ಮಡಿಕೇರಿ, ಜು. 2: ಕೊಡಗಿನ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಬೇಕಿರುವ, ಜಿಲ್ಲಾ ಪಂಚಾಯಿತಿ ಆಡಳಿತ ನಿರ್ವಹಣೆಗೆ ಸಿಬ್ಬಂದಿ ಕೊರತೆಯಿಂದಾಗಿ ಯಾವ ಕೆಲಸಗಳನ್ನೂ ಸಕಾಲದಲ್ಲಿ ಕೈಗೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಎದುರಾಗಿದೆ. ಪ್ರತಿ ಹಂತದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಇಲ್ಲಿ ಗ್ರಾ.ಪಂ.ನಿಂದ ಸಂಸತ್ತಿನ ತನಕ ಪ್ರತಿನಿಧಿಸುವವರು ಒಂದೆಡೆ ಕುಳಿತು ಚರ್ಚಿಸುತ್ತಿದ್ದರೂ, ಸಿಬ್ಬಂದಿ ಕೊರತೆ ಬಗ್ಗೆ ಕಾಳಜಿ ವಹಿಸಿದಂತಿಲ್ಲ; ಪರಿಣಾಮವೆಂಬಂತೆ ಜಿ.ಪಂ.ನಲ್ಲಿ 91 ಮಂದಿ ಕಾರ್ಯನಿರ್ವಹಿಸುವಲ್ಲಿ ಕೇವಲ 22 ಮಂದಿ ಕರ್ತವ್ಯನಿರತರಾಗಿದ್ದು, 69 ಹುದ್ದೆಗಳು ಖಾಲಿ ಬಿದ್ದಿವೆ.ಈ ದಿಸೆಯಲ್ಲಿ ಕೊಡಗಿನ ಜನಪ್ರತಿನಿಧಿಗಳು ಪ್ರಸಕ್ತ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಜಿಲ್ಲಾ ಪಂಚಾಯಿತಿ ಸೇರಿದಂತೆ ಪ್ರಮುಖವಾಗಿರುವ ಕೃಷಿ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಿತ ವಿವಿಧೆಡೆ ಖಾಲಿ ಹುದ್ದೆಗಳಿಗೆ ನೌಕರರನ್ನು ಭರ್ತಿಗೊಳಿಸುವತ್ತ ಸರಕಾರದ ಮೇಲೆ ಒತ್ತಡ ಹಾಕುವ ಅಗತ್ಯತೆ ಇದೆ.

ಖಾಲಿ ಹುದ್ದೆಗಳು : ಮುಖ್ಯವಾಗಿ ಕೊಡಗು ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ, ಮುಖ್ಯ ಯೋಜನಾಧಿಕಾರಿ, ಮುಖ್ಯ ಲೆಕ್ಕಾಧಿಕಾರಿ, ಯೋಜನಾ ನಿರ್ದೇಶಕರು ಸೇರಿದಂತೆ ಯೋಜನಾ ಅಂದಾಜು ಮೌಲ್ಯಮಾಪನ ಅಧಿಕಾರಿ ಹುದ್ದೆಗಳೇ ಇಲ್ಲಿ ಖಾಲಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೆ ಲೆಕ್ಕಾಧಿಕಾರಿ ಹುದ್ದೆಗಳು ಎರಡು ಸ್ಥಾನ ಖಾಲಿಯಾಗಿದೆ; ಇನ್ನು ಸಹಾಯಕ ಯೋಜನಾಧಿಕಾರಿ, ಯೋಜನಾ ಅಭಿಯಂತರ ಹುದ್ದೆಯೂ ಇಲ್ಲಿ ಭರ್ತಿಗೊಳ್ಳದೆ, ನಾಲ್ವರು ಲೆಕ್ಕಾಧೀಕ್ಷಕರು ಕಾರ್ಯನಿರ್ವಹಿಸುವ ಸ್ಥಾನದಲ್ಲಿ ಓರ್ವ ಅಧಿಕಾರಿ ಮಾತ್ರ ನಿಯುಕ್ತಿಗೊಂಡಿದ್ದಾರೆ. ಮೂರು ಹುದ್ದೆಗಳು ಖಾಲಿಯಾಗಿವೆ.

ಇದರೊಂದಿಗೆ ಕೊಡಗು ಜಿಲ್ಲಾ ಪಂಚಾಯಿತಿಯ ವಿವಿಧ ವಿಭಾಗಗಳಲ್ಲಿ ಅವಶ್ಯಕವಾಗಿ ಕಾರ್ಯನಿರ್ವಹಿಸಬೇಕಿರುವ ಎಂಟು ಮಂದಿ ಶೀಘ್ರಲಿಪಿಗಾರರ ಪೈಕಿ ಆರು ಸ್ಥಾನಗಳು ಖಾಲಿಯಾಗಿದ್ದು, ಕೇವಲ ಇಬ್ಬರು ಮಾತ್ರ ಕೆಲಸ ನಿರ್ವಹಿಸುತ್ತಿರುವದು ಬೆಳಕಿಗೆ ಬಂದಿದೆ.

ಮತ್ತೊಂದೆಡೆ ಏಳು ಮಂದಿ ಪ್ರಥಮ ದರ್ಜೆ ಸಹಾಯಕರು ನಿಯೋಜನೆಗೊಳ್ಳಬೇಕಿರುವ ಜಿ.ಪಂ.ನಲ್ಲಿ ಮೂವರು ಮಾತ್ರ ಕೆಲಸದಲ್ಲಿದ್ದು, ನಾಲ್ಕು ಹುದ್ದೆಗಳು ಖಾಲಿಯಾಗಿದೆ. ಲೆಕ್ಕ ಪತ್ರ ವಿಭಾಗದಲ್ಲಿ 9 ಮಂದಿ ಪ್ರಥಮ ದರ್ಜೆ ಲೆಕ್ಕ ಸಹಾಯಕರು ಕಾರ್ಯನಿರ್ವಹಿಸುವದಲ್ಲಿ ಕೇವಲ ಮೂರು ಮಂದಿ ನಿಯುಕ್ತಿಗೊಂಡಿದ್ದು, ಆರು ಹುದ್ದೆಗಳು ಖಾಲಿಯಾಗಿವೆ.

ಇನ್ನು ಕೊಡಗಿನ ಪ್ರಮುಖ ಆಡಳಿತ ನಿರ್ವಹಣಾ ಕೇಂದ್ರವಾಗಿರುವ ಜಿ.ಪಂ.ನಲ್ಲಿ 9 ಮಂದಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳು ಮಂಜೂರಾಗಿದ್ದರೂ, ಕೇವಲ ಒಬ್ಬರು ಮಾತ್ರವಿದ್ದು, ಎಂಟು ಹುದ್ದೆಗಳು ಖಾಲಿ ಇರುವದು ಕಂಡು ಬಂದಿದೆ. ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನಾಲ್ಕು ಸ್ಥಾನಗಳು ಇಲ್ಲಿ ಖಾಲಿಯಿದ್ದು, ಬೆಳಚ್ಚುಗಾರರ 7 ಹುದ್ದೆಗಳು ಖಾಲಿಯಾಗಿವೆ.

(ಮೊದಲ ಪುಟದಿಂದ)

ಚಾಲಕರೇ ಇಲ್ಲ : ಕೊಡಗು ಜಿಲ್ಲಾ ಪಂಚಾಯಿತಿಯ ಬಹುತೇಕ ವಾಹನಗಳನ್ನು ಹೊರಗುತ್ತಿಗೆ ಯೊಂದಿಗೆ ಓಡಿಸಲಾಗುತ್ತಿದ್ದು, ಇಲಾಖೆ ಮುಖಾಂತರ ಮಂಜೂ ರಾಗಿರುವ ಐದು ಮಂದಿ ಚಾಲಕರ ಹುದ್ದೆಗಳೂ ಇಲ್ಲಿ ಭರ್ತಿಗೊಳ್ಳ ದಿರುವದು ಬೆಳಕಿಗೆ ಬಂದಿದೆ.

ಮಾತ್ರವಲ್ಲದೆ, ಜಿ.ಪಂ. ದಾಖಲೆ ಪತ್ರ ವಿಭಾಗ ಸಿಬ್ಬಂದಿ ಸೇರಿದಂತೆ ‘ಡಿ’ ಗ್ರೂಪ್ ನೌಕರರ 18 ಹುದ್ದೆಗಳಲ್ಲಿ ಕೇವಲ ಮೂವರು ನಿಯೋಜನೆಗೊಂಡಿದ್ದು, 15 ಸ್ಥಾನಗಳು ಖಾಲಿಯಾಗಿವೆ. ಜಿ.ಪಂ. ಕಚೇರಿ ಬೈಂಡರ್ ಹುದ್ದೆ ಸಹಿತ ಒಟ್ಟು 91 ಸ್ಥಾನಗಳು ದಶಕಗಳ ಹಿಂದೆ ಮಂಜೂರಾಗಿದ್ದು, ಆ ಪೈಕಿ 69 ಖಾಲಿಯೊಂದಿಗೆ ಪ್ರಸಕ್ತ 22 ಮಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿರುವದು ಅಚ್ಚರಿಗೂ ಕಾರಣವಾಗಿದೆ.

ಮಡಿಕೇರಿ ಕೋಟೆ ಆವರಣದ ಕುಸಿಯುವ ಹಂತದ ಜಿ.ಪಂ. ಆಡಳಿತ ಕಚೇರಿಯ ದುರವಸ್ಥೆ ಯೊಂದಿಗೆ, ಬಹುತೇಕ ಖಾಲಿ ಇರುವ ಉದ್ಯೋಗಿಗಳ ನಡುವೆ ಕೈಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಕಾರ್ಯನಿರ್ವಹಣೆಯಲ್ಲಿದ್ದು, ಸಕಾಲದಲ್ಲಿ ಏನೊಂದು ಸಾಧ್ಯವಾಗು ತ್ತಿಲ್ಲವೆಂಬ ಅಸಮಾಧಾನ ಜನಪ್ರತಿನಿಧಿಗಳ ಸಹಿತ ಸಾರ್ವಜನಿಕರಲ್ಲಿ ಕೇಳಿ ಬರತೊಡಗಿದೆ. ಇತ್ತ ಸರಕಾರ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕಿದೆ.