ಸೋಮವಾರಪೇಟೆ,ಜು.2: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಯನ್ನು ನಿಗದಿಗೊಳಿಸಿರುವ ಹಿನ್ನೆಲೆಯಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲೂ ಬಿರುಸಿನ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿವೆ. ಈ ಸಾಲಿನ ಆಡಳಿತ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತೀವ್ರ ಕಸರತ್ತು ನಡೆಸುತ್ತಿದ್ದರೆ, ಆಕಾಂಕ್ಷಿಗಳು ಪಕ್ಷದ ಬೆಂಬಲಿತರಾಗಿ ಸ್ಫರ್ಧಿಸಲು ನಾಯಕರ ಬೆನ್ನು ಬಿದ್ದಿದ್ದಾರೆ.ಈಗಾಗಲೇ ಹೊರಬಿದ್ದಿರುವ ಮೀಸಲಾತಿಗೆ ಆಕ್ಷೇಪಣೆಗಳು ಸಲ್ಲಿಕೆಯಾಗಿರುವ ಹಿನ್ನೆಲೆ ಸದ್ಯಕ್ಕೆ ಆಕಾಂಕ್ಷಿಗಳ ಚಿತ್ತ ಮೀಸಲಾತಿ ಪರಿಷ್ಕರಣೆ ಪ್ರಕ್ರಿಯೆಯತ್ತ ಹರಿದಿದೆ.

ಮಹದೇಶ್ವರ ಬ್ಲಾಕ್‍ನ 9ನೇ ವಾರ್ಡ್ ಬಿಸಿಎಂ(ಬಿ)ಗೆ ಮೀಸಲಾಗಿದೆ. ಆದರೆ ಈ ಹಿಂದಿನ ಎರಡೂ ಅವಧಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಆದರೆ 2001ರಲ್ಲಿ ಇದೇ ವಾರ್ಡ್‍ಗೆ ಬಿಸಿಎಂ(ಬಿ) ನಿಗದಿಯಾಗಿತ್ತು. ನಂತರ ಮತ್ತೆ ಅದೇ ವರ್ಗಕ್ಕೆ ಮೀಸಲಾಗಿದೆ ಎಂದು ವಾರ್ಡ್‍ನ ನಿವಾಸಿ ಕೆ.ಎನ್.ಸುದೀಪ್ ಆಕ್ಷೇಪಣೆ ಸಲ್ಲಿಸಿದ್ದು, ಈ ಬಾರಿ ಸಾಮಾನ್ಯ ಅಥವಾ ಬಿಸಿಎಂ(ಎ) ವರ್ಗಕ್ಕೆ ಮೀಸಲಾತಿ ನೀಡಬೇಕೆಂದು ಮನವಿ ಮಾಡಿದ್ದಾರೆ.

ಪಟ್ಟಣದ 3ನೇ ವಾರ್ಡ್‍ಗೆ ಸಂಬಂಧಿಸಿದಂತೆ ಬಿಸಿಎಂ(ಎ) ಮಹಿಳೆಗೆ ಮೀಸಲಾತಿ ನಿಗದಿಪಡಿಸ ಲಾಗಿದೆ. ಆದರೆ ಕಳೆದ ಬಾರಿ ಪರಿಶಿಷ್ಟ (ಮಹಿಳೆ) ಇದ್ದು, ಪರಿಶಿಷ್ಟ ಜಾತಿ ಮಹಿಳೆಯರು ಯಾವ ವಾರ್ಡ್ ನಲ್ಲಿಯೂ ಸ್ಪರ್ಧಿಸಲು ಅವಕಾಶ ಕಲ್ಪಿಸಿಲ್ಲ. ಹೆಚ್ಚು ಪರಿಶಿಷ್ಟ ವರ್ಗಗಳ ಜನರು ಇರುವ ವೆಂಕಟೇಶ್ವರ ಬ್ಲಾಕ್ ಅನ್ನು ಸಾಮಾನ್ಯ ಮಹಿಳೆ ಇಲ್ಲವೇ ಸಾಮಾನ್ಯ ವರ್ಗಕ್ಕೆ ಮೀಸಲಾಗಿಸಬೇಕೆಂದು ಹಾಲಿ ಪಟ್ಟಣ ಪಂಚಾಯಿತಿ ಸದಸ್ಯೆ ಮೀನಾ ಕುಮಾರಿ ಮನವಿ ಮಾಡಿದ್ದಾರೆ.

