ಮಡಿಕೇರಿ, ಜು. 1: ಕೇರಳದ ತಲಚೇರಿಯಿಂದ ದಕ್ಷಿಣ ಕೊಡಗಿನ ಮುಖಾಂತರ ಮೈಸೂರಿಗೆ ರೈಲ್ವೇ ಮಾರ್ಗ ಕಲ್ಪಿಸುವ ಪ್ರಸ್ತಾವನೆಗೆ ಈಗಾಗಲೇ ಕೇಂದ್ರ ಸರಕಾರವು ಸ್ಪಷ್ಟವಾಗಿ ನಿರಾಕರಿಸಿದ್ದು, ಕರ್ನಾಟಕ ರಾಜ್ಯ ಸರಕಾರವು ಯೋಜನೆಗೆ ಅವಕಾಶ ನಿರಾಕರಿಸಿದೆ ಎಂದು ಕೊಡಗು - ಮೈಸೂರು ಸಂಸದ ಪ್ರತಾಪ್‍ಸಿಂಹ ‘ಶಕ್ತಿ’ ಯೊಂದಿಗೆ ಸ್ಪಷ್ಟಪಡಿಸಿ ದ್ದಾರೆ. ಕೇರಳ ಸರಕಾರದಿಂದ ಕೊಡಗಿನ ಮುಖಾಂತರ ರೈಲ್ವೇ ಯೋಜನೆ ರೂಪಿಸಲು ತೆರೆಮರೆಯಲ್ಲಿ ತಯಾರಿ ನಡೆದಿರುವ ಕುರಿತು ಸಂಸದರು ಪ್ರತಿಕ್ರಿಯೆ ನೀಡಿದರು.ಈಗಾಗಲೇ ರಾಜ್ಯದ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಕರ್ನಾಟಕ ಸರಕಾರದಿಂದ ರೈಲ್ವೇ ಯೋಜನೆಗೆ ಅವಕಾಶ ಮಾಡಿಕೊಡು ವದಿಲ್ಲವೆಂದು ಆಶ್ವಾಸನೆ ದೊರೆತಿರು ವದಾಗಿ ನುಡಿದ ಪ್ರತಾಪ್ ಸಿಂಹ, ತಾನು ಕ್ಷೇತ್ರದ ಸಂಸದನಾಗಿಯೂ ರಾಜ್ಯ (ಮೊದಲ ಪುಟದಿಂದ) ಸರಕಾರದಿಂದ ಯಾವದೇ ಕಾರಣಕ್ಕೂ ಕೇರಳದ ಯೋಜನೆಗೆ ಅನುವು ಮಾಡಿಕೊಡದಂತೆ ಲಿಖಿತ ಆಕ್ಷೇಪಣೆ ಸಲ್ಲಿಸುತ್ತಿರುವದಾಗಿ ಪ್ರಕಟಿಸಿದರು.
ಕೇಂದ್ರ ರೈಲ್ವೇ ಸಚಿವ ಪಿಯೂಶ್ ಗೋಯಲ್ ಅವರು ಈಗಾಗಲೇ ನಾಲ್ಕು ಬಾರಿ ಕೇರಳದ ಪ್ರಸ್ತಾವನೆಯನ್ನು ಹಿಂತಿರುಗಿಸಿರುವದಾಗಿ ಉಲ್ಲೇಖಿಸಿದ ಅವರು, ಕೇರಳ ರೈಲ್ವೇ ವಿಭಾಗದ ಅಧಿಕಾರಿಗಳು ಮತ್ತು ಕಾಣದ ಕೈಗಳ ಪ್ರಭಾವಕ್ಕೆ ಕೇಂದ್ರ ಮತ್ತು ಕರ್ನಾಟಕ ಸರಕಾರಗಳು ಮಣಿಯುವದಿಲ್ಲವೆಂಬ ವಿಶ್ವಾಸವನ್ನು ಪ್ರತಾಪ್ ಸಿಂಹ ಪುನರುಚ್ಚಿರಿಸಿದರು. ಅಲ್ಲದೇ ಯಾವದೇ ಪರಿಸ್ಥಿತಿಯಲ್ಲಿ ಕರ್ನಾಟಕ ಸರಕಾರದ ಒಪ್ಪಿಗೆಯಿಲ್ಲದೆ, ಬೇರೆ ರಾಜ್ಯ ಸರಕಾರಗಳು ನಮ್ಮ ರಾಜ್ಯದಲ್ಲಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಿರುವದಿಲ್ಲ ಎಂಬ ಅಂಶ ಎಲ್ಲರಿಗೆ ಅರಿವಿರಬೇಕೆಂದು ಅವರು ನೆನಪಿಸಿದರು.
ಬೋಪಯ್ಯ ಎಚ್ಚರಿಕೆ
ದಕ್ಷಿಣ ಕೊಡಗಿನ ಮುಖಾಂತರ ಯಾವದೇ ರೈಲ್ವೇ ಯೋಜನೆಯನ್ನು ತಾವು ಈ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದು, ನೂತನ ಸರಕಾರದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಕೂಡ ಇಂತಹ ಪ್ರಸ್ತಾವನೆ ಬಂದಿಲ್ಲವೆಂದು ಸ್ಪಷ್ಟಪಡಿಸಿದ್ದನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೆನಪಿಸಿದರು. ಕೊಡಗಿನ ಜನತೆ ಹಾಗೂ ಸರಕಾರದ ವಿರೋಧದ ನಡುವೆಯೂ ಕೇರಳದಿಂದ ರೈಲ್ವೇ ಯೋಜನೆಗೆ ಯತ್ನಿಸಿದರೆ, ತೀವ್ರ ಸ್ವರೂಪದ ಹೋರಾಟ ಅನಿವಾರ್ಯವೆಂದು ಸಂಬಂಧಿಸಿದವರಿಗೆ ಎಚ್ಚರಿಸಿದರು. ಅಲ್ಲದೆ, ಕೇರಳ ಸರಕಾರದ ಏಕಪಕ್ಷೀಯ ನಿರ್ಧಾರವನ್ನು ಕೇಂದ್ರ ಅಥವಾ ಕರ್ನಾಟಕ ಒಪ್ಪಲಾರದೆಂದು ಶಾಸಕರು ಮಾರ್ನುಡಿದರು.
ರಂಜನ್ ಗುಡುಗು
ದಕ್ಷಿಣ ಕೊಡಗಿನ ಮೂಲಕ ಈ ಹಿಂದೆ ಬೃಹತ್ ವಿದ್ಯುತ್ ಯೋಜನೆಗೂ ತಮ್ಮ ವಿರೋಧವಿದ್ದುದಾಗಿ ನುಡಿದಿರುವ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ರೈಲ್ವೇ ಯೋಜನೆ ವೀರಾಜಪೇಟೆ ತಾಲೂಕಿನಲ್ಲಿ ಬೇಕಿಲ್ಲವೆಂದು ಸ್ಪಷ್ಟಪಡಿಸಿದರು. ಬಿಜೆಪಿಯ ಆ ಕ್ಷೇತ್ರದ ಶಾಸಕರು, ಸಂಸದರು ಮತ್ತು ಕೊಡಗಿನ ಜನತೆಯ ಭಾವನೆಗೆ ವಿರುದ್ಧವಾಗಿ ಯಾವ ಯೋಜನೆಗೂ ಸಮ್ಮತಿಸುವದಿಲ್ಲವೆಂದ ಅವರು, ಇಂತಹ ಸಂದರ್ಭದಲ್ಲಿ ಪಕ್ಷಾತೀತ ಹೋರಾಟಕ್ಕೂ ಸಿದ್ಧವಿರುವದಾಗಿ ನುಡಿದರಲ್ಲದೆ, ಜನತೆಯೂ ಎಚ್ಚೆತ್ತುಕೊಳ್ಳುವಂತೆ ಕರೆ ನೀಡಿದರು.
ಒಗ್ಗಟ್ಟಿನ ಧ್ವನಿ ಬೇಕು
ಮೇಲ್ಮನೆ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಪ್ರತಿಕ್ರಿಯಿಸಿ, ಕೊಡಗಿನ ಜನತೆಯ ಭಾವನೆಗೆ ವಿರುದ್ಧವಾಗಿ ರೈಲ್ವೇ ಯೋಜನೆಗೆ ಮುಂದಾದರೆ ಕೊಡಗಿನ ಜನಪ್ರತಿನಿಧಿಗಳೊಂದಿಗೆ, ಜನತೆ ಒಗ್ಗಟ್ಟಿನಿಂದ ಧ್ವನಿಯೆತ್ತುವಂತೆ ತಿಳಿ ಹೇಳಿದರು. ಈಗಾಗಲೇ ಹಿಂದಿನ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಮತ್ತು ಪ್ರಸಕ್ತ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದಾಗಿ ವೀಣಾ ನೆನಪಿಸಿದರು. ಈ ಸಂಬಂಧ ತಾವು ವಿಧಾನ ಮಂಡಲ ಅಧಿವೇಶನದಲ್ಲೂ ಪ್ರಸ್ತಾಪಿಸುವದಾಗಿ ನುಡಿದರಲ್ಲದೆ, ಅವಕಾಶವಾದಿಗಳು ಪತ್ರಿಕಾ ಹೇಳಿಕೆಗಳಿಂದ ಗೊಂದಲ ಸೃಷ್ಟಿಸುವ ಮೂಲಕ ಕೇವಲ ಪತ್ರಿಕಾ ಹುಲಿಗಳಾಗದೆ ಜನಹಿತಕ್ಕಾಗಿ ಹೋರಾಡಲು ಮುಂದಾಗುವಂತೆಯೂ ವೀಣಾ ಅಚ್ಚಯ್ಯ ಮಾರ್ನುಡಿದರು.
ಜನಹಿತ ಮುಖ್ಯ
ವಿಧಾನ ಪರಿಷತ್‍ನ ಮತ್ತೋರ್ವ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಪ್ರತಿಕ್ರಿಯಿಸಿ ಕೊಡಗಿನ ಜನಹಿತ ಕಾಯುವಲ್ಲಿ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಿದ್ದು, ಜನಹಿತಕ್ಕೆ ಮಾರಕವಾಗಿರುವ ರೈಲ್ವೇ ಯೋಜನೆ ವಿರುದ್ಧ ಪಕ್ಷಾತೀತ ಹೋರಾಟಕ್ಕೆ ತಾನು ಸದಾ ಬೆಂಬಲಿಸುವದಾಗಿ ಘೋಷಿಸಿದರು. ಅಲ್ಲದೆ, ಈ ಸಂಬಂಧ ಸದನದಲ್ಲಿ ಸರಕಾರದಿಂದ ಕೇರಳದ ನಿಲುವು ಬೆಂಬಲಿಸದಂತೆ ಕೋರುವದಾಗಿ ನುಡಿದರಲ್ಲದೆ, ಕಾಲಾವಕಾಶ ಲಭಿಸಿದರೆ, ತಲಚೇರಿ - ಮೈಸೂರು ರೈಲ್ವೇ ಯೋಜನೆ ಹಿಂದಿನ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸುವದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ನಿರಾಕರಣೆ
ಕೊಡಗು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ, ಈ ಮೊದಲು ಏನೋ ಸರ್ವೆಯ ಗೊಂದಲ ಕೇಳಿಬಂದಾಗಲೇ ಸರಕಾರದಿಂದ ಪತ್ರ ಮುಖೇನ ಗಮನ ಸೆಳೆದಿರುವದಾಗಿ ನುಡಿದರು. ಇಲ್ಲಿ ರೈಲ್ವೇ ಯೋಜನೆ ಕುರಿತು ಕೊಡಗು ಜಿಲ್ಲಾಡಳಿತ ಅಥವಾ ಕರ್ನಾಟಕ ಸರಕಾರಕ್ಕೆ ಕೇರಳದಿಂದ ಯಾವದೇ ಪ್ರಸ್ತಾಪಗಳು ಬಂದಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಎಲ್ಲಾ ಗೊಂದಲಮಯ ಅಭಿಪ್ರಾಯಗಳ ಬಗ್ಗೆ ಮಾಧ್ಯಮಗಳಲ್ಲಷ್ಟೇ ಗಮನಿಸಿರುವದಾಗಿ ನುಡಿದ ಶ್ರೀ ವಿದ್ಯಾ, ರಾಜ್ಯ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಕೂಡ ಜಿಲ್ಲಾ ಭೇಟಿ ವೇಳೆ ರೈಲ್ವೇ ಯೋಜನೆ ಕುರಿತು ನಿರಾಕರಿಸಿದ್ದನ್ನು ಬೊಟ್ಟು ಮಾಡಿದರು. ಒಟ್ಟಿನಲ್ಲಿ ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರ ಸೇರಿದಂತೆ ಕೊಡಗು ಜಿಲ್ಲಾಡಳಿತದೊಂದಿಗೆ ಇಲ್ಲಿನ ಜನಪ್ರತಿನಿಧಿಗಳಿಗೂ ಅರಿವಿಗೆ ಬಾರದೆ ಇಂತಹ ರೈಲ್ವೇ ಯೋಜನೆಯೊಂದು ಹೇಗೆ ಅನುಷ್ಠಾನಗೊಂಡೀತು ಎಂಬ ಯಕ್ಷಪ್ರಶ್ನೆ ಕೊಡಗಿನ ಜನತೆಯಲ್ಲಿ ಕಾಡುವಂತಾಗಿದೆ.