾಕಿ ಕ್ರೀಡೆಯತ್ತ ಆಕರ್ಷಿತನಾಗಿ ಜ್ಞಾನವಿಕಾಸ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ಉತ್ತಮ ಆಟಗಾರನಾಗಿ ಗಮನಸೆಳೆದ ಮೋಕ್ಷಿತ್, ಪ್ರೌಢಶಾಲೆಗೆ ಬೆಂಗಳೂರಿನ ಎಂಇಜಿ ಕ್ರೀಡಾ ಶಾಲೆಗೆ ಸೇರ್ಪಡೆಯಾಗುವ ಮೂಲಕ ಪೋಷಕರ ಕನಸನ್ನು ನನಸಾಗಿಸುವತ್ತ ಹೆಜ್ಜೆಯಿಟ್ಟಿದ್ದಾನೆ.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಕೋಡು ಗ್ರಾಮದ ಸಣ್ಣ ರೈತರಾದ ಉದಯ್ ದಂಪತಿಗಳ ಪುತ್ರ ಮೋಕ್ಷಿತ್‍ಗೆ, ಇಲ್ಲಿನ ಡಾಲ್ಫಿನ್ಸ್ ಸ್ಪೋಟ್ರ್ಸ್ ಕ್ಲಬ್‍ನ ಮಾಜೀ ಕಾರ್ಯದರ್ಶಿ ಅಭಿಷೇಕ್ ಗೋವಿಂದಪ್ಪ, ಅಧ್ಯಕ್ಷ ಎಚ್.ಎನ್.ಅಶೋಕ್, ಮಡಿಕೇರಿಯ ಕ್ರೀಡಾ ಹಾಸ್ಟೆಲ್‍ನ ಕೋಚ್ ಆಗಿರುವ ಬಿ.ಎಲ್.ಮಂಜುನಾಥ್ ಮತ್ತು ಮಾಜಿ ಸೈನಿಕ ಮಹೇಶ್ ಮಾಟ್ನಳ್ಳಿ ಅವರುಗಳು ಆಸರೆಯಾಗಿ ನಿಂತು ಹಾಕಿ ಕ್ಷೇತ್ರದಲ್ಲೇ ಛಾಪು ಮೂಡಿಸುವಂತೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ನಿರಂತರ ಪ್ರೋತ್ಸಾಹದಿಂದ ಹತ್ತು ಹಲವು ರಾಜ್ಯ ಮಟ್ಟದ ಹಾಕಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮೋಕ್ಷಿತ್, ನಂತರ ಎಂಇಜಿ ಕ್ರೀಡಾ ಶಾಲೆಯ ಕೋಚ್‍ಗಳಾದ ದೇವದಾಸ್ ಮತ್ತು ಜನಾರ್ಧನ್‍ರವರ ಮಾರ್ಗದರ್ಶನ ಹಾಗೂ ತರಬೇತಿಯಿಂದಾಗಿ ಇದೀಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಆಟಗಾರನಾಗಿ ಬೆಳೆಯುವಲ್ಲಿ ಸಹಕಾರಿಯಾಗಿದೆ. ಶಾಲಾ ಹಂತದಲ್ಲಿ ಅಥ್ಲೆಟಿಕ್ಸ್ ಹಾಗೂ ಹಾಕಿ ಆಟದತ್ತ ಪ್ರಭಾವಿತನಾಗಿದ್ದ ಮೋಕ್ಷಿತ್‍ಗೆ, ನಂತರದ ದಿನಗಳಲ್ಲಿ ಹಾಕಿ ಕ್ರೀಡೆಯತ್ತ ಸಾಧನೆ ಮಾಡಲು ಜ್ಞಾನವಿಕಾಸ ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಡಾಲ್ಫಿನ್ಸ್ ಕ್ರೀಡಾ ಕ್ಲಬ್‍ನ ಸದಸ್ಯರು ಹಾಗೂ ಇಂಡಿಯನ್ ಆರ್ಮಿ ಹಾಕಿ ತಂಡದ ಕೋಚ್‍ಗಳಾದ ದೇವದಾಸ್ ಹಾಗೂ ಜನಾರ್ಧನ್‍ರವರ ನಿರಂತರ ಪ್ರೋತ್ಸಾಹವೇ ಕಾರಣವಾಗಿದೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವ ಮೂಲಕ ದೇಶದ ಹಾಕಿ ತಂಡವನ್ನು ಪ್ರತಿನಿಧಿಸುವ ಹಂಬಲವಿದೆ. ಅದಕ್ಕಾಗಿ ಪ್ರತಿನಿತ್ಯ ನಿರಂತರ ಕಠಿಣ ಅಭ್ಯಾಸವನ್ನು ಮಾಡುತ್ತಿದ್ದೇನೆ ಎಂದು ಮೋಕ್ಷಿತ್ ಭರವಸೆ ವ್ಯಕ್ತಪಡಿಸಿದ್ದಾನೆ.

ಪ್ರಾಥಮಿಕ ಶಾಲಾ ಮಟ್ಟದ ಹಾಕಿ ಮತ್ತು ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದ ಮೋಕ್ಷಿತ್, ನಂತರ ದೆಹಲಿಯಲ್ಲಿ ಜರುಗಿದ 46ನೇ ನೆಹರೂ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ, 2017ರಲ್ಲಿ ಸಬ್‍ಜೂನಿಯರ್ ಚಾಂಪಿಯನ್‍ಶಿಪ್‍ನಲ್ಲಿ ಭಾಗಿ, 2018ರಲ್ಲಿ ಭೂಪಾಲ್‍ನಲ್ಲಿ ಜರುಗಿದ 8ನೇ ರಾಷ್ಟ್ರೀಯ ಕಿರಿಯರ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕ, ರಾಷ್ಟ್ರಮಟ್ಟದ ಆರ್ಮಿ ರೋಯಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸುವ ಮೂಲಕ ಹಾಕಿ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾನೆ.

ಹಾಕಿ ಕ್ರೀಡೆಯಲ್ಲಿ ಶ್ರದ್ಧೆ ಹಾಗೂ ಶಿಸ್ತನ್ನು ಅಳವಡಿಸಿ ಕೊಂಡಿರುವ ಮೋಕ್ಷಿತ್‍ಗೆ ಸ್ಥಳೀಯ ವಾಗಿ ಅಗತ್ಯ ತರಬೇತಿ ನೀಡಿದ್ದೇವೆ. ಮೋಕ್ಷಿತ್‍ನ ತಂದೆ ಉದಯ್‍ರವರ ಉತ್ಸಾಹ ಹಾಗೂ ಹಾಕಿ ಮೇಲಿನ ಪ್ರೀತಿಯಿಂದಾಗಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವತ್ತ ಮುಂದುವರೆದಿರುವದು ಕೊಡಗಿಗೆ ಹೆಮ್ಮೆ ಎಂದು ಕ್ರೀಡಾಶಿಬಿರದ ತರಬೇತುದಾರ ಅಭಿಷೇಕ್ ಗೋವಿಂದಪ್ಪ ಅಭಿಪ್ರಾಯಿಸಿದ್ದಾರೆ.

ಸೇನಾ ಕ್ರೀಡಾಶಾಲೆಯಲ್ಲಿ ಕಠಿಣ ಅಭ್ಯಾಸ ಮಾಡುವ ಮೂಲಕ ಭರವಸೆಯ ಆಟಗಾರನಾಗಿ ಹೊರಹೊಮ್ಮಿರುವ ಮೋಕ್ಷಿತ್, ಮುಂದಿನ ದಿನಗಳಲ್ಲಿ ಆರ್ಮಿಯ ಸರ್ವಿಸಸ್‍ನಲ್ಲಿ ಹಿರಿಯರ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ದೇಶವನ್ನು ಪ್ರತಿನಿಧಿಸುವದರಲ್ಲಿ ಸಂಶಯವಿಲ್ಲ. ಸೇನೆ ಹಾಗೂ ಹಾಕಿ ಕ್ಷೇತ್ರಕ್ಕೆ ಹಲವಾರು ಪ್ರತಿಭೆಗಳನ್ನು ನೀಡಿರುವ ಪುಟ್ಟ ಜಿಲ್ಲೆಯಲ್ಲಿ ಎರಡೂ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವದು ಹೆಮ್ಮೆಯ ವಿಚಾರವಾಗಿದೆ ಎಂದು ಹಿರಿಯ ಹಾಕಿ ಆಟಗಾರ ಮಾಟ್ನಳ್ಳಿ ಮಹೇಶ್ ಅವರು ಮೋಕ್ಷಿತ್‍ನ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಒಟ್ಟಾರೆ ದೇಶದ ಹಾಕಿ ಕ್ಷೇತ್ರದಲ್ಲಿ ಕೊಡಗಿನ ಹಿರಿ-ಕಿರಿಯ ಆಟಗಾರರ ಸಾಧನೆಗಳ ಶಿಖರಕ್ಕೆ ಮೋಕ್ಷಿತ್ ತಲಪುವಂತಾಗಲಿ. ಹಾಕಿ ಕ್ಷೇತ್ರದಲ್ಲಿ ಕೊಡಗಿನ ಹೆಸರನ್ನು ಚಾಲ್ತಿಯಲ್ಲಿರಿಸಲಿ ಎಂಬದೇ ಕ್ರೀಡಾಭಿಮಾನಿಗಳ ಆಶಯ.