ಮಡಿಕೇರಿ, ಜು. 2: ನಾಡಿನ ಹಿರಿಯ ಸಾಹಿತಿ, ಶಿಕ್ಷಣ ತಜ್ಞ, ಕೃಷಿಕರೂ ಆಗಿದ್ದ ಬಿಳಿಗೇರಿ ಗ್ರಾಮದ ನೀರ್ಕಜೆ ಮಹಾಬಲೇಶ್ವರ ಭಟ್ (90) ಅವರು ತಾ. 2 ರಂದು ನಿಧನರಾದರು. ಮಡಿಕೇರಿಯ ಕೇಂದ್ರ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಂತರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಭಟ್ಟರು ಕನ್ನಡ ವಿದ್ವಾನ್ ಆಗಿದ್ದರು. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಅವರು, ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತೊಡಗಿಸಿಕೊಂಡಿದ್ದರಲ್ಲದೆ, ಮೂರ್ನಾಡುವಿನಲ್ಲಿ ನಡೆದ ಮಡಿಕೇರಿ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಚೆಂಬುವಿನಲ್ಲಿ ನಡೆದ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ನಿಯುಕ್ತಿಗೊಂಡಿದ್ದರು.

ಉತ್ತಮ ಕೃಷಿಕರಾಗಿದ್ದ ಇವರು, ರಾಜಕೀಯದಲ್ಲೂ ಗುರುತಿಸಿಕೊಂಡು ಕಾಂಗ್ರೆಸ್ ಪಕ್ಷದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಬ್ರಾಹ್ಮಣ ಸಮಾಜ ಸೇರಿದಂತೆ ಇತರ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ತಮ್ಮ ಹೆಸರಿನಲ್ಲಿ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪಿಸಿ, ಸಾಹಿತ್ಯ ಚಟುವಟಿಕೆಗಳ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ಮೃತರು ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಸಂತಾಪ: ಸಾಹಿತಿ ಮಹಾಬಲೇಶ್ವರ ಭಟ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿಗಳಾದ ಡಾ. ಕೂಡಕಂಡಿ ದಯಾನಂದ, ಬಾಳೆಯಡ ಕಿಶನ್ ಪೂವಯ್ಯ, ಖಜಾಂಚಿ ಬಾಳೆಕಜೆ ಯೋಗೇಂದ್ರ, ಪದಾಧಿಕಾರಿಗಳು, ಸದಸ್ಯರು, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಕೇಶವ ಕಾಮತ್, ಪ್ರಧಾನ ಕಾರ್ಯದರ್ಶಿ ಐತಿಚಂಡ ರಮೇಶ್ ಉತ್ತಪ್ಪ, ಬಿ.ಎ. ಷಂಶುದ್ದೀನ್, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ತಾಲೂಕು ಮಾಜಿ ಅಧ್ಯಕ್ಷ ಕೆ.ಟಿ. ಬೇಬಿಮ್ಯಾಥ್ಯೂ, ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಹಾಗೂ ಪದಾಧಿಕಾರಿಗಳು, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಚಿ.ನಾ. ಸೋಮೇಶ್, ಸಿರಿಗನ್ನಡ ವೇದಿಕೆ ಹಾಗೂ ಅಲ್ಲಾರಂಡ ರಂಗ ಛಾವಡಿ ಅಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ಸೇರಿದಂತೆ ಇತರರು ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂತಾಪ ಸಭೆ: ಹಿರಿಯ ಸಾಹಿತಿ ಮಹಾಬಲೇಶ್ವರ ಭಟ್ ಅವರ ಕನ್ನಡ ನಾಡು, ನುಡಿಗಾಗಿನ ಸೇವೆಯನ್ನು ಸ್ಮರಿಸಿಕೊಳ್ಳುವ ಸಲುವಾಗಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತಾ. 3 ರಂದು (ಇಂದು)

(ಮೊದಲ ಪುಟದಿಂದ) ಪರಿಷತ್ತು ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಸಂತಾಪ ಸಭೆ ಏರ್ಪಡಿಸಲಾಗಿದೆ.

ಮಹಾಬಲೇಶ್ವರ ಭಟ್ ಅವರನ್ನು ನೆನಪು ಮಾಡಿಕೊಳ್ಳಲು ಹಾಗೂ ಸಂತಾಪ ಸೂಚಿಸಲು ಲೇಖಕ ಮತ್ತು ಕಲಾವಿದರ ಬಳಗದಿಂದ ತಾ. 4 ರಂದು ಮಧ್ಯಾಹ್ನ 3 ಗಂಟೆಗೆ ಪತ್ರಿಕಾ ಭವನದಲ್ಲಿ ಸಂತಾಪ ಸಭೆ ಏರ್ಪಡಿಸಲಾಗಿದೆ.