ಪಟ್ಟಣದ ಮಾರ್ಕೆಟ್ ರಸ್ತೆಯ 11ನೇ ವಾರ್ಡ್‍ಗೆ ಮೀಸಲಾತಿಯು ಸಾಮಾನ್ಯ ಮಹಿಳೆಗೆ ನಿಗದಿ ಯಾಗಿದ್ದು, ಈ ಹಿಂದೆ ಇದೇ ವಾರ್ಡ್ ಸಂಖ್ಯೆ 6 ಇದ್ದಾಗಲೂ ಕಳೆದ ಎರಡು ಅವಧಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅದು ಮೂರನೇ ಬಾರಿಗೂ ಪುನರಾ ವರ್ತನೆಯಾಗಿದೆ ಎಂದು 11ನೇ ವಾರ್ಡ್‍ನ ನಿವಾಸಿ

(ಮೊದಲ ಪುಟದಿಂದ) ಎಸ್.ಸಂಪತ್ ಆಕ್ಷೇಪಣೆ ಸಲ್ಲಿಸಿದ್ದು, ಈ ಬಾರಿ ಬಿಸಿಎಂ(ಬಿ), ಬಿಸಿಎಂ(ಎ) ಅಥವಾ ಸಾಮಾನ್ಯ ವರ್ಗಕ್ಕೆ ಮೀಸಲಾಗಿಸಬೇಕೆಂದು ಮನವಿ ಮಾಡಿದ್ದಾರೆ.

ವಾರ್ಡ್ 2ಕ್ಕೆ ಸಂಬಂಧಿಸಿದಂತೆ ಎಸ್‍ಟಿ ಮೀಸಲಾತಿಯಿದ್ದು, ಈ ವಾರ್ಡ್‍ನಲ್ಲಿ ಪರಿಶಿಷ್ಟ ಪಂಗಡದ ಮತದಾರರು ಬೆರಳೆಣಿಕೆಯಲ್ಲಿರುವ ಹಿನ್ನೆಲೆ ಮೀಸಲಾತಿಯನ್ನು ಪುನರ್‍ಪರಿಶೀಲಿಸುವಂತೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಲು ನಿಗದಿಗೊಳಿಸಲಾಗಿದ್ದ ಅಂತಿಮ ದಿನಾಂಕ ತಾ.21ಕ್ಕೆ ಮುಕ್ತಾಯವಾಗಿದ್ದು, ಅಂತಿಮ ಅಧಿಸೂಚನೆವರೆಗೂ ಮೀಸಲಾತಿಗಾಗಿ ಕಾಯುವಂತಾಗಿದೆ.

20 ವರ್ಷಗಳ ಬಿಜೆಪಿ ಅಡಳಿತ: ಹಿಂದೆ ಪುರಸಭೆಯಾಗಿದ್ದ ಸ್ಥಳೀಯಾಡಳಿತ ನಂತರ ಮಂಡಲ ಪಂಚಾಯ್ತಿ, ಆ ನಂತರ ಪರಿವರ್ತಿತ ಮಂಡಲ ಪಂಚಾಯಿತಿಯಾಗಿ 1996 ರಲ್ಲಿ ಪ್ರಥಮವಾಗಿ ಪಟ್ಟಣ ಪಂಚಾಯ್ತಿ ಅಸ್ತಿತ್ವಕ್ಕೆ ಬಂತು. 25.7.1996 ರಂದು ಪಟ್ಟಣ ಪಂಚಾಯ್ತಿಯ ಪ್ರಥಮ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ ಕಳೆದ 20 ವರ್ಷಗಳಿಂದ ಆಡಳಿತ ನಡೆಸುತ್ತಾ ಪಂಚಾಯಿತಿಯನ್ನು ಬಿ.ಜೆ.ಪಿ. ಯ ಭದ್ರಕೋಟೆ ಮಾಡಿಕೊಂಡಿದೆ.

ಕೋಟೆ ಭೇದಿಸಲು ಕಸರತ್ತು: ಕಳೆದ 20 ವರ್ಷಗಳಿಂದ ಬಿ.ಜೆ.ಪಿ ಆಡಳಿತದ ಭದ್ರಕೋಟೆಯನ್ನು ಭೇದಿಸಲು ಈ ಬಾರಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಇನ್ನಿಲ್ಲದ ಕಸರತ್ತು ಆರಂಭಿಸಿವೆ. ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವಾಪ್ತಿಯಲ್ಲಿ ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಜಂಟಿಯಾಗಿ ಬಿಜೆಪಿ ವಿರುದ್ಧ ಹೋರಾಡುವ ತಂತ್ರಗಾರಿಕೆ ರೂಪಿಸಿದ್ದು, ಇದು ಎಷ್ಟರಮಟ್ಟಿಗೆ ಫಲಪ್ರದವಾಗುತ್ತದೆ ಎಂಬದನ್ನು ಕಾದುನೋಡಬೇಕಿದೆ.

ಮೈತ್ರಿಗೆ ಒಲವು: ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಬಿಜೆಪಿ ತೆಕ್ಕೆಯಲ್ಲಿರುವ ಆಡಳಿತವನ್ನು ಕಸಿಯುವದು ಕಷ್ಟಸಾಧ್ಯ ಎಂಬದನ್ನು ಅರಿತಿರುವ ಎರಡೂ ಪಕ್ಷಗಳ ಸ್ಥಳೀಯ ಮುಖಂಡರು, ಕೆಲ ಆಕಾಂಕ್ಷಿಗಳು ಈ ಬಾರಿ ಮೈತ್ರಿ ಮಾಡಿಕೊಂಡು ಚುನಾವಣಾ ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿವೆ. ಆದರೆ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಪಟ್ಟಿಯೂ ಅಧಿಕವಿರುವದರಿಂದ ಅಂತಿಮ ಕಸರತ್ತಿನ ಮೇಲೆ ರಾಜಕೀಯದಾಟ ನಿಂತಿದೆ.

ಈಗಾಗಲೇ ಎರಡೂ ಪಕ್ಷಗಳ ಮುಖಂಡರು ಸಭೆ ನಡೆಸಿ ಮೈತ್ರಿ ಬಗ್ಗೆ ಚರ್ಚೆ ನಡೆಸಿದ್ದು, ಜಿಲ್ಲಾ ಮಟ್ಟದ ನಾಯಕರ ಅನುಮತಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಪ.ಪಂ.ನಲ್ಲಿ 50-50 ಸೂತ್ರ ಅಳವಡಿಸಿಕೊಂಡು ಎರಡೂ ಪಕ್ಷಗಳು ಚುನಾವಣೆ ಎದುರಿಸಿದರೆ ಒಳಿತಾಗಲಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿದೆ.

ಕಳೆದ ಸಾಲಿನಲ್ಲಿ ಜೆಡಿಎಸ್‍ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ವಿಜಯಲಕ್ಷ್ಮೀ ಸುರೇಶ್ ಅವರು ಬಿಜೆಪಿ ಸೇರಿದ ಮೇಲಷ್ಟೇ ಅಧ್ಯಕ್ಷೆ ಸ್ಥಾನ ಅಲಂಕರಿಸಿದ್ದರು. ಈ ಬಾರಿಯೂ ಅವರು ಬಿಜೆಪಿಯಿಂದ ಸ್ಪರ್ಧಿಸುವ ಅಭಿಲಾಷೆ ಹೊಂದಿದ್ದಾರೆ. ಇದರೊಂದಿಗೆ ಬಹುತೇಕ ಹಾಲಿ ಸದಸ್ಯರುಗಳು ಪುನರಾಯ್ಕೆ ಬಯಸಿದ್ದು, ಮೀಸಲಾತಿಯಿಂದಾಗಿ ಹಲವರು ಪ್ರಶಸ್ತ ವಾರ್ಡ್‍ಗಳ ಹುಡುಕಾಟ ನಡೆಸುತ್ತಿದ್ದಾರೆ.

ಹಿಂದೆ ಏನಿತ್ತು? ಈಗ ಏನಿದೆ? ಆಕಾಂಕ್ಷಿಗಳಾರು?

ವಾರ್ಡ್ 1: ಬಸವೇಶ್ವರ ರಸ್ತೆ- ಈ ಮೊದಲು ಬಿಸಿಎಂ ಎ. ಇತ್ತು. ಈಗ ಸಾಮಾನ್ಯ. ಬಿಜೆಪಿ: ಸೋಮೇಶ್, ಜೆ.ಸಿ.ಶೇಖರ್, ಶಿವಕುಮಾರ್, ಗಿರೀಶ್, ಮಹೇಶ್, ಮಲ್ಲೇಶ್, ಜೆಡಿಎಸ್-ಕಾಂಗ್ರೆಸ್: ಉದಯಶಂಕರ್, ಗಿರೀಶ್, ಹೃಷಿಕೇಶ್ ಅವರುಗಳು ಸದ್ಯಕ್ಕೆ ಆಕಾಂಕ್ಷಿಗಳಾಗಿದ್ದಾರೆ. ಕಳೆದ ಬಾರಿ ಬಿ.ಎಂ. ಸುರೇಶ್ ಗೆದ್ದಿದ್ದರು.

ವಾರ್ಡ್ 2: ಬಾಣಾವರ ರಸ್ತೆ- ಈ ಮೊದಲು ಬಿಸಿಎಂ ಎ ಇತ್ತು, ಈಗ ಎಸ್‍ಟಿ. ಬಿಜೆಪಿ: ಸುಶೀಲ, ದಾಕ್ಷಾಯಿಣಿ, ಕಾಂಗ್ರೆಸ್-ಜೆಡಿಎಸ್: ಪುಷ್ಪ, ಪಾರ್ವತಿ, ಕಳೆದ ಬಾರಿ ಬಿ.ಎಂ. ಈಶ್ವರ್ ಗೆಲುವು.

ವಾರ್ಡ್ 3: ವೆಂಕಟೇಶ್ವರ ಬ್ಲಾಕ್- ಕಳೆದ ಬಾರಿ ಎಸ್‍ಸಿ ಮಹಿಳೆ, ಈ ಬಾರಿ ಬಿಸಿಎಂ ಎ ಮಹಿಳೆ, ಬಿಜೆಪಿ:ವಿಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್-ಜೆಡಿಎಸ್‍ನಿಂದ ನಳಿನಿ ಲಕ್ಷ್ಮೀಕಾಂತ್ ಆಕಾಂಕ್ಷಿಗಳು. ಕಳೆದ ಬಾರಿ ಮೀನಾಕುಮಾರಿ ಗೆಲುವು.

ವಾರ್ಡ್ 4: ರೇಂಜರ್ ಬ್ಲಾಕ್- ಬಿಸಿಎಂ ಬಿ ಮಹಿಳೆ ಮೀಸಲಾತಿಯಿತ್ತು. ಈಗ ಸಾಮಾನ್ಯ, ಬಿಜೆಪಿ: ಎನ್.ಎಸ್. ಮೂರ್ತಿ, ಸುರೇಶ್, ಬಾಲಾಜಿ, ರಾಜನ್, ಶರತ್‍ಚಂದ್ರ, ಸುಧಾಕರ್, ಎಸ್.ಎನ್. ಅಜಯ್, ಕಾಂಗ್ರೆಸ್-ಜೆಡಿಎಸ್: ಆದಂ, ಸಂಜೀವ, ಬಿ.ಟಿ.ಉದಯಕುಮಾರ್, ಸುರೇಶ್. ಕಳೆದ ಬಾರಿ ಸುಷ್ಮಾ ಶೆಟ್ಟಿ ಗೆದ್ದಿದ್ದರು.

ವಾರ್ಡ್ 5: ದೇವಸ್ಥಾನ ರಸ್ತೆ- ಎಸ್‍ಟಿ ಮಹಿಳೆ ಇತ್ತು, ಈಗ ಬಿಸಿಎಂ ಎ. ಮೀಸಲಾತಿ, ಬಿಜೆಪಿ: ಬಿ.ಎಂ. ಸುರೇಶ್, ರಾಂಪ್ರಸಾದ್, ಚೇತನ್, ಗಿರಿಧರ್, ಕಾಂಗ್ರೆಸ್-ಜೆಡಿಎಸ್: ವಿಜಯಕುಮಾರ್, ವೆಂಕಟೇಶ್. ಕಳೆದ ಬಾರಿ ಸುಶೀಲಾ ಗೆಲುವು.

ವಾರ್ಡ್ 6: ಎಂ.ಜಿ. ರಸ್ತೆ- ಕಳೆದ ಬಾರಿ ಸಾಮಾನ್ಯ. ಈ ಬಾರಿ ಎಸ್.ಸಿ., ಬಿಜೆಪಿ: ನಳಿನಿ ಗಣೇಶ್, ಚಂದ್ರು, ಕಾಂಗ್ರೆಸ್-ಜೆಡಿಎಸ್: ಮಂಜುನಾಥ್, ಹೆಚ್.ಎ. ನಾಗರಾಜ್, ಕಳೆದ ಬಾರಿ ವೆಂಕಟೇಶ್ ಗೆಲುವು.

ವಾರ್ಡ್ 7: ರೇಂಜರ್ ಬ್ಲಾಕ್-2- ಕಳೆದ ಬಾರಿ ಸಾಮಾನ್ಯ, ಈ ಬಾರಿ ಸಾಮಾನ್ಯ ಮಹಿಳೆ, ಬಿಜೆಪಿ: ವಿಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್-ಜೆಡಿಎಸ್: ನಾಗರತ್ನ(ರಾಣಿ) ಪದ್ಮ, ಕಳೆದ ಬಾರಿ ಕೆ.ಎ.ಆದಂ ಗೆಲುವು.

ವಾರ್ಡ್ 8: ಜನತಾಕಾಲೋನಿ- ಕಳೆದ ಬಾರಿ ಬಿಸಿಎಂ ಎ ಮಹಿಳೆ, ಈ ಬಾರಿ ಸಾಮಾನ್ಯ, ಬಿಜೆಪಿ: ಶುಭಾಕರ್, ಪ್ರಮೋದ್, ಬಿ.ಎಂ. ಸುರೇಶ್, ಎನ್.ಎಸ್. ಮೂರ್ತಿ, ಕಾಂಗ್ರೆಸ್: ಆದಂ, ಸಂಜೀವ, ಇಂದ್ರೇಶ್, ಮನೋಹರ್ ಎಸ್.ಎಸ್., ನಂದ ಹೆಚ್.ಎನ್., ಮಧು ಬಿ.ಎನ್., ಕಳೆದ ಬಾರಿ ವಿಜಯಲಕ್ಷ್ಮೀ ಸುರೇಶ್ ಗೆಲುವು.

ವಾರ್ಡ್ 9: ಮಹದೇಶ್ವರ ಬ್ಲಾಕ್-1: ಕಳೆದ ಬಾರಿ ಬಿಸಿಎಂ ಎ ಮಹಿಳೆ, ಈಗ ಬಿಸಿಎಂ ಬಿ. ಬಿಜೆಪಿ: ಅಜಯ್‍ಕುಮಾರ್, ಮಹೇಶ್, ಹೆಚ್.ಎನ್. ಅಶೋಕ್, ಕಾಂಗ್ರೆಸ್: ಸಂಪತ್‍ಕುಮಾರ್ (ಶಿವಣ್ಣ), ಶಿವಕುಮಾರ್. ಕಳೆದ ಬಾರಿ ಲೀಲಾ ನಿರ್ವಾಣಿ ಗೆಲುವು.

ವಾರ್ಡ್ 10: ಎಂ.ಡಿ. ಬ್ಲಾಕ್-2: ಕಳೆದ ಬಾರಿ ಸಾಮಾನ್ಯ, ಈಗ ಸಾಮಾನ್ಯ ಮಹಿಳೆ, ಬಿಜೆಪಿ: ಲೀಲಾ ನಿರ್ವಾಣಿ, ಶ್ರೀಮತಿ ಪ್ರದೀಪ್, ಶ್ರೀಮತಿ ಹರೀಶ್, ಕಾಂಗ್ರೆಸ್-ಜೆಡಿಎಸ್: ಜಯಂತಿ, ಲಕ್ಷ್ಮೀ ಮೋಹನ್, ಕಳೆದ ಬಾರಿ ರಮೇಶ್ ಗೆಲುವು.

ವಾರ್ಡ್ 11: ಮಾರ್ಕೆಟ್ ಏರಿಯಾ- ಮೂರನೇ ಅವಧಿಗೂ ಸಾಮಾನ್ಯ ಮಹಿಳೆ. ಬಿಜೆಪಿ: ಅಮಿತ, ಕಾಂಗ್ರೆಸ್-ಜೆಡಿಎಸ್‍ನಿಂದ ಶೀಲಾ ಡಿಸೋಜ, ಸಲೀನಾ. ಇದರೊಂದಿಗೆ ಇತರರೂ ಆಕಾಂಕ್ಷಿಗಳಾಗಿದ್ದು, ಪಕ್ಷೇತರರಾಗಿಯೂ ಹಲವರು ಸ್ಪರ್ಧಿಸುವ ಸಾಧ್ಯತೆ ಇದೆ